
ಬೆಂಗಳೂರು (27-11-2020): ಇತ್ತೀಚೆಗೆ ತೆರೆಕಂಡ ಕನ್ನಡ ಚಿತ್ರ ಆ್ಯಕ್ಟ್-1978 ಸಿನಿಮಾರಂಗದ ದಿಗ್ಗಜರುಗಳಿಂದ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಬಹಳಷ್ಟು ಮಂದಿ ಸೆಲೆಬ್ರಿಟಿಗಳು ಚಿತ್ರ ನೋಡಿ ಮನಸಾರೆ ಹೊಗಳಿದ್ದಾರೆ. ಇದೀಗ ಈ ಸಾಲಿಗೆ ನಾದಬ್ರಹ್ಮ ಡಾ.ಹಂಸಲೇಖ ಸೇರ್ಪಡೆಯಾಗಿದ್ದಾರೆ.
ಡಾ.ಹಂಸಲೇಖ ಅವರು ಲಾಕ್ ಡೌನ್ ನಂತರ ಮೊದಲ ಭಾರಿಗೆ ಚಿತ್ರ ನೋಡಲು ಓರಾಯನ್ ಮಾಲ್ ಗೆ ಭೇಟಿ ನೀಡಿ ಆ್ಯಕ್ಟ್-1978 ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಿ ಆಪ್ತರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಂಸಲೇಖ ಅವರು ಮಾತನಾಡುತ್ತಾ “ಪೋಸ್ಟರ್ ಮತ್ತು ಸಿನಿಮಾ ಬಹಳ ಕುತೂಹಲದಿಂದ ನನ್ನನ್ನು ಚಿತ್ರಮಂದಿರದ ಒಳಗೆ ಕರೆದೊಯ್ಯಿತು. ತುಂಬಾ ದಿನಗಳ ನಂತರ ಚಿತ್ರಮಂದಿರದ ಒಳಗೆ ಹೋಗಿದ್ದು ಬಹಳ ಸಂತೋಷವಾಯಿತು. ಇದೊಂದು ಅದ್ಭುತವಾದ ಕನ್ನಡ ಸಿನಿಮಾ ಕೊರೊನಾ ನಂತರ ನಮ್ಮನ್ನು ಸ್ವಾಗತ ಕೋರುತ್ತಿದೆ. ನಿರ್ದೇಶಕ ಮಂಸೋರೆ ಅದ್ಭುತವಾದ ಸಿನೆಮಾ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗಿನಿಂದ ಮಧ್ಯಂತರದವರೆಗೂ, ನಂತರ ಸಿನಿಮಾ ಮುಗಿಯುವವರೆಗೂ ನಾನು ಕಣ್ಣಿನಿಂದ ಸಿನಿಮಾ ನೋಡಲಿಲ್ಲ, ಹೃದಯದಿಂದ ಸಿನಿಮಾ ನೋಡಿದೆ. ಒಂದೊಳ್ಳೆಯ ಕಥಾವಸ್ತು, ಚೆಂದದ ಸ್ಕ್ರೀನ್ ಪ್ಲೇ ಹೊಂದಿದೆ ಅದ್ಭುತವಾದ ಸಿನೆಮಾ. ಚಿತ್ರ ನೋಡುತ್ತಿರುವ ಪ್ರತಿಯೊಬ್ಬರೂ ಸಹ ಲಂಚ, ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ನಾವು ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿರುವವರೆ. ಒಟ್ಟಾರೆ ಹೇಳಬೇಕೆಂದರೆ ಇದು ಕನ್ನಡದ ಗೌರವವನ್ನು ಹೆಚ್ಚಿಸುವ ಸಿನಿಮಾ. ಎಲ್ಲರೂ ಇದನ್ನು ತಪ್ಪದೇ ನೋಡಬೇಕು” ಎಂದರು.