Sunday, May 9 , 2021
ಒಡಲಾಳವನ್ನು ಸುಡುತ್ತಿರುವ ಬೆಂಕಿ ಚಳುವಳಿಯ ದೀಪವನ್ನು ಹಚ್ಚಬಲ್ಲದೇ? ಡಾ.ಶ್ರೀನಿವಾಸ್. ಜಿ

ನಮ್ಮ ದೇಶವು ತನ್ನ ಶ್ರೀಮಂತ ಇತಿಹಾಸ ಹಾಗು ಬಹುತ್ವದ ಕಾರಣದಿಂದ ಜಗತ್ತಿನಲ್ಲಿ ಅತ್ಯಂತ ವಿಶೇಷ ಸ್ಥಾನಮಾನವನ್ನು ಹೊಂದಿದೆ.  ಆಧುನಿಕ ಯುಗದವರೆಗೂ ಅನೇಕ ಮಹಾನ್‌ ನಾಯಕರು ಭಾರತೀಯ ಪರಂಪರೆಯನ್ನು ಬೆಳೆಸುತ್ತಾ, ಉಳಿಸುತ್ತಾ ಬಂದಿರುವುದೇ ಈ ವಿಶೇಷ ಸ್ಥಾನಮಾನ ಉಳಿದುಕೊಂಡು ಬರಲು ಸಾಧ್ಯವಾಗಿದೆ.  ಅಂದಿನಿಂದ ಇಂದಿನವರೆಗೂ ಮಾನವ ಹಾಗು ಪ್ರಾಣಿ ಸಂಕುಲಗಳನ್ನು ಉಳಿಸಲು ಪ್ರಯತ್ನ ಮಾಡಿದ ಎಲ್ಲಾ ನಾಯಕರು ಹಾಗು ಸಿದ್ಧಾಂತಗಳು ಭಾರತೀಯ ಪರಂಪರೆಯನ್ನು ಉಳಿಸಿವೆ.  ಯಾವ ಮನಸ್ಥಿತಿಗಳು ಮಾನವನನ್ನು ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆಗಳ ಸುಳಿಯಲ್ಲಿ ಕಟ್ಟಿ ಹಾಕಿವೆಯೋ ಅವು ಭಾರತೀಯ ಪರಂಪರೆಗೆ ಸವಾಲಾಗಿವೆ.  ಭಾರತೀಯ ಪರಂಪರೆಯು ಎಲ್ಲಾ ರೀತಿಯ ಸುಳಿಗಳನ್ನು ಮೀರಿರುವಂತದ್ದು.

19 ನೇ ಶತಮಾನದಲ್ಲಿ ಅನೇಕ ಸಮಾಜ ಸುಧಾರಕರು ಸಮಾಜ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದರೂ, ಅವರು ಕೇವಲ ಕೆಲವೇ ಜಾತಿಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಯಶಸ್ವಿಯಾದರು.  ಭಾರತೀಯ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಸತಾರ ಹಾಗು ಪೂನಾಗಳಲ್ಲಿ ಜ್ಯೋತಿಬಾಫುಲೆ, ಸಾವಿತ್ರಿಬಾಯಿ ಫುಲೆ ಹಾಗು ಛತ್ರಪತಿ ಶಾಹು ಮಹಾರಾಜರು ಸಮಾಜ ಪರಿವರ್ತನೆ ಕಾರ್ಯವನ್ನು ಮಾಡಿದರು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತೀಯ ಪರಂಪರೆಯನ್ನು ಕಾಪಾಡುವ ಹಾದಿಯಲ್ಲಿ ಹೋರಾಟ ಮಾಡಿದವರು ಬಾಬಾ ಸಾಹೇಬ್ ಡಾ.ಬಿ.ಆರ್‌ ಅಂಬೇಡ್ಕರರು ಹಾಗು ಪಂಜಾಬ್‌ ನ ಕಾನ್ಶಿರಾಮ್ ರವರು. ಸ್ವಾತಂತ್ರ್ಯ ಪೂರ್ವ ಹಾಗು ಸ್ವಾತಂತ್ರ್ಯದ ನಂತರ ಭಾರತೀಯ ಪರಂಪರೆ ಅಪಾಯದಲ್ಲಿದ್ದಾಗ, ಬಾಬಾ ಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರರು ಮಾನವ ಕುಲಕ್ಕಾಗಿ ಹೋರಾಟ ಮಾಡಿ, ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಸಂವಿಧಾನವನ್ನು ರಚಿಸಿದರು.

ಸ್ವಾತಂತ್ರ್ಯೋತ್ತರ ಭಾರತವನ್ನು ದೀರ್ಘಕಾಲ ಕೇಂದ್ರದಲ್ಲಿ ಆಳಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌.  ಪಂಚವಾರ್ಷಿಕ ಹಾಗು ವಾರ್ಷಿಕ ಯೋಜನೆಗಳಿಂದ ಅಭಿವೃದ್ಧಿಗಾಗಿ ಶ್ರಮಿಸಿದರೂ, ಬಡವ-ಶ್ರೀಮಂತರ ಅಂತರವನ್ನು ಕಡಿಮೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಯಿತು. ಸಮಾಜಮುಖಿ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಸರ್ಕಾರ ರೂಪಿಸಿತ್ತಾದರೂ, ಇಂದಿರಾಗಾಂಧಿಯವರ ಸರ್ವಾಧಿಕಾರಿ ಆಡಳಿತ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ವಿಫಲವಾಯಿತು.  ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಸವಲತ್ತುಗಳನ್ನು ನೀಡುವ ಸಲುವಾಗಿ ಭಾರತದ ಸಂವಿಧಾನವನ್ನು ರಚಿಸಲಾಯಿತು.  ಸಂವಿಧಾನದ ಆಶಯಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಯಿತು. ಕಾಂಗ್ರೆಸ್‌ ಸರ್ಕಾರದ ಶಿಕ್ಷಣ ಕೆಲವು ಶಿಕ್ಷಣ ನೀತಿಗಳಿಂದಾಗಿ ಜನತೆಯ ಸಾಕ್ಷರತಾ ಪ್ರಮಾಣದಲ್ಲಿ ಏರಿಕೆಯಾದರೂ, ಸಮಗ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಲಿಲ್ಲ. ಪರಿಣಾಮ, ಹಿಂದುಳಿದ ಹಾಗು ಶೋಷಿತ ಸಮುದಾಯಗಳಲ್ಲಿ ಪರ್ಯಾಯ ನಾಯಕತ್ವ ಸೃಷ್ಠಿಯಾಯಿತು.  ಇದರಿಂದಾಗಿ, 80 ರ ದಶಕದಲ್ಲಿ ಬಹುಜನರ ಹೋರಾಟ ಆರಂಭವಾಯಿತು.  ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಚನೆಮಾಡಿ, ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡಲು ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.  ಶೋಷಿತರ ಮೇಲಾಗುವ ದೌರ್ಜನ್ಯಗಳನ್ನು ತಡೆಯುವಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.  ಕಾಂಗ್ರೆಸ್‌ ಸರ್ಕಾರ ಕುಟುಂಬ ರಾಜಕಾರಣವು ಸಹ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ವಿಫಲವಾಯಿತು.  1996 ನಂತರ ಕೇಂದ್ರದಲ್ಲಿ ಆಳಿದ ಸಮ್ಮಿಶ್ರ ಸರ್ಕಾರಗಳು ಸಹ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾದವು.  2004 ರಿಂದ  2014  ರವರೆಗೆ ಆಳಿದ UPA ಸರ್ಕಾರವು ಸಹ ಸಂಪೂರ್ಣವಾಗಿ ಸಂವಿಧಾನದ ಆಶಯಗಳನ್ನು ಈಡೇರಿಸಲು ವಿಫಲವಾಯಿತು.  ಆದರೆ RTI ಹಾಗು RTE ನಂತಹ ಶಿಕ್ಷಣ ನೀತಿಗಳನ್ನು ಜಾರಿ ತಂದ ಕಾಂಗ್ರೆಸ್‌ ಸರ್ಕಾರವನ್ನು ಪ್ರಶಂಸಿಸಲೇಬೇಕು.

ದೇಶವೆಂದರೆ ಜನ, ಜನಾಭಿವೃದ್ಧಿಯಾಗದೇ ದೇಶ ಅಭಿವೃದ್ಧಿಯಾಗದು.  ಭಾರತೀಯ ಪರಂಪರೆ ಕೊಂಡೊಯ್ಯುವುದೆಂದರೆ ಭಾರತೀಯರೆಲ್ಲರೂ ಶಿಕ್ಷಿತರಾಗಿ, ಉದ್ಯೋಗಸ್ಥರಾಗಿ, ಆರ್ಥಿಕ ಸ್ವಾವಲಂಬಿಗಳಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಹಿತಾಸಕ್ತಿಗಳನ್ನು ಕಾಪಾಡುವುದೆಂದರ್ಥ.  ಭಾರತೀಯ ಪರಂಪರೆಯ ಬಹುಮುಖ್ಯ ಲಕ್ಷಣ ಬಹುತ್ವ.  ಈ ಬಹುತ್ವವನ್ನು ಕಾಪಾಡುವ ಏಕೈಕ ಮಾರ್ಗ ಭಾರತದ ಸಂವಿಧಾನದ ಜಾರಿ.  ಭಾರತದ ಸಂವಿಧಾನದ ಆಶಯಗಳನ್ನು ಆಶಯಗಳನ್ನು ಜಾರಿ ಮಾಡುವ ಯಾವುದೇ ಸರ್ಕಾರಗಳು ಭಾರತೀಯ ಪರಂಪರೆಯನ್ನು ಕಾಪಾಡುವಲ್ಲಿ ಮಂಚೂಣಿಯಲ್ಲಿರುತ್ತವೆ.

2014 ರಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವೆಂದು ಅನೇಕ ನಿದರ್ಶನಗಳು ಹೇಳುತ್ತಿವೆ.  ಬಿಜೆಪಿ ಸರ್ಕಾರದ ಕೆಲವು ಸಂಸದರು ತಾವು ಭಾರತದ ಸಂವಿಧಾನವನ್ನು ಬದಲಾಯಿಸಲೆಂದೇ ಅಧಿಕಾರಕ್ಕೆ ಬಂದಿರುವುದಾಗಿ ಹೇಳಿಕೆಗಳನ್ನು ನೀಡಿರುವುದನ್ನು ನಾವು ಕಾಣಬಹುದು.  ಹಾಗೆಯೇ, ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲೆಂದೇ ತಾವು ಅಧಿಕಾರಕ್ಕೆ ಬಂದಿರುವುದಾಗಿ ಬಿಜೆಪಿ ಬೆಂಬಲಿತ ನಾಯಕರು ಹೇಳಿಕೆಗಳನ್ನು ನೀಡಿರುವ ನಿದರ್ಶನಗಳನ್ನು ನಾವು ಕಾಣಬಹುದು.  ಕೇಂದ್ರದ ಬಿಜೆಪಿ ಸರ್ಕಾರ ಹಾಗು ರಾಜ್ಯಗಳಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರಗಳು ಶೋಷಿತ, ಹಿಂದುಳಿದ ಹಾಗು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಅವರ ಹಿತಾಸಕ್ತಿಗಳ ವಿರುದ್ಧ ಕಾರ್ಯನಿರ್ವಹಿಸುತ್ತಿರುವುದು ಭಾರತೀಯ ಪರಂಪರೆಗೆ ದೊಡ್ಡ ಸವಾಲಾಗಿದೆ.  ಬಿಜೆಪಿ ಸರ್ಕಾರವು ವಿದ್ಯಾರ್ಥಿವೇತನಗಳನ್ನು ಕಡಿತಗೊಳಿಸುತ್ತಿದೆ, ಮೀಸಲಾತಿ ನಿಯಮಗಳನ್ನು ರದ್ದುಗೊಳಿಸುತ್ತಿವೆ ಅಥವಾ ಜಾರಿ ಮಾಡುತ್ತಿಲ್ಲ.  2020 ರಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ.  ಮೇಲ್ನೋಟಕ್ಕೆ ಈ ನೀತಿ ಒಳ್ಳೆಯ ನೀತಿಯಾಗಿ ಕಂಡರೂ, ಇದನ್ನು  ಜಾರಿ ಮಾಡುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.  ಕೇಂದ್ರದ ಬಿಜೆಪಿ ಸರ್ಕಾರವನ್ನು ಗಮನಿಸಿದರೆ, ದಕ್ಷಿಣ ಆಫ್ರಿಕ ವಿಶ್ವವಿದ್ಯಾಲಯದ ಪ್ರವೇಶ ದ್ವಾರದ ಮೇಲೆ ಬರೆದಿರುವ ಈ ಸಾಲುಗಳು ನೆನಪಾಗುತ್ತವೆ.  “ದೇಶವೊಂದನ್ನು ಸರ್ವನಾಶಗೊಳಿಸಲು ಪರಮಾಣು ಬಾಂಬುಗಳಾಗಲೀ, ಕ್ಷಿಪಣಿಗಳ ಶ್ರೇಣಿಗಳಾಗಲಿ ಅಗತ್ಯವಿಲ್ಲ. ಕೇವಲ ಶಿಕ್ಷಣದ ಗುಣಮಟ್ಟವನ್ನು ಕಡಿಮೆಗೊಳಿಸುವುದು ಹಾಗು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಮೋಸ, ನಕಲು ಮಾಡಲು ಅನುವು ಮಾಡಿಕೊಡುವುದರ ಮೂಲಕ ಇದನ್ನು ಸಾಧಿಸಬಹುದು”. ಈ‌ ರೀತಿ ಕಳಪೆ ಶಿಕ್ಷಣ ಪಡೆಯವುದರಿಂದ ಸಮಾಜಕ್ಕೆ ಅಪಾಯವೂ ಕೂಡ ಹೆಚ್ಚು. ಅಂತಹ ವೈದ್ಯರ ಕಾಲದಲ್ಲಿ ಚಿಕಿತ್ಸೆಗೊಳಗಾಗುವ ರೋಗಿಗಳು ಸಾಯುವರು, ಅಂತಹ ಇಂಜನಿಯರುಗಳ ಕೈಯಲ್ಲಿ ಕಟ್ಟಲ್ಪಟ್ಟ ಕಟ್ಟಡಗಳು ನೆಲಕಚ್ಚುವುವು, ಅಂತಹ ಅರ್ಥಶಾಸ್ತ್ರಜ್ಞರು ಹಾಗು ಲೆಕ್ಕಿಗರ ಕೈಯಲ್ಲಿ ಆರ್ಥಿಕತೆ ಕುಸಿಯುವುದು, ಅಂತಹ ಧಾರ್ಮಿಕ ವಿದ್ವಾಂಸರ ಕೈಯಲ್ಲಿ ಮಾನವೀಯತೆ ಸಾಯುವುದು,‌ ಅಂತಹ ನ್ಯಾಯಧೀಶರ ಕೈಯಲ್ಲಿ ನ್ಯಾಯ ಕಳೆದು ಹೋಗುವುದು.  ಮೋಸದಿಂದ ಪಾಸಾಗಿ ಶಿಕ್ಷಕರಾದವರ ಕಾಳಜಿಯಲ್ಲಿ ಅಕ್ಷರ  ಕಲಿಯುವ ಮಕ್ಕಳಲ್ಲಿ ಬೇಜವಾಬ್ದಾರಿ ಎದ್ದು ಕಾಣುತ್ತದೆ.

“ ಶಿಕ್ಷಣದ ಕುಸಿತವೇ ದೇಶದ ಕುಸಿತ”.  ನಮ್ಮ ದೇಶದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡದೆ ಬಡವ-ಶ್ರೀಮಂತರ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ.  ಪ್ರಸ್ತುತವ ಉದ್ಯೋಗ ಸೃಷ್ಟಿಯ ಪ್ರಮಾಣ ಅತ್ಯಂತ ಕಡಿಮೆಯಾಗಿದೆ.  ಖಾಸಗೀಕರಣ ದಿನೇ ದಿನೇ ಎಲ್ಲಾ ರಂಗಗಳಲ್ಲಿ ಹೆಚ್ಚಾಗುತ್ತಿದೆ.  ಖಾಸಗಿ ಕ್ಷೇತ್ರದಲ್ಲಿ  ಉದ್ಯೋಗ ಪಡೆದುಕೊಳ್ಳಲು ಅಗತ್ಯವಾದ ಇಂಗ್ಲಿಷ್ ಭಾಷೆ ಹಾಗು ಇತರೆ ಕೌಶಲ್ಯಗಳನ್ನು ಅಭ್ಯರ್ಥಿಗಳಿಗೆ ನೀಡಲು ತರಬೇತಿಗಳನ್ನು ನೀಡುವ ವ್ಯವಸ್ಥೆಗಳು ಸರಿಯಾಗಿ ಆಗುತ್ತಿಲ್ಲ. ಕೇಂದ್ರ  ಸರ್ಕಾರವು 2019 ರಲ್ಲಿ ‘NISHTHA’ (National Initiative on School Teachers Head Holistic Advancement) ಯೋಜನೆಯನ್ನು ಸುಮಾರು 42 ಲಕ್ಷ ಶಿಕ್ಷಕರ ತರಬೇತಿಗಾಗಿ ಜಾರಿ ಮಾಡಿದರೂ, ಇದುವರೆಗೂ ಯಾವುದೇ ರೀತಿಯ ರಚನಾತ್ಮಕ ಬದಲಾವಣೆಗಳು ಕಂಡು ಬಂದಿಲ್ಲ.  ಕೇಂದ್ರ  ಸರ್ಕಾರವು ಶಿಕ್ಷಣಕ್ಕಾಗಿ ಮೀಸಲಿಟ್ಟ ಹಣದ ಪ್ರಮಾಣವನ್ನು ಕಡಿಮೆ ಮಾಡಿದೆ.  2014 ರಲ್ಲಿ  ಶೇ.4.14 ರಷ್ಟಿದ್ದ ಹಣ 2019-2020 ಕ್ಕೆ ಶೇ.3.4 ರಷ್ಟಕ್ಕೆ ಇಳಿದಿದೆ. 2020 ಆಯವ್ಯಯದಲ್ಲಿ ಶಿಕ್ಷಣಕ್ಕಾಗಿ 99300 ಕೋಟಿಗಳಷ್ಟು ಹಣವನ್ನು ಕಾಯ್ದಿರಿಸಲಾಗಿದೆ.  2014 ರಿಂದ ಇಲ್ಲಿಯವರೆಗೆ ಸಂಸತ್‌ ನಲ್ಲಿ ಮಂಡಿಸಿ, ರೂಪಿಸಿದ ಕಾನೂನುಗಳನ್ನು ಯಾವುದೇ ರೀತಿಯ ಚರ್ಚೆಗಳಿಗೆ ಅವಕಾಶ ಕೊಡದೇ ಅಂಗೀಕಾರ ಮಾಡಲಾಗಿದೆ.  ರಾಜ್ಯ ಹಾಗು ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಪ್ರಾಧ್ಯಾಪಕರ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡುವ ಯಾವ ಪ್ರಕ್ರಿಯೆಗಳು ಸಹ ನಡೆಯುತ್ತಿಲ್ಲ.

ಹಾಗೆಯೇ, ಪರಿಶಿಷ್ಟ ಜಾತಿಗಳ ಮೇಲಾಗುವ ದೌರ್ಜನ್ಯದ ಪ್ರಮಾಣವು ಹೆಚ್ಚಾಗುತ್ತಿದೆ. NCB (ನ್ಯಾಷನಲ್ ಕ್ರೈಮ್‌ ಬ್ಯೂರೋದ) ಅಂಕಿ ಅಂಶಗಳ ಪ್ರಕಾರ, 2011 ರಲ್ಲಿ 33000 ಪ್ರಕರಣಗಳು ದಾಖಲಾದರೆ, 2013ರಲ್ಲಿ 39000, 2014 ರಲ್ಲಿ 47064, 2015 ರಲ್ಲಿ 45003, 2016 ರಲ್ಲಿ 40000, 2017 ರಲ್ಲಿ 43203 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಶೆ. 25 ರಷ್ಟು ಪ್ರಕರಣಗಳು ಉತ್ತರ ಪ್ರದೇಶದ ಒಂದೇ ರಾಜ್ಯದಲ್ಲಿ ದಾಖಲಾಗಿರುವುದನ್ನು ಕಾಣಬಹುದು.  The National Dalit Movement for Justice (NDMJ) ಸಮೀಕ್ಷೆಯ ಪ್ರಕಾರ ಈಗಾಗಲೇ ದಾಖಲಾದ 62195 ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಬಾಕಿ ಇವೆ. ಹಾಗು ಬಹಳಷ್ಟು ಪ್ರಕರಣಗಳು ಸಾಕ್ಷ್ಯಾಧಾರಗಳಿಲ್ಲದೆ ಖುಲಾಸೆಗೊಳ್ಳುತ್ತಿವೆ. 2019 ರಲ್ಲಿ ಸುಮಾರು 405861 ಮಹಿಳೆಯರ ಮೇಲಾಗುವ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.  ಮಹಿಳೆಯರ ಮೇಲಾಗುವ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿ ದಾಖಲಾಗಿವೆ.  ಉತ್ತರ ಪ್ರದೇಶ-59853, ರಾಜಸ್ಥಾನ-41550, ಮಹಾರಾಷ್ಟ್ರ-37144 ಪ್ರಕರಣಗಳು ದಾಖಲಾಗಿವೆ.

ಪರಿಶಿಷ್ಟ ಜಾತಿಗಳು ಹಾಗು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ SCP ( Special Component Plan) & TSP (Tribal Sub-Plan) ಯೋಜನೆ ಅತ್ಯಂತ ಪ್ರಗತಿಪರ ಯೋಜನೆ.  ಇದುವರೆಗೂ ರಾಜ್ಯದಲ್ಲಿ ಈ ಯೋಜನೆಯಡಿ ಮೀಸಲಿಟ್ಟ ಹಣ 2014-2015 ರಲ್ಲಿ 15894 ಕೋಟಿಗಳು, 2015-2016 ರಲ್ಲಿ 16405 ಕೋಟಿಗಳು, 2016-2017 ರಲ್ಲಿ 20040 ಕೋಟಿಗಳು, 2017-2018 ರಲ್ಲಿ 27962 ಕೋಟಿಗಳು, 2018-2019 ರಲ್ಲಿ 29314 ಕೋಟಿಗಳು, 2019-2020 ರಲ್ಲಿ 27400 ಕೋಟಿಗಳು. ಇಷ್ಟು ಪ್ರಮಾಣದ ಆಯವ್ಯಯ ಹಂಚಿಕೆಯಾಗಿದ್ದರೂ, ರಾಜ್ಯದ ಸುಮಾರು 73 ಶಾಸಕರು ಹಾಗು 36 ವಿಧಾನ ಪರಿಷತ್ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಈ ಯೋಜನೆಯಡಿ ಯಾವುದೇ ಪ್ರಸ್ತಾವಗಳನ್ನು ಸಲ್ಲಿಸಿಲ್ಲ. ಪರಿಶಿಷ್ಟ ಜಾತಿಗಳು ಹಾಗು ಪರಿಶಿಷ್ಟ ಪಂಗಡಗಳ ಯುವಕರು ರಾಜ್ಯದಲ್ಲಿ ಉದ್ಯೋಗಗಳಿಲ್ಲದೆ ಅನಾಥರಾಗಿರುವುದನ್ನು ಕಾಣಬಹುದು.  SCP-TSP ಹಣ ಸದುಪಯೋಗವಾಗಬೇಕಾದರೆ,  ಪರಿಶಿಷ್ಟ ಜಾತಿಗಳು ಹಾಗು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಜಾಗೃತಿ ಮೂಡಿಸಿ ನೇರವಾಗಿ ಫಲಾನುಭವಿಗಳಿಗೆ ಸವಲತ್ತುಗಳು ದೊರಕುವ ನಿಟ್ಟನಲ್ಲಿ ಕಾರ್ಯನಿರ್ವಹಿಸಬೇಕಿದೆ.

ಹಾಗೆಯೇ, ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಿ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯ ಬಿಜೆಪಿ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ.  ಇದರಿಂದ ನಮ್ಮ ಒಕ್ಕೂಟ ವ್ಯವಸ್ಥೆಗೆ ದಕ್ಕೆಯಾಗುವ ಸಂಭವವಿದೆ.  ರಾಜ್ಯದಲ್ಲಿ KSRTC ಹಾಗು BMTC ಸಂಸ್ಥೆಗಳು ಲಾಭದಾಯಿಕ ಸಂಸ್ಥೆಗಳೆಂದು ಎಲ್ಲರಿಗೂ ತಿಳಿದಿರುವ ವಿಚಾರ.  KSRTC ಯು 84 ಡಿಪೊಗಳು, 17138 ಬಸ್ಸುಗಳನ್ನು ಹಾಗು 37019 ನೌಕರರನ್ನು ಹೊಂದಿದ್ದು, ದಿನ ಒಂದಕ್ಕೆ 9 ಕೋಟಿಗಳು, ವಾರ್ಷಿಕವಾಗಿ 3240 ಕೋಟಿಗಳಷ್ಟು ಆದಾಯ ಪಡೆಯುತ್ತಿದೆ.  BMTC ಯು ದಿನ ಒಂದಕ್ಕೆ 88 ಲಕ್ಷಗಳು ವಾರ್ಷಿಕವಾಗಿ 340 ಕೋಟಿಗಳಷ್ಟು ಆದಾಯ ಪಡೆಯುತ್ತಿದೆ.   KSRTC ಹಾಗು BMTC ಸಂಸ್ಥೆಗಳು ಲಾಭದಾಯಿಕವಾಗಿ ನಡೆಯುತ್ತಿದ್ದರೂ ನೌಕರರಿಗೆ ಸರಿಯಾದ ವೇತನ ಹಾಗು ಭತ್ಯೆಗಳನ್ನು ನೀಡದಿರುವುದು ವಿಪರ್ಯಾಸ.

ಹಾಗೆಯೇ,  ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗಳಲ್ಲಿರುವ ಭ್ರಷ್ಟಾಚಾರ ವಾಕರಿಕೆ ತರಿಸುವಂತಿದೆ.  ಜನರ ದುಡಿಯುವ ಪ್ರಮಾಣ ಹೆಚ್ಚಾಗದೇ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.  ಸಮಾಜದ ಎಲ್ಲಾ ಸಮುದಾಯಗಳ ಪರಿಸ್ಥಿತಿ ಶೋಚನೀಯವಾಗಿರುವಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಯುವಕರು, ವಿದ್ಯಾರ್ಥಿಗಳು, ರೈತರು ಜಾಗೃತಿ ಮೂಡಿಸಿ ಜನತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಜನಾಂದೋಲನವನ್ನು ರೂಪಿಸಲು ತಯಾರುಮಾಡಿದರೆ ಮಾತ್ರ ಭಾರತೀಯರ ಒಡಲಾಳದ ಬೆಂಕಿಯನ್ನು ಆರಿಸಲು ಸಾಧ್ಯ.
– ಡಾ|| ಶ್ರೀನಿವಾಸ್‌ ಜಿ
   MA., M.Phil., Ph.D (JNU, New Delhi)

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]