Monday, July 26 , 2021
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ ಸೀಮಿತವಾಗದಿರಲಿ | ಸಾಹಿತಿಗಳು ಈ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕಿದೆ

ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸದಸ್ಯರು ಹಿರಿಯ ಸಾಹಿತಿ ಹಾಗೂ ಚಿಂತಕ ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.  ಸಾಹಿತಿ ದೊಡ್ಡರಂಗೇ ಗೌಡ, ಸಾಹಿತಿ ಗೊ ರು ಚನ್ನಬಸಪ್ಪ ಇವರೂ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ವಿರೋಧಿಸಿದ್ದಾರೆ.

ಸಾಹಿತಿಗಳ ಅಭಿಪ್ರಾಯಗಳು ಹೀಗಿವೆ;

ಇಂಗ್ಲೀಷ್ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕೂಡಲೇ ಹಿಂದಿನ ಸರ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಉಳಿಸಬೇಕು. ನಾವು ಯಾರು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ ಆದರೆ ಒಂದು ಶಿಕ್ಷಣ ಮಾದ್ಯಮವಾಗಿ ಕಲಿಯಲು ನಮ್ಮ ವಿರೋಧವಿದೆ. ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವವರ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇದೆ ಹಾಗಾಗಿ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವತ್ತ ಸರ್ಕಾರ ಗಮನ ಹರಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡದೆ ಒಂದನೇ ತರಗತಿಯಿಂದ 7ನೇ ತರಗತಿವರೆಗೆ ಯಾವುದೇ ರೀತಿಯ ಭಾಷೆ ಬದಲಾವಣೆ ಆಗದಂತೆ ಹೊಸ ಕಾನೂನು ರಚನೆ ಮಾಡಬೇಕು.

ಸಾಹಿತಿಗಳು ಉತ್ತರಿಸಬೇಕಾದ ಪ್ರಶ್ನೆಗಳೇನು?

ಇಂಗ್ಲಿಷ್ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗಿದ್ದರೂ, ಖಾಸಗಿ ಆಂಗ್ಲ ಮಾಧ್ಯಮಗಳನ್ನು ಮುಚ್ಚಲು ಸಾಹಿತಿಗಳು ಯಾಕೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಲ್ಲ? ಸಾಹಿತಿಗಳು ಹೇಳಿರುವಂತೆ ಅವರು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ. ಆದರೆ ಇಂಗ್ಲಿಷ್ ಮಾದ್ಯಮದ ವಿರೋಧಿಗಳು. ಸರಕಾರಿ ಶಾಲೆಯಲ್ಲಿ ಇಂಗ್ಲಿಷ್ ನ್ನು ಒಂದು ಭಾಷೆಯಾಗಿ ಮಾತ್ರ ಕಲಿತರೆ, ಸರಕಾರಿ ಶಾಲಾ ಮಕ್ಕಳು ಈ ಸ್ಪರ್ಧಾತ್ಮಕ ಜಗತ್ತಿನ ಸ್ಪರ್ಧೆಗೆ ಎದೆಯೊಡ್ಡುವುದು ಹೇಗೆ? ನೀವು ಇಂಗ್ಲಿಷ್ ಭಾಷೆಯ ವಿರೋಧಿಗಳು ಅಲ್ಲವೆಂದರೆ, ಬಡವರ ವಿರೋಧಿಗಳೇ? ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ, ಶ್ರೀಮಂತರ ಮಕ್ಕಳಿಗೆ ಕಷ್ಟವಾಗುತ್ತದೆ ಎನ್ನುವ ಪರಿಕಲ್ಪನೆ ನಿಮ್ಮದೇ? ಸರಕಾರಿ ಶಾಲೆಗಳಿಗೆ ಹೋಗುವವರ ಸಂಖ್ಯೆ ಕಡಿಮೆ ಇದೆ ಎನ್ನುವ ವಾದವಿದೆ. ಇದಕ್ಕೆ ಕಾರಣ ಬಹುತೇಕ ಸರಕಾರಿ ಶಾಲೆಗಳಿಗೆ ಸರಕಾರ ಸರಿಯಾದ ಮೂಲಭೂತ ಸೌಕರ್ಯಗಳನ್ನೂ ಒದಗಿಸುತ್ತಿಲ್ಲ. ಹಾಗಿದ್ದರೆ ಸರಕಾರಿ ಶಾಲಾ ಮಕ್ಕಳ ಭವಿಷ್ಯದ ಪ್ರಶ್ನೆಯೇನು? ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೆ, ಸಣ್ಣಪುಟ್ಟ ಹುದ್ದೆಗಳನ್ನು ನಿರ್ವಹಿಸುವಂತಹ ಯೋಗ್ಯತೆಯನ್ನು ಮಾತ್ರ ಹೊಂದಬೇಕು ಎನ್ನುವುದು ಸಾಹಿತಿಗಳ ಚಿಂತನೆಯೇ? ಸಾಹಿತಿಗಳೇ ಹೇಳುವಂತೆ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಣ ನೀಡಲು ಸರಕಾರ ಮುಂದಾಗಬೇಕು. ಇದರಿಂದ ಕನ್ನಡ ಉಳಿಯುತ್ತದೆ ಎಂದಾದರೆ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೂ ಕನ್ನಡ ಶಿಕ್ಷಣ ನೀಡಿ ಕನ್ನಡ ಭಾಷೆಯನ್ನು ಉಳಿಸಬಹುದಲ್ಲವೇ? ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ಯಾವುದೇ ಭಾಷೆ ಬದಲಾಗದಂತೆ ಹೊಸ ಕಾನೂನು ರೂಪಿಸಬೇಕು ಎಂದು ಸಾಹಿತಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಮನವಿಗಳು ಸಾಹಿತಿಗಳಿಂದ ಯಾಕೆ ಕೇಳಿ ಬಂದಿಲ್ಲ?

ಬಡಮಕ್ಕಳನ್ನು ಆಂಗ್ಲ ಶಿಕ್ಷಣದಿಂದ ವಂಚಿಸುವ ಹುನ್ನಾರ?

ಕನ್ನಡ ಉಳಿಸುವ ನೆಪದಲ್ಲಿ ಬಡಮಕ್ಕಳನ್ನು ಆಂಗ್ಲ ಶಿಕ್ಷಣದಿಂದ ವ್ಯವಸ್ಥಿತವಾಗಿ ವಂಚಿಸುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕನ್ನಡ ಉಳಿಕೆಗಾಗಿ ಸರಕಾರ ನಿಜವಾಗಿಯೂ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಸರಕಾರದ ಮುಂದೆ ಮಂಡಿಸಲು ಕನ್ನಡ ಪರ ಹೋರಾಟಗಾರರು ಹಾಗೂ ಸಾಹಿತಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆಂಗ್ಲ ಶಿಕ್ಷಣದ ವಿರುದ್ಧವೇ ಈವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಸಾಹಿತಿಗಳು ಕನ್ನಡ ಉಳಿಸಲು ಸರಕಾರ ಮಟ್ಟದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ವಿಚಾರಗಳನ್ನು ಹೋರಾಟಗಾರರು, ಸಾಹಿತಿಗಳು ಯಾಕೆ ಇಡುತ್ತಿಲ್ಲ ಎನ್ನುವ ಪ್ರಶ್ನೆಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ.

ಕನ್ನಡ ಉಳಿಕೆ ಅಗತ್ಯ ಆದರೆ ಬಡ ಮಕ್ಕಳಿಗೆ ಸೀಮಿತವಾಗದಿರಲಿ

ಕರ್ನಾಟಕದಲ್ಲಿ ಕನ್ನಡ ಭಾಷೆಯ ಉಳಿಕೆ ಅತ್ಯಗತ್ಯವಾಗಿದೆ. ಆದರೆ ಆಂಗ್ಲ ಮಾಧ್ಯಮ ಸರಕಾರಿ ಶಾಲೆಯಿಂದ ಕನ್ನಡ ನಾಶವಾಗುತ್ತದೆ ಎನ್ನುವ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಒಂದು ಹಲವು ಭಾಷೆಗಳನ್ನೊಳಗೊಂಡ ವಿಶೇಷ ರಾಜ್ಯವಾಗಿದೆ. ಕನ್ನಡ ಭಾಷೆ ಇಲ್ಲಿ ವಾಸಿಸುತ್ತಿರುವ ಎಲ್ಲರ ಮಾತೃ ಭಾಷೆಯಾಗಿ ಉಳಿದಿಲ್ಲ. ಮಂಗಳೂರು ಭಾಗಕ್ಕೆ ಹೋದರೆ, ತುಳು, ಬ್ಯಾರಿ ಭಾಷೆ, ಕೊಂಕಣಿ, ಉರ್ದು ಹೀಗೆ ವಿವಿಧ ಭಾಷೆಗಳು ಅಲ್ಲಿನ ಜನರ ಮಾತೃ ಭಾಷೆಯಾಗಿದೆ. ಕುಂದಾಪುರಕ್ಕೆ ಹೋದರೆ, ಕುಂದಾಪುರ ಕನ್ನಡ ಅಲ್ಲಿನ ಜನರ ಮಾತೃ ಭಾಷೆಯಾಗಿದೆ. ಹೀಗೆ ರಾಜ್ಯದಲ್ಲಿ ಕನ್ನಡದಲ್ಲೇ ಹಲವು ವಿಧದ ಕನ್ನಡ ಮಾತನಾಡುವವರಿದ್ದಾರೆ. ಕನ್ನಡವನ್ನು ಮಾತೃ ಭಾಷೆಯಾಗಿ ಘೋಷಿಸುವುದು ಅಷ್ಟು ಸುಲಭದ ಸಂಗತಿ ಅಲ್ಲ. ಆದರೆ, ಕರ್ನಾಟಕದ ಯಾವ ಮೂಲೆಗೆ ಹೋದರೂ ಕನ್ನಡ ಮಾತನಾಡುವವರು ಸಿಗುತ್ತಾರೆ. ಕನ್ನಡದ ಬಗ್ಗೆ ಭಾಷಾಭಿಮಾನ ಮೆರೆಯುವವರು ಸಿಗುತ್ತಾರೆ. ಹಾಗಾಗಿ ಕರ್ನಾಟಕದಲ್ಲಿ ಕನ್ನಡ ಭಾಷೆ ಇನ್ನೂ ಜೀವಂತವಾಗಿ ಸಂವೃದ್ಧವಾಗಿ ಉಸಿರಾಡುತ್ತಿದೆ. ಕರ್ನಾಟಕದಲ್ಲಿ ಯಾವುದೇ ಭಾಷೆಯವರು ಬಂದಿದ್ದರೂ, ಕನ್ನಡ ಕಲಿಯದೇ ಸಂಪೂರ್ಣವಾಗಿ ವ್ಯವಹರಿಸಲು ಸಾಧ್ಯವಿಲ್ಲ ಎನ್ನುವುದು ವಾಸ್ತವ. ಈ ಎಲ್ಲ ವಾಸ್ತವಾಂಶಗಳನ್ನು ಅರಿತು ಕರ್ನಾಟಕದ ಗೌರವಾನ್ವಿತ ಹೋರಾಟಗಾರರು, ಸಾಹಿತಿಗಳು ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯುವುದನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಬದಲಾಗಿ, ಕನ್ನಡ ಭಾಷೆಯನ್ನು ಉಳಿಸಲು ಸರಕಾರಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ, ಕನ್ನಡ ಶಾಲೆಗಳ ಬಡ ಮಕ್ಕಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಸರಕಾರದ ಮೇಲಿದೆ.

ಬಡ ಮಕ್ಕಳಿಗೆ ಮಾತ್ರ ಕನ್ನಡ ಉಳಿಸುವ ಜವಾಬ್ದಾರಿ ಏಕೆ?

ಸಾಹಿತಿಗಳು, ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯುವುದರಿಂದ ಕನ್ನಡ ಅವನತಿಯಾಗುತ್ತದೆ ಎನ್ನುವ ವಾದ ಮಂಡಿಸಿದ್ದಾರೆ. ಆದರೆ, ಸರಕಾರಿ ಶಾಲೆಯಲ್ಲಿ ಮಕ್ಕಳ ಕೊರತೆಯಾಗಿ, ಶಾಲೆಗಳನ್ನು ಮುಚ್ಚುವ ಮತ್ತು ವಿಲೀನ ನಡೆಸುವ ಕ್ರಮಗಳನ್ನು ಸರಕಾರ ಪ್ರತಿ ವರ್ಷ ಕೈಗೊಳ್ಳುತ್ತಿದೆ. ಸರಕಾರಿ ಶಾಲೆಯಲ್ಲಿ ಮಕ್ಕಳೇ ಇಲ್ಲವಾದರೆ ಕನ್ನಡವನ್ನು ನೀವು ಯಾರಿಗೆ ಕಲಿಸಲು ಸಾಧ್ಯ? ಎನ್ನುವ ಪ್ರಶ್ನೆಗಳಿಗೆ ಸಾಹಿತಿಗಳು ಉತ್ತರಿಸಬೇಕಿದೆ. ಇಲ್ಲಿ ಯಾರೂ ಕನ್ನಡವನ್ನು ನಿರ್ಲಕ್ಷಿಸಿ ಎಂದು ಹೇಳುತ್ತಿಲ್ಲ. ಇಂದು ಯಾವುದೇ ಹುದ್ದೆಗೆ ಸೇರ ಬೇಕಿದ್ದರೂ ಇಂಗ್ಲಿಷ್ ಭಾಷೆ ಅತ್ಯವಶ್ಯಕವಾಗಿದೆ. ಕೇವಲ ಕನ್ನಡ ಭಾಷೆಯಲ್ಲಿ ಪ್ರವೀಣರಾಗಿದ್ದರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನವ ಪೀಳಿಗೆ ಹೋರಾಡುವುದು ಬಹಳ ಕಷ್ಟಕರವಾಗಿದೆ. ಕನ್ನಡ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ತಮ್ಮನ್ನು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಬೇಕಾದರೆ ಇಂಗ್ಲಿಷ್ ಭಾಷೆಯ ಜ್ಞಾನ ಅತ್ಯವಶ್ಯಕವಾಗಿದೆ. ಇಂಗ್ಲಿಷ್ ಭಾಷೆಯನ್ನು ಕನ್ನಡ ಮಾಧ್ಯಮಗಳಲ್ಲಿ ಕೇವಲ ಒಂದು ಭಾಷೆಯಾಗಿ ಕಲಿಸಿದರೆ, ಬದಲಾಗಿರುವ ಸ್ಪರ್ಧಾತ್ಮಕ ಜಗತ್ತನ್ನು ವಿದ್ಯಾರ್ಥಿಗಳು ಎದುರಿಸಲು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸ್ಪಷ್ಟವಾಗಿದೆ. ಹಾಗಾಗಿ ಕನ್ನಡ ಉಳಿಕೆ ಕೇವಲ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಹೆಗಲಿಗೆ ಹಾಕದೇ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಮೇಲೂ ಈ ಜವಾಬ್ದಾರಿಯನ್ನು ಹಾಕಬೇಕಿರುವುದು ಸರಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಯಾವುದೇ ಕಾರಣಕ್ಕೆ ಸರಕಾರ ತೆಗೆದುಕೊಳ್ಳದೇ, ಬಡಮಕ್ಕಳಿಗೆ ನೀಡಿರುವ ಈ ಉತ್ತಮ ಅವಕಾಶವನ್ನು ಕಸಿದುಕೊಳ್ಳದಂತೆ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಜನಾಭಿಪ್ರಾಯ ಸಂಗ್ರಹಿಸಲಿ

ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತೆರೆಯುವ ವಿಚಾರವಾಗಿ ಕೆಲವೇ ಸಾಹಿತಿಗಳ ಮಾತಿಗೆ ಮನ್ನಣೆ ನೀಡದೇ, ಸರಕಾರ ಜನಾಭಿಪ್ರಾಯ ಸಂಗ್ರಹಿಸುವ ಮೂಲಕ ಬಡ ಮಕ್ಕಳಿಗೆ ನ್ಯಾಯ ನೀಡಬೇಕಿದೆ. ಕನ್ನಡ ಉಳಿಕೆಗೆ ಸರಕಾರ ಕೆಲವು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಿ. ಕರ್ನಾಟಕದಲ್ಲಿ, ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸಬೇಕಾದರೂ ಕನ್ನಡ ಭಾಷಾ ಜ್ಞಾನ ಕಡ್ಡಾಯ ಎನ್ನುವ ನೀತಿಯನ್ನು ಸರಕಾರ ಜಾರಿಗೊಳಿಸಲಿ. ಆಗ ತನ್ನಿಂದ ತಾನೆ ಕನ್ನಡ ಕಲಿಕೆ ಬಿರುಸುಗೊಳ್ಳುತ್ತದೆ. ಜೊತೆಗೆ ಸರಕಾರಿ ಆಂಗ್ಲ ಮಾಧ್ಯಮ ತೆರೆಯುವದರಿಂದ ಸರಕಾರಿ ಶಾಲೆಗಳಿಗೆ ಹೆಚ್ಚಿನ ಮನ್ನಣೆ ದೊರಕುತ್ತದೆ. ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಗಳು ದೊರಕಿದಾಗ ಮುಚ್ಚಿರುವ ಸರಕಾರಿ ಶಾಲೆಗಳನ್ನು ಮತ್ತೆ ಆರಂಭಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಈ ರೀತಿಯ ಯೋಜನೆಗಳನ್ನು ಸಿದ್ಧಪಡಿಸಲು ತಜ್ಞರ ಸಲಹೆ ಪಡೆದು ಸರಕಾರ ಮುಂದಾಗ ಬೇಕಿದೆ. ಖಾಸಗಿ ಶಾಲೆಗಳ ಅಸ್ತಿತ್ವ ಉಳಿಸಲು ಸರಕಾರ ಸರಕಾರಿ ಶಾಲೆಗಳ ಮೇಲೆ ಬರೆ ಹಾಕುವ ಕ್ರಮವನ್ನು ಕೈ ಬಿಟ್ಟು ಬಡ ಮಕ್ಕಳಿಗೆ ನ್ಯಾಯ ಒದಗಿಸಬೇಕಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]