Monday, July 26 , 2021
ಒಡಲ ಖಾಲಿ ಪುಟ | ನಗಿಸುತ್ತಲೇ ವಿಷಾದವನ್ನೂ ದಾಟಿಸುವ ಬರಹಗಳು

ಪುಸ್ತಕದ ಹೆಸರು: ಒಡಲ ಖಾಲಿ ಪುಟ

ಲೇಖಕರು: ಕಾವೇರಿ ಎಸ್ .ಎಸ್.

ಪ್ರಕಾರ: ಪ್ರಬಂಧಗಳು/ಲೇಖನಗಳು

ಪ್ರಕಾಶನ: ಪ್ರಜೋದಯ ಪ್ರಕಾಶನ, ಹಾಸನ. ಸಂಪರ್ಕ ಸಂಖ್ಯೆ:8792276742

ಪುಟಗಳು: 152

ಬೆಲೆ: 120

‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ ಕೃತಿ. ಏಕಕಾಲಕ್ಕೆ ನಗು ಮತ್ತು ವಿಷಾದ ಎರಡನ್ನೂ ದಾಟಿಸಬಲ್ಲ ಕಸುವು ಅವರ ಬರಹಗಳಲ್ಲಿ ಎದ್ದು ಕಾಣುವ ಅಂಶ. ತಮಗನಿಸುವುದನ್ನು ಅವರು ಪ್ರಾಮಾಣಿಕವಾಗಿ ಸರಳವಾಗಿಯೂ, ಸಂಕೀರ್ಣವಾಗಿಯೂ ಅಭಿವ್ಯಕ್ತಗೊಳಿಸುವ ಪರಿಯನ್ನು ‘ಒಡಲ ಖಾಲಿ ಪುಟ’ದಲ್ಲೂ ಗಮನಿಸಬಹುದು.

ಕೃತಿಯ ಮೊದಲ ಭಾಗವಾದ ‘ಭಾವ ಪಟಗಳು’ ಬರಹಗಳನ್ನು ಓದಿದಾಗ ಚಕಿತನಾದೆ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನ್ನುವ ಉದ್ಘಾರ ನನ್ನೊಳಗೇ ಒಡಮೂಡಿತು. ಕಾವೇರಿ ಅವರ ಬಾಲ್ಯದ ಬದುಕನ್ನು ಕಟ್ಟಿಕೊಡುವ ಇಲ್ಲಿನ ಕೆಲ ಬರಹಗಳು ನಗಿಸುತ್ತಲೇ ವಿಷಾದವನ್ನೂ ಓದುಗರ ಮನಸ್ಸಿನ ಒಳಗಿಳಿಸುವಷ್ಟು ಸಶಕ್ತವಾಗಿವೆ. ಸರ್ಕಾರಿ ಶಾಲೆ, ಅಂಗನವಾಡಿಯಲ್ಲಿ ಅಕ್ಷರ ಜ್ಞಾನ ದಕ್ಕಿಸಿಕೊಳ್ಳುವ ಮಕ್ಕಳ ಭಾವಲೋಕವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಗಳ ನಡುವೆಯೂ ಸಂಭ್ರಮಿಸುವ ಬದುಕಿನ ಚಿತ್ರಗಳು ಆಪ್ತವಾಗಿವೆ.

ತಾವು ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಓದುವ ವೇಳೆ ಕೈಗೊಂಡ ಅಧ್ಯಯನ ಪ್ರವಾಸದ ಅನುಭವಗಳನ್ನು ‘ಅರಿವಿನ ಪಯಣದ ಆರ್ದ್ರ ನೆನಪುಗಳು’ ಬರಹದಲ್ಲಿ ದಾಖಲಿಸಿದ್ದಾರೆ. ಈ ಬರಹ ಅಧ್ಯಯನ ಪ್ರವಾಸವನ್ನು ಆಯೋಜಿಸುವ ಇತರರಿಗೆ ದಿಕ್ಸೂಚಿಯಂತಿದೆ.

ಕೃತಿಯ ಎರಡನೇ ಭಾಗವಾದ ‘ವಿಚಾರ ವಿಹಾರ’ ಲೇಖನಗಳಲ್ಲಿ ಮೀಸಲಾತಿ, ಮುಟ್ಟು-ಮೈಲಿಗೆ, ಶಿಕ್ಷಣ, ಕೃಷಿ ಇನ್ನಿತರೆ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ‘ಮಾಧ್ಯಮ ಮತ್ತು ಮಹಿಳೆ’ ಪ್ರಬಂಧ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ಎದುರಿಸಬೇಕಿರುವ ಸವಾಲುಗಳು, ಅಪಸವ್ಯಗಳ ಕುರಿತು ಗಮನ ಸೆಳೆಯುತ್ತದೆ. ತಮಗಾದ ಅನುಭವಗಳ ಮೂಲಕವೇ ಸುದ್ದಿಮನೆಯಲ್ಲಿ ಪತ್ರಕರ್ತೆಯರಿಗೆ ಎದುರಾಗುವ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ.

ಇನ್ನು ಕೃತಿಯ ಮೂರನೇ ಭಾಗವಾದ ಅಸಂಗತ ಲಹರಿ ಕಾವೇರಿ ಅವರು, ತಮ್ಮ ಮನಸ್ಸನ್ನು ಆವರಿಸುವ ದುಗುಡವನ್ನು ಅಭಿವ್ಯಕ್ತಗೊಳಿಸಲು ಪ್ರಜ್ಞಾಪೂರ್ವಕವಾಗಿಯೇ ಆಯ್ದುಕೊಳ್ಳುವ, ಸಂಕೀರ್ಣತೆ ಹಾಗೂ ಅಸ್ಪಷ್ಟತೆ ಮೇಳೈಸಿದ ಬರಹ ಶೈಲಿಯನ್ನು ಪರಿಚಯಿಸುತ್ತದೆ. ಕೆಲ ಸಾಲುಗಳು ಸರಾಗವಾಗಿ ಓದಿಸಿಕೊಳ್ಳದೆ, ಮರು ಓದಿಗೆ ಪುಸಲಾಯಿಸುತ್ತವೆ.

ಒಡಲ ಖಾಲಿ ಪುಟದ ಅಂತಿಮ ಭಾಗ ಪ್ರೇಮದ ಕುರಿತಾದ ಬರಹಗಳನ್ನು ಒಳಗೊಂಡಿದೆ.

ಈ ಕೃತಿಯಲ್ಲಿರುವ ಕೆಲವೇ ಕೆಲವು ಬರಹಗಳು ಇನ್ನೂ ಮಾಗಬಹುದಾದ ಸಾಧ್ಯತೆಯಿಂದ ವಂಚಿತವಾಗಿವೆ ಅನಿಸಿದರೂ, ಒಟ್ಟಾರೆ ಒಡಲ ಖಾಲಿ ಪುಟ ಒಂದೊಳ್ಳೆ ಪುಸ್ತಕ ಎನ್ನಲು ಬೇಕಾಗುವ ಪುರಾವೆಗಳೂ ಇಲ್ಲಿನ ಬರಹಗಳಲ್ಲೇ ದಕ್ಕಲಿವೆ.

ಎಚ್ .ಕೆ. ಶರತ್  

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]