
ಕನ್ನಡದ ಪೈಲ್ವಾನ್ ಕಿಚ್ಚ ಸುದೀಪ್ ಅವರು ಎಂದೂ ಮಾತನಾಡದ ವಿಚಾರಗಳನ್ನು ಕನ್ನಡ ಸುದ್ದಿವಾಹಿನಿ ಬಿಟಿವಿ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಸಂದರ್ಶಕರು ಹಲವು ವಿಚಾರಗಳನ್ನು ಎಳೆದು ತಂದಾಗ ಆ ವಿಚಾರಕ್ಕೆ ಸ್ಪಷ್ಟ ವಿವರಣೆ ನೀಡಿದ್ದಾರೆ. ಸಂದರ್ಶಕರು ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಪ್ರಶ್ನಿಸಿದರು. ಆದರೆ ಕಿಚ್ಚ ಸುದೀಪ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲಿ ಜಾತಿ ಒಳ ಬರುತ್ತಿದೆ ಎಂದರು.
ಸುದೀಪ್: ಇತ್ತೀಚೆಗೆ ಎಲ್ಲೋ ಒಂದು ಫೀಲಿಂಗ್ ಬರುತ್ತೆ ಸರ್… ಎಲ್ಲೋ ಒಂದು ಕಡೆ, ಜಾತಿ ಅನ್ನೋದು ಒಳಗೆ ಬರುತ್ತಿದೆ, ಕಮ್ಯುನಿಟಿ ಅನ್ನೋದು ಒಳ ಬರುತ್ತಿದೆ. ವೈಯಕ್ತಿಕ ಕಾರಣಗಳಿಗೆ ಮತ್ತು ಲಾಭಕ್ಕಾಗಿ, ಭವಿಷ್ಯದ ಲಾಭಕ್ಕಾಗಿ ಅಂತ ನನಗೆ ಅನ್ನಿಸ್ತಿದೆ.
ಪ್ರಶ್ನೆ: ಅಣ್ಣವರು ಸಿನಿಮಾದವರು ಎಲ್ಲರೂ ಒಂದೇ ಜಾತಿ ಎಂದು ಹೇಳಿದವರು…
ಸುದೀಪ್: ಅದು ಇವತ್ತಿಗೂ ಹೇಳುತ್ತಾರೆ ಸರ್… ಆದರೆ ಅದು ನಮ್ಮ ನಡೆಯಲ್ಲಿ ತೋರಿಸಬೇಕು ಸರ್
ಪ್ರಶ್ನೆ: ಜಾತಿ ಸಮಸ್ಯೆ ಇದೆ ಅಂತೀರಾ?
ಸುದೀಪ್: ಸಮಸ್ಯೆ ಅಲ್ಲ ಸರ್… ಎಲ್ಲೋ ಜಾತಿ ಅನ್ನೋದು ಮೆತ್ತಗೆ ಒಳಗೆ ಬರ್ತಾ ಇದೆ ಅನ್ಸುತ್ತೆ… ಆದರೆ ಇದನ್ನು ನಾನು ಗ್ಯಾರೆಂಟಿಯಾಗಿ ಹೇಳುವುದಿಲ್ಲ. ಆದರೆ ಒಗ್ಗಟ್ಟು ಅನ್ನೋ ವಿಚಾರ ಬಂದ್ರೆ, ಕನ್ನಡ ಚಿತ್ರರಂಗ ಪ್ರತಿಯೊಬ್ಬರೂ ಒಟ್ಟಿಗೆ ನಿಲ್ಲುತ್ತಾರೆ. ಅದು ಇವತ್ತಿಗೂ ಕೊರತೆಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ಹೊರಗಿನಿಂದ ಯಾವುದೇ ಬಿರುಗಾಳಿ ಹೊಡೆದರೂ, ಕನ್ನಡ ಚಿತ್ರರಂಗದಲ್ಲಿ ಪರಸ್ಪರ ಏನೇ ಇರಲಿ, ಎಲ್ಲರೂ ಒಟ್ಟಿಗೆ ನಿಂತಿದ್ದಾರೆ. ಆದರೆ ಒಳಗಡೆ ಕೆಲವೊಂದು ಬಿರುಕುಗಳು ಇವೆ. ಇದನ್ನು ದುರ್ಬೀನ್ ಹಾಕಿಕೊಂಡು ಹುಡುಕಿದರೂ ಯಾಕೆ ಅಂತ ಗೊತ್ತಾಗುವುದಿಲ್ಲ.. ಇದಕ್ಕೆ ಉತ್ತರ ಸಿಗಲ್ಲ… ಅಂತೆ ಕಂತೆಗಳು ನಮ್ಮ ನಂಬಿಕೆಗಳಿಗೆ ಸರಿ ಹೋಗುವುದೂ ಇಲ್ಲ. ಇಲ್ಲಿ ಯಾವುದನ್ನೂ ಸ್ಪಷ್ಟವಾಗಲು ಸಾಧ್ಯವಾಗುತ್ತಿಲ್ಲ. ಆದರೆ ಒಂದು ಶೀತಲ ಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ. ಇವುಗಳನ್ನು ವಿಮರ್ಶೆ ಮಾಡುವ ಬದಲು, ನಮ್ಮ ಆರೋಗ್ಯವನ್ನು ನಾವು ನೋಡಿಕೊಳ್ಳುವುದು ಒಳಿತು. ನಿಮ್ಮ ಸಿನಿಮಾ ನೀವು ನೋಡಿಕೊಳ್ಳಿ, ನಿಮ್ಮ ಜೀವನ ನೀವು ನೋಡಿಕೊಳ್ಳಿ… ನಿಮ್ಮ ಬಳಿ ಬಂದಾಗ ಎಲ್ಲರಿಗೂ ಗೌರವ ಕೊಡಿ…. ನೀವು ಗೌರವ ಸಿಗುವ ಕಡೆ ಮಾತ್ರ ಹೋಗಿ… ಪ್ರೀತಿಯಿಂದ ನಾಲ್ಕು ಮಾತನಾಡಿ… ಆಸಕ್ತಿ ಹಾಕಿ ನಾಲ್ಕೈದು ಕೆಲಸ ಮಾಡೋಣ… ಶಕ್ತಿ ಮೀರಿ ಒಂದು ನಾಲ್ಕು ಜನರನ್ನು ಎತ್ತೋಣ…
ಪ್ರಶ್ನೆ: ನಾಯಕ ಕಮ್ಯುನಿಟಿಯ ಪ್ರತಿಭಟನೆ ನಡೆಯುವಾಗ ನೀವೂ ಟ್ವೀಟ್ ಮಾಡಿದ್ದೀರಿ… ಈ ಕಮ್ಯುನಿಟಿಯಲ್ಲಿ ಇಷ್ಟು ಬಡವರು ಇದ್ದಾರೆ. ಅವರಿಗೆ ಬಡ್ತಿ ಸಿಗಬೇಕು, ಮೀಸಲಾತಿ ಸಿಗಬೇಕು ಅಂತ. ನಿಮಗೆ ಬಹುತೇಕ ಕಮ್ಯುನಿಟಿಗಳ ಫಾಲೋವರ್ಸ್ ಇದ್ದಾರೆ. ಆದರೆ ಒಬ್ಬ ಕಲಾವಿದನಾಗಿ ನೀವು ಆ ರೀತಿ ಟ್ವೀಟ್ ಮಾಡಿದರೆ… ಬೇರೆ ಕಮ್ಯುನಿಟಿಗೆ ಬೇಸರವಾಗುವುದಿಲ್ಲವೇ?

ಸುದೀಪ್: ಇಲ್ಲ ಸರ್ ಅದು ಯಾರಿಗೂ ಎಫೆಕ್ಟ್ ಆಗಬಾರದು. ಆ ಟ್ವೀಟ್ ನಾನು ಜಾತಿ ಪರವಾಗಿ ಮಾಡಿಲ್ಲ ಸರ್… ಒಂದು ಉದ್ದೇಶದ ಪರವಾಗಿ ಮಾಡಿದ್ದೆ. ಹಾಗೆ ನೋಡಿದರೆ ನನಗೆ ಬೇರೆ ಯಾರಾದರೂ ಬಂದು ಸರ್ ನಮಗೆ ಸಪೋರ್ಟ್ ಮಾಡಿ ಎಂದಾಗ ನಾನು ಮಾಡಿದ್ದೇನೆ. ಬೇಧ ಭಾವಗಳು ಯಾರು ಹೇಳುತ್ತಿದ್ದಾರೋ ಅವರಲ್ಲಿ ಮಾತ್ರ ಕಾಣಿಸಿಕೊಳ್ಳಬಹುದು. ಯಾಕೆಂದರೆ ನೀವು ಈಗ ತಪ್ಪುಗಳನ್ನು ಹುಡುಕಲು ಆರಂಭಿಸಿದ್ದೀರಿ. ಬೇರೆಯವರು ಇಲ್ವಾ ಅಂತ ಕೇಳುವುದೇ ಆದರೆ, ನಾನು 18, 20 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇನೆ. ಅದೆಲ್ಲವೂ ನಾಯಕ ಜನಾಂಗ ಅಲ್ಲ. 2-3 ಸ್ಕೂಲ್ ನಡೆಸ್ತಾ ಇದ್ದೇನೆ ಅದರಲ್ಲೂ ಬರೇ ನಾಯಕ ಕಮ್ಯುನಿಟಿ ಇದ್ದಾರಾ? ವೃದ್ಧಾಶ್ರಮ ನಡೆಸ್ತಾ ಇದ್ದೀನಿ, ಅಲ್ಲೂ ನಾಯಕ ಕಮ್ಯುನಿಟಿಯವರೇ ಇರೋದಲ್ಲ… ಬಡ ವಿದ್ಯಾರ್ಥಿಗಳಿಗೆ ಬುಕ್, ಶೂ ಇವೆಲ್ಲ ಕೊಡುತ್ತಿದ್ದೇನೆ ಅದ್ಯಾವುದೂ ಜಾತಿ ಕಮ್ಯುನಿಟಿ ನೋಡಿ ಕೊಡುತ್ತಿಲ್ಲ.
ಪ್ರತಿ ಕಮ್ಯುನಿಟಿಯಲ್ಲೂ ಮಕ್ಕಳಿದ್ದಾರೆ. ಎಲ್ಲರೂ ಈ ರೀತಿಯ ಹೋರಾಟಗಳನ್ನು ಮಾಡ್ಲೇ ಬೇಕು. ಇಂದು ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಸಿಕ್ಕಿದರೆ, ನಾಳೆ ಅವರು ಒಳ್ಳೆಯ ಪ್ರಜೆಗಳಾಗುತ್ತಾರೆ. ಇಲ್ಲವಾದರೆ, ಅಲ್ಲೇ ಏನಾದರೂ ಅವರು ಮಾಡುತ್ತಿರಬೇಕಾಗುತ್ತದೆ. ಅದರಲ್ಲಿ ಒಳ್ಳೆಯ ದಾರಿ ಹಿಡಿಯುತ್ತಾರೋ, ಬೇರೆ ದಾರಿ ಹಿಡಿತಾರೋ ನಮಗೆ ಅದು ಗೊತ್ತಿಲ್ಲ…. ವಿದ್ಯಾರ್ಥಿಗಳ ಪರವಾಗಿ ನಾನು ಬೆಂಬಲಿಸಿರುವುದು ಚಿಕ್ಕ ವಿಚಾರ. ಹಾಗಿದ್ದರೆ ಮಿಕ್ಕಿದವರೆಲ್ಲ ಏನು ಮಾಡುತ್ತಿದ್ದಾರೆ ಸರ್… ಎಲ್ಲಾನೂ ಸುದೀಪ್ ನನ್ನೇ ಡಿಪೆಂಡ್ ಆಗಿದ್ಯಾ? ನನ್ನ ಕಡೆಯಿಂದ ಇಂತಹ ಸಹಾಯ ಆದ್ರೆ ಅನುಕೂಲ ಆಗುತ್ತದೆ ಎಂದು ಯಾರಾದರೂ ಸಲಹೆ ನೀಡಿದಾಗ, ನಾನು ಪ್ರತಿಯೊಬ್ಬರಿಗೂ ಸ್ಪಂದಿಸಿದ್ದೇನೆ. ನಮ್ಮ ಮುಸಲ್ಮಾನ ಸ್ನೇಹಿತರಿಗೂ ಸ್ಪಂದಿಸಿದ್ದೇನೆ. ನಾನು ಯಾವುದೇ ಕಮ್ಯುನಿಟಿಯನ್ನು ಬಳಸಿಕೊಂಡು ರಾಜಕೀಯ ಮಾಡಿಲ್ಲ.
ಬಿಟಿವಿ ನಡೆಸಿದ ಸಂದರ್ಶನ ಹಾಗೂ ಕಿಚ್ಚ ನೀಡಿರುವ ಉತ್ತರಗಳು ಬಹಳ ಮೌಲ್ಯಯುತವಾಗಿತ್ತು. ದರ್ಶನ್ ಹಾಗೂ ಕಿಚ್ಚನ ನಡುವಿನ ಸ್ನೇಹದೊಳಗಿನ ಒಡಕುಗಳನ್ನು ಮನರಂಜನೆಯಂತೆ ತೋರಿಸಿದ ಮಾಧ್ಯಮಗಳ ನಡುವೆ ಬಿಟಿವಿಯಲ್ಲಿ ಕಿಚ್ಚ ಹಾಗೂ ಸಂದರ್ಶನಕರ ನಡುವೆ ನಡೆದ ಮಾತುಕತೆ ಬಹಳ ಸ್ವಾರಸ್ಯಕರವಾಗಿತ್ತು. ಯಾವುದೇ ಒಂದು ವ್ಯವಸ್ಥೆಯೊಳಗೆ ಜಾತಿ, ಧರ್ಮಗಳು ನುಸುಳಿದಾಗ, ತಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬರುತ್ತದೋ ಎಂದು ಬಾಯಿ ಮುಚ್ಚಿಕೊಂಡು ಸುಮ್ಮನೆ ಕೂರುವವರ ನಡುವೆ, ಕಿಚ್ಚ ಸುದೀಪ್ ಅವರ ಮಾತುಗಳು ಮಾದರಿಯಾಗಿ ಕಂಡಿತು.