Monday, July 26 , 2021
ಒಳಮೀಸಲಾತಿಯ ಒಡಲಾಳ: ಸದಾಶಿವ ಆಯೋಗದ ವರದಿ, ಸವಾಲುಗಳು ಮತ್ತು ಭವಿಷ್ಯ| ಡಾ.ಶ್ರೀನಿವಾಸ್.ಜಿ

1911 ರ ಜನಗಣತಿಯಲ್ಲಿ ಸಾಮಾಜಿಕ ಸ್ಥಾನಮಾನಗಳಿಂದ ವಂಚಿತರಾದ ಸಮುದಾಯಗಳನ್ನು  “ಅಸ್ಪೃಶ್ಯರು” ಎಂದು ಮೊಟ್ಟಮೊದಲ ಬಾರಿಗೆ ಗುರುತಿಸಲಾಯಿತು.  1931ರ ಜನಗಣತಿಯಲ್ಲೂ ಸಹ ಅಸ್ಪೃಶ್ಯತೆ ಹಾಗು ಸಾಮಾಜಿಕ ತಾರತಮ್ಯಗಳಿಂದ ಬಳಲುತ್ತಿದ್ದ ಸಮುದಾಯಗಳನ್ನು “ಪರಿಶಿಷ್ಟ ಜಾತಿಗಳು” ಎಂದು ಗುರುತಿಸಲಾಯಿತು.  ಬಾಬಾ ಸಾಹೇಬ್‌
ಡಾ‌. ಬಿ.ಆರ್‌ ಅಂಬೇಡ್ಕರರು 1918 ರಿಂದ 1951 ರವರೆಗೆ ಪರಿಶಿಷ್ಟ ಜಾತಿಗಳು ಹಾಗು ಹಿಂದುಳಿದ ವರ್ಗಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ಮಾಡಿದರು.  1930-1932 ರ ನಡುವೆ ಲಂಡ‍ನ್ನಿನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಗಳಲ್ಲಿ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರವರಿಗೆ ಬಾಬಾ ಸಾಹೇಬರು ಮನವರಿಕೆ ಮಾಡಿಕೊಡಲಾಗಿ ರಾಜಕೀಯ ಮೀಸಲಾತಿ ದೊರಕಿತು.  ಸಂವಿಧಾನದ ಅನುಚ್ಚೇದ 330 ಹಾಗು 332 ರಲ್ಲಿ ಲೋಕಸಭೆ ಹಾಗು ರಾಜ್ಯ ವಿಧಾಸಭೆಗಳಲ್ಲಿ ಕ್ರಮವಾಗಿ ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಪ್ರಾತಿನಿಧ್ಯ ದೊರಕಿತು.  ಬಾಬಾ ಸಾಹೇಬ್ ಅಂಬೇಡ್ಕರರ ಹೋರಾಟದ ಫಲವಾಗಿ ಈ ಸಮುದಾಯಗಳಿಗೆ ಶಿಕ್ಷಣ ಹಾಗು ಉದ್ಯೋಗಾವಕಾಶಗಳನ್ನು  ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಅನುಚ್ಚೇದ 15(4) ಹಾಗು 16 (4) ರಲ್ಲಿ ಕ್ರಮವಾಗಿ ನೀಡಲಾಗಿದೆ.

ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನದ ಸವಲತ್ತುಗಳಿಂದ ಪರಿಶಿಷ್ಟ ಜಾತಿಗಳ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕ ಅಭಿವೃಧ್ಧಿಯ ಪ್ರಮಾಣ ಹೆಚ್ಚಾಗುತ್ತಾ ಹೋಯಿತು.  ಪರಿಣಾಮವಾಗಿ ಕೇಂದ್ರ ಹಾಗು ರಾಜ್ಯಗಳ ರಾಜಕೀಯ ದಿಕ್ಕೇ ಬದಲಾಯಿತು.  ಇದರ ಪರಿಣಾಮವನ್ನು ಕರ್ನಾಟಕ ರಾಜ್ಯದಲ್ಲಿ ನಾವು ಕಾಣಬಹುದು.

1972 ರಲ್ಲಿ L. G ಹಾವನೂರು ಆಯೋಗದ ವರದಿಯ ಶಿಫಾರಸ್ಸಿನಂತೆ ಸ್ಪೃಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಮ ಇತರ ಜಾತಿಗಳು ಸೇರಿದಂತೆ 11 ಹೊಸಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಲಾಗಿ, ಈಗ ರಾಜ್ಯದಲ್ಲಿ ಒಟ್ಟು 101ಪರಿಶಿಷ್ಟ ಜಾತಿಗಳಿವೆ.  2011 ರ ಜನಗಣತಿ ಪ್ರಕಾರ ಇವರ ಒಟ್ಟು ಜನಸಂಖ್ಯೆ 10474992 (18%) ರಷ್ಟಿದೆ.  ಇವರಲ್ಲಿ ಶೇ. 38 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.  ಶೇ. 2 ಕ್ಕಿಂತ ಕಡಿಮೆ ಮಂದಿ ಭೂ ಒಡೆತನ ಹೊಂದಿದ್ದಾರೆ.  ಇವರಲ್ಲಿರುವ ಶೇ. 83 ರಷ್ಟಿರುವ ಭೂಮಿ ನೀರಾವರಿ ಭೂಮಿಯಲ್ಲ ಹಾಗು ಅದು ಉತ್ಪಾದಕತೆಗೂ ಯೋಗ್ಯವಲ್ಲ.  ರಾಜ್ಯದ ಶೇ. 52 ರಷ್ಟಿರುವ ಹಿಂದುಳಿದ ವರ್ಗಗಳು ಶೇ. 33.4 ರಷ್ಟು ಭೂ ಒಡೆತನ ಹೊಂದಿದ್ದು, ಕೇವಲ ಶೇ. 3 ರಷ್ಟಿರುವ ಮೇಲ್ವರ್ಗಗಳು ಶೇ. 52.4 ರಷ್ಟು ಕೃಷಿ ಭೂಮಿಯ ಒಡೆತನವನ್ನು ಹೊಂದಿವೆ.
ಹಿಂದುಳಿದ ವರ್ಗಗಳ ಮೀಸಲಾತಿಯಡಿಯಲ್ಲಿ ರಾಜ್ಯದ ಪ್ರಬಲ ಸಮುದಾಯಗಳಾಗಿರುವ ಒಕ್ಕಲಿಗರು Category: III-A= 4% ರಷ್ಟು, ಲಿಂಗಾಯಿತರು Category: III-B= 5% ರಷ್ಟು ಮೀಸಲಾತಿಯನ್ನು ಪಡೆದಿದ್ದಾರೆ.   ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 52 ರಷ್ಟಿರುವ ಹಿಂದುಳಿದ ವರ್ಗಗಳು, ಶೇ. 18 ರಷ್ಟಿರುವ ಪರಿಶಿಷ್ಟ ಜಾತಿಗಳು, ಶೇ. 7 ರಷ್ಟಿರುವ ಪರಿಶಿಷ್ಟ ಪಂಗಡಗಳು ಒಟ್ಟು ಶೇ. 50 ರಷ್ಟು ಮೀಸಲಾತಿ ಪಡೆದರೆ, ಶೇ. 15 ರಷ್ಟಿರುವ ಮೇಲ್ವರ್ಗಗಳು ಉಳಿದ ಶೇ. 50 ರಷ್ಟಿರುವ ಅವಕಾಶಗಳನ್ನು ಪಡೆಯುತ್ತಿರುವುದು ದುರಂತವೇ ಸರಿ.  ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 18 ರಷ್ಟಿರುವ ಪರಿಶಿಷ್ಟ ಜಾತಿಗಳಿಗೆ, ಇದುವರೆಗೂ ಶೇ. 10 ರಷ್ಟು ಮೀಸಲಾತಿ ದೊರಕಿದ್ದು,  ಈ ಪ್ರಮಾಣದ ಶೇ. 10 ರಲ್ಲಿ ಹಾವನೂರು ಆಯೋಗದ ವರದಿಯಿಂದ ಸೇರ್ಪಡೆಯಾದ ಸ್ಪೃಶ್ಯ ಜಾತಿಗಳು ಹೆಚ್ಚು ಪ್ರಾತಿನಿಧ್ಯವನ್ನು ಪಡೆಯುತ್ತಿರುವುದರಿಂದ, ಒಳ ಮೀಸಲಾತಿಗಾಗಿ ಕೂಗು ಹೆಚ್ಚುತ್ತಿದೆ. ರಾಜಕೀಯ, ಶಿಕ್ಷಣ ಹಾಗು ಸರ್ಕಾರಿ ಉದ್ಯೋಗಗಳಲ್ಲಿ ಸ್ಪೃಶ್ಯ ಸಮುದಾಯಗಳು, ಪರಿಶಿಷ್ಟ ವರ್ಗಗಳ ಮೀಸಲಾತಿಯಲ್ಲಿ ಶೇ. 50 ಕ್ಕಿಂತ ಪ್ರಾತಿನಿಧ್ಯವನ್ನು ಪಡೆಯಲಾಗಿ, ಇತರೆ ಪರಿಶಿಷ್ಟ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ದೊರಯದೆ ಇರುವುದರಿಂದ ಒಳ ಮೀಸಲಾತಿಯ ಚರ್ಚೆ ಮುನ್ನೆಲೆಗೆ ಬಂದಿದೆ      2011ರ ಜನಗಣತಿ ಪ್ರಕಾರ, SC (Scheduled Castes) ಗಳ ಒಟ್ಟು ಜನಸಂಖ್ಯೆಯಲ್ಲಿ ಆದಿ ಕರ್ನಾಟಕ 21, 99,170 (25.7%), ಮಾದಿಗ 13, 05, 976 (15.2%), ಬಂಜಾರ 9, 97, 338 (11.6%), ಭೋವಿ 9, 55, 752 (11.2%), ಹೊಲಯ 6, 41, 472 (7.5%), ಆದಿ ದ್ರಾವಿಡ 6, 16, 332 (7.2%), ಭಾಂಬಿ ಸಮುದಾಯ 5,64,599 (6.6%) ಹಾಗು ಉಳಿದ 41 ಪರಿಶಿಷ್ಟ ಜಾತಿಗಳು 1000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ.  2005 ರಲ್ಲಿ ರಚನೆಯಾದ ನ್ಯಾಯ ಮೂರ್ತಿ ಎ ಜೆ ಸದಾಶಿವ ರವರ ನೇತೃತ್ವದಲ್ಲಿ ರಚನೆಯಾದ ಆಯೋಗ ಪರಿಶಿಷ್ಟ ಜಾತಿಗಳನ್ನು ಅಸ್ಪೃಶ್ಯರು, ಸ್ಪೃಶ್ಯರು ಹಾಗು ಇತರೆ ಸ್ಪೃಶ್ಯ ಜಾತಿಗಳೆಂದು ಮೂರು ಕೆಟಗರಿಗಳನ್ನು ಮಾಡಲಾಯಿತು.  ಮುಂದುವರೆದು, ಈ ಮೂರು ಕೆಟಗರಿಗಳನ್ನು ಈ ಕೆಳಗಿನಂತೆ ಮರು ವರ್ಗೀಕರಣ ಮಾಡಲಾಯಿತು.
1. ಎಡಗೈ ಹಾಗು ಬಲಗೈ ಗುಂಪುಗಳು
2. ಸ್ಪೃಶ್ಯ ಸಮುದಾಯಗಳು (ಭೋವಿ, ಲಂಬಾಣಿ, ಕೊರಚ, ಕೊರಮ)
3. ಇತರೆ ಸಣ್ಣ ಜಾತಿಗಳ ಗುಂಪುಗಳು
ಎ ಜೆ ಸದಾಶಿವರವರು ತಿಳಿಸಿರುವಂತೆ, ಆಯೋಗವು ಸುಮಾರು 20 ಲಕ್ಷ ಪರಿಶಿಷ್ಟ ಸಮುದಾಯಗಳನ್ನು ಸಮೀಕ್ಷೆಗೆ ಒಳಪಡಿಸಿ, ಇದರಲ್ಲಿ 14 ಲಕ್ಷ ಜನರ ಉಪಜಾತಿಗಳನ್ನು ಗುರುತಿಸಲಾಯಿತು.  ಇನ್ನುಳಿದ 6 ಲಕ್ಷ ಜನರು ಉಪಜಾತಿಯನ್ನು ಪ್ರಸ್ತಾಪಿಸಲು ಇಷ್ಟಪಟ್ಟಿರುವುದಿಲ್ಲ.  ಜೂನ್‌ 4, 2012 ರಂದು ಸದಾಶಿವರವರು ಆಯೋಗದ ವರದಿಯನ್ನು ಸರ್ಕಾರಕ್ಕೆ ಒಪ್ಪಿಸುತ್ತಾ, ಎಡಗೈ ಸಮುದಾಯದ ಜನಸಂಖ್ಯೆ 33.47% ರಷ್ಟಿದ್ದು, ಅವರಿಗೆ ಶೇ. 6 ರಷ್ಟು ಮೀಸಲಾತಿ, ಬಲಗೈ ಸಮುದಾಯದ ಜನಸಂಖ್ಯೆ ಶೇ. 32 ರಷ್ಟಿದ್ದು, ಅವರಿಗೆ ಶೇ. 5 ರಷ್ಟು, ಶೇ. 23.47ರಷ್ಟಿರುವ ಸ್ಪೃಶ್ಯ ಜಾತಿಗಳಿಗೆ ಶೇ. 3 ರಷ್ಟು ಮೀಸಲಾತಿ, SC ಜನಸಂಖ್ಯೆಯಲ್ಲಿ  ಶೇ. 4.65 ರಷ್ಟಿರುವ ಇತರೆ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿ ನೀಡಬಹುದೆಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಪ್ರಸ್ತಾಪಿಸಿದರು. ಡಿ ವಿ ಸದಾನಂದ ಗೌಡರ ಬಿಜೆಪಿ ಸರ್ಕಾರ, ಸಿದ್ಧರಾಮಯ್ಯನವರ ಕಾಂಗ್ರೆಸ್‌ ಸರ್ಕಾರ, ಹೆಚ್‌ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರ ಹಾಗು ಈಗಿನ ಯಡಿಯೂರಪ್ಪನವರ ಬಿಜೆಪಿ ಸರ್ಕಾರಗಳು ಈ ವರದಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.  ಈ ಪಕ್ಷಗಳ ಎಲ್ಲಾ ನಾಯಕರು ಪರಿಶಿಷ್ಟ ಜಾತಿಗಳು ಒಂದಾಗಿ ಬರುವುದಾದರೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಹೇಳಿಕೆ ಕೊಡುತ್ತಾ, ಪರಿಶಿಷ್ಟ ಜಾತಿಗಳ ಪ್ರತಿನಿಧಿಗಳು ಒಗ್ಗಟಾಗದಂತೆ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡುತ್ತಿರುವುದು, ಈ ವರದಿಯ ಜಾರಿಗೆಗೆ ದೊಡ್ಡ ಸವಾಲಾಗಿದೆ.

 • ಸದಾಶಿವ ಆಯೋಗ ಇಂದಿಗೆ ರಚನೆಯಾಗಿ, 16 ವರ್ಷಗಳಾಗಿದ್ದು, ಇದಕ್ಕಾಗಿ 12 ಕೋಟಿ ಹಣ ವ್ಯಯ ಮಾಡಿದ್ದು, ಯಾವ ಸರ್ಕಾರಗಳು ಈ ವರದಿಯನ್ನು ಪರಿಗಣಿಸದೇ, ಗೊಂದಲ ಸೃಷ್ಠಿಸಿದ್ದರ ಪರಿಣಾಮ, ಒಳ ಮೀಸಲಾತಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾದವು.  ಜನಸಂಖ್ಯೆಯ ಪ್ರಮಾಣವನ್ನು ತಪ್ಪಾಗಿ ಮಾಡಲಾಗಿದೆ ಎಂದು ಕೆಲ ಸಮುದಾಯಗಳು ಆರೋಪ ಮಾಡಲಾಗಿ, 2014 ರಲ್ಲಿ ಹಿಂದುಳಿದ ವರ್ಗಗಳ ಮುಖ್ಯಸ್ಠರಾದ ಹೆಚ್. ಕಾಂತರಾಜ್‌ ರವರ ನೇತೃತ್ವದಲ್ಲಿ ಜಾತಿ ಜನಗಣತಿ ಮಾಡುವ ಸಲುವಾಗಿ ಸಮಿತಿ ರಚನೆಯಾಯಿತು. ಇದಕ್ಕಾಗಿ 200 ಕೋಟಿಗಳನ್ನು ಹಣ ವ್ಯಯ ಮಾಡಲಾಯಿತು.  ಯಡಿಯೂರಪ್ಪನವರ ಸರ್ಕಾರವು ಈ ಜಾತಿಜನಗಣತಿಯನ್ನು ಚರ್ಚಿಸಿ ಅಂಗೀಕಾರ ಮಾಡದೇ ಇರುವುದರಿಂದ ಸರ್ಕಾರ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
 •  ನವೆಂಬರ್‌ 2019 ರಲ್ಲಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನ್ಯಾಯ ಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿ, ಪರಿಶಿಷ್ಟ ಜಾತಿಗಳ 15% ಮೀಸಲಾತಿಯನ್ನು 17% ಕ್ಕೆ, ಪರಿಶಿಷ್ಟ ಪಂಗಡಗಳ 3% ಮೀಸಲಾತಿಯನ್ನು 7% ಕ್ಕೆ ಹೆಚ್ಚಿಸಬೇಕೆಂದು ಶಿಫಾರಸ್ಸು ಮಾಡಿದೆ.  ಆಯೋಗವು 227 ಪುಟಗಳ ಅಂತಿಮ ವರದಿಯನ್ನು ಜುಲೈ 2, 2020 ರಂದು ಈಗಿನ ಯಡಿಯೂರಪ್ಪನವರ ಸರ್ಕಾರಕ್ಕೆ ಒಪ್ಪಿಸಿದೆ.  ಈ ಆಯೋಗದ ವರದಿ, ಹೆಚ್‌ ಕಾಂತರಾಜ್‌ ಆಯೋಗದ ವರದಿ ಹಾಗು ಸದಾಶಿವ ಆಯೋಗದ ವರದಿಗಳು ಒಂದಕ್ಕೊಂದು ಪರಸ್ಪರ ಸಂಬಂಧಪಟ್ಟವುಗಳಾಗಿರುವುದರಿಂದ ಈ ಮೂರು ಆಯೋಗಗಳ ವರದಿಗಳನ್ನು ವಿಧಾನ ಸಭೆಗಳಲ್ಲಿ ಚರ್ಚೆಗೆ ಒಳಪಡಿಸಿ, ಅಂಗೀಕರಿಸಲು ಯಾವುದೇ ಸರ್ಕಾರಗಳಿಗೆ ಕಾಳಜಿ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
 • ಸದಾಶಿವ ಆಯೋಗದ ವರದಿ ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿಯನ್ನು ಶಿಫಾರಸ್ಸು ಮಾಡಿದೆ. ಆದರೆ, ಸಿದ್ಧರಾಮಯ್ಯ ಹಾಗು ಹೆಚ್ ಡಿ ಕುಮಾರ ಸ್ವಾಮಿಯಂತಹ ನಾಯಕರು ‘ಬಲಗೈ ಶಾಸಕರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿಕೆಗಳನ್ನು ನೀಡುತ್ತಾ, ಎಡಗೈ ಹಾಗು ಬಲಗೈ ಸಮುದಾಯದ ನಾಯಕರು ಒಗ್ಗಟ್ಟಾಗುವ ಎಲ್ಲ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ, ಸದಾಶಿವ  ಆಯೋಗದ ವರದಿ ಜಾರಿ ಮಾಡುವುದಾಗಿ ಘೋಷಣೆ ಮಾಡಿ, ಎಡಗೈ ಸಮುದಾಯದ ಮತಗಳಿಂದ ಗೆದ್ದು, ಸರ್ಕಾರ ರಚನೆಯಾದ ನಂತರ, ಸದಾಶಿವ  ಆಯೋಗದ ವರದಿ ಜಾರಿಯ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು, ರಾಜ್ಯದ ಪರಿಶಿಷ್ಟ ಜಾತಿಗಳ ವಿರುದ್ಧ ಸರ್ಕಾರ ಕಾರ್ಯನಿರ್ವಹಿಸುತ್ತಿರುವುದನ್ನು ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ಪರಿಶಿಷ್ಟ ಜಾತಿಗಳು ಅರ್ಥಮಾಡಿಕೊಳ್ಳಬೇಕಾಗಿದೆ.
 • ಸದಾಶಿವ  ಆಯೋಗದ ವರದಿ, ಕಾಂತರಾಜು ಸಮಿತಿಯ ವರದಿ ಹಾಗು ನಾಗಮೋಹನ್‌ ದಾಸ್‌ ಆಯೋಗದ ವರದಿಗಳು ಜಾರಿಯಾದರೆ, SC/ST ಗಳ ಜನಸಂಖ್ಯೆ 2 ಕೋಟಿಯಷ್ಟಾಗಿ, ಮೀಸಲಾತಿ ಪ್ರಮಾಣ ಹೆಚ್ಚಾದರೆ, ಒಕ್ಕಲಿಗ ಹಾಗು ಲಿಂಗಾಯಿತ ಪ್ರಬಲ ಸಮುದಾಯಗಳು ಅಧಿಕಾರದಿಂದ ವಂಚಿತರಾಗಬಹುದೆಂಬ ಭಯದಿಂದ ಈ ವರದಿಗಳನ್ನು ಯಾವುದೇ ಸರ್ಕಾರಗಳು ಅಂಗೀಕಾರ ಮಾಡದೇ ಇರುವುದು  ಸಹ ಒಂದು ಸವಾಲಾಗಿದೆ.
 • ಖಾಸಗೀಕರಣ ಯುಗದಲ್ಲಿ ಸರ್ಕಾರಿ ಉದ್ಯೋಗ ಕ್ಷೇತ್ರ ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ ಮೀಸಲಾತಿ ಹಾಗು ಒಳ ಮೀಸಲಾತಿಗಳಿಗಾಗಿ ಧ್ವನಿಯೆತ್ತುತ್ತಿರುವುದು ಒಂದು ವಿಪರ್ಯಾಸ. ಖಾಸಗೀ ಕ್ಷೇತ್ರದಲ್ಲೂ ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಸ್ಪರ್ಧಿಸುವಂತಹ ಕೌಶಲ್ಯಗಳು, ತರಬೇತಿಗಳನ್ನು ನೀಡುವ ವ್ಯವಸ್ಥೆ ಸ್ಥಾಪಿಸಬೇಕಿದೆ.
 • ಕರ್ನಾಟಕ ಲೋಕಸೇವಾ ಆಯೋಗದಲ್ಲಿ, ಸರ್ಕಾರವನ್ನು ರಚಿಸುವ ಪ್ರಬಲ ಜಾತಿಗಳು ಜಮೀನ್ದಾರಿ ವ್ಯವಸ್ಥೆಯನ್ನು ಸೃಷ್ಠಿ ಮಾಡಿವೆ. ಹೆಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಯಾದರೆ, ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ, ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಕುರುಬರು, ಯಡಿಯೂರಪ್ಪನವರ  ಸರ್ಕಾರದಲ್ಲಿ ಲಿಂಗಾಯಿತರು ಆಯ್ಕೆಯಾಗುತ್ತಿದ್ದಾರೆ.  ಪರಿಶಿಷ್ಟ ಜಾತಿಗಳು ಜಮೀನ್ದಾರಿ ವ್ಯವಸ್ಥೆಯನ್ನು ಸ್ಥಾಪಿಸಿರುವುದನ್ನು ಅಲ್ಲಗೆಳೆಯುವಂತಿಲ್ಲ.  ಎಡಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕೆಪಿಎಸ್ ಸಿ ಸದಸ್ಯರುಗಳಾಗಿದ್ದರೆ, ಬಲಗೈ ಸಮುದಾಯದ ಕೆಲವು ಕುಟುಂಬಗಳು ಸರ್ಕಾರಿ ಸೇವೆಯನ್ನು ಪಡೆಯಲು ಯಶಸ್ವಿಯಾಗಿ ಜಮೀನ್ದಾರಿ ವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದಾರೆ.ಭವಿಷ್ಯ:
 •  ಸದಾಶಿವ  ಆಯೋಗದ ವರದಿಯಲ್ಲದೇ, ಕಾಂತರಾಜು ಸಮಿತಿಯ ವರದಿ ಹಾಗು ನಾಗಮೋಹನ್‌ ದಾಸ್‌ ಆಯೋಗದ ವರದಿಗಳನ್ನು ಚರ್ಚಿಸಿ ಅಂಗೀಕಾರ ಮಾಡುವ ವಿಚಾರವಾಗಿ ಯಾವ ಸರ್ಕಾರಗಳೂ ಇದುವರೆಗೂ ಬದ್ಧತೆ ತೋರಿಸಿಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
 • ಇತ್ತೀಚೆಗೆ, ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಚೈತನ್ಯ ರಥ ಯಾತ್ರೆ’ ಯ ಫಲವಾಗಿ ಸದಾಶಿವ  ಆಯೋಗದ ವರದಿ ಜಾರಿ ವಿಚಾರ ತೀವ್ರ ಚರ್ಚೆಗೆ ಬಂದಿರುವುದು ಗಮನಾರ್ಹ.
 • ಸದಾಶಿವ  ಆಯೋಗದ ವರದಿ ಜಾರಿಯಾಗಬೇಕಾದರೆ, ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿಗಳ ನಡುವೆ ಈ ವರದಿಯ ಅನುಕೂಲತೆಗಳನ್ನು ಅರ್ಥೈಸಿ, ಜಾಗೃತಿ ಮೂಡಿಸಿ ಒಟ್ಟಾಗಿ ಧ್ವನಿಯೆತ್ತಬೇಕಾಗಿದೆ.  ವಿಫಲವಾದಲ್ಲಿ, ವಿವಿಧ ಪಕ್ಷಗಳ ನಾಯಕರು ಹಾಗು ಸರ್ಕಾರಗಳು ಆಯೋಗದ ವರದಿಗಳನ್ನು ವಿಶೇಷವಾಗಿ ಪರಿಗಣಿಸುವುದಿಲ್ಲ. ನೂರಾರು ಕೋಟಿ ಹಣವನ್ನು ವ್ಯಯಿಸಿ, ಸಮೀಕ್ಷೆ ನಡೆಸಿ, ಸಿದ್ಧಪಡೆಸಿದ ವರದಿಗಳನ್ನು ಚರ್ಚಿಸಿ ಅಂಗೀಕಾರ ಮಾಡದೇ ಇರುವ ಸರ್ಕಾರಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಜನಾಂದೋಲನ ರೂಪಿಸುವ ಜರೂರತ್ತು ಸೃಷ್ಠಿಯಾಗಿರುವುದನ್ನು ಕಾಣಬಹುದು.
 • ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 2 ಕೋಟಿಯಷ್ಟಿರುವ SC/ST ಗಳು ರಾಜಕೀಯವಾಗಿ ಸಂಘಟಿತರಾದರೆ, ತಮ್ಮದೇ ಸರ್ಕಾರವನ್ನು ರಚಿಸಬಹುದೆಂಬ ವಿಚಾರವನ್ನು ಅರ್ಥೈಸಿಕೊಳ್ಳುವ ಸಮಯ ಇದಾಗಿದೆ.
 •  ಕೆಲವು ಪ್ರಬಲ ಜಾತಿಗಳು ಹಾಗು ಮಠಾದೀಶರುಗಳು ಜಾತಿಗಣತಿಯನ್ನು ಒಪ್ಪಿಕೊಳ್ಳಬಾರದೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಾತಿಗಣತಿಯಿಂದ ಪ್ರಬಲ ಜಾತಿಗಳಿಗೆ ಭಯ ಶುರುವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
 •  ಪರಿಶಿಷ್ಟ ಜಾತಿಗಳ ನಡುವೆ ಜಾಗೃತಿ ಮೂಡಿಸಿ, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ರಂಗಗಳಲ್ಲಿ ಪ್ರಬಲ ಸಮುದಾಯವಾಗಲು ವ್ಯವಸ್ಥಿತವಾದ ಜನಾಂದೋಲನ ರೂಪಿಸುವುದಾದರೆ, ಸದಾಶಿವ  ಆಯೋಗದ ವರದಿ ಪರಿಶಿಷ್ಟ ಜಾತಿಗಳ ಒಗಟ್ಟಿಗೆ ಅಡಿಪಾಯವಾಗಬಹುದು.
 • ರಾಜ್ಯದಲ್ಲಿ ಪ್ರಬಲ ಜಾತಿಗಳು ಸದಾಶಿವ  ಆಯೋಗದ ವರದಿಯನ್ನು ಬಳಸಿ, ಪರಿಶಿಷ್ಟ ಜಾತಿಗಳ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ, ಆದರೆ, ಪರಿಶಿಷ್ಟ ಜಾತಿಗಳು ಈ ಆಯೋಗವನ್ನು ಬಳಸಿ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ.
  -ಡಾ. ಶ್ರೀನಿವಾಸ್ ಜಿ
  MA., M.Phil., Ph.D (JNU, New Delhi)
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]