Monday, July 26 , 2021
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌, | ಸಂಪಾದಕೀಯ

ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ ಜನತೆ ಇನ್ನೂ ಹೊರಬಂದಿರಲಿಲ್ಲ. ನಮ್ಮ ಪುಟ್ಟ ಮಾಧ್ಯಮ ಒಂದು ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಕಾರ್ಯಕಾರಿ ಮಂಡಳಿ ಒಂದು ಗೂಗಲ್ ಆ್ಯಪ್ ಮಾಡಿಸುವ ಯೋಜನೆಗೆ ಮುಂದಾಯಿತು. ಅದರಂತೆ ಆ್ಯಪ್ ಕೂಡ ಸಿದ್ಧವಾಯಿತು. ಅದನ್ನು ಯಾರಿಂದ ಬಿಡುಗಡೆ ಮಾಡಿಸುವುದು ಎಂಬ ಚರ್ಚೆಯಲ್ಲಿ ಒಂದೈದು ಜನ ಜನಪ್ರಿಯ ವ್ಯಕ್ತಿಗಳ, ಸೆಲೆಬ್ರಿಟಿಗಳ ಹೆಸರನ್ನು ಪಟ್ಟಿ ಮಾಡಲಾಯಿತು. ಅದರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹೆಸರು ಎಲ್ಲರಿಂದಲೂ ಒಪ್ಪಿತವಾಗಿ ಅಂತಿಮವಾಯಿತು. ನಂತರ ಸಂಚಾರಿ ವಿಜಯ್ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆದವು. ಸಂಪಾದಕರಿಗೆ ಆತ್ಮೀಯರಾಗಿದ್ದ ವ್ಯಕ್ತಿಯೊಬ್ಬರು ಕವಿ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಅವರ ಬಳಿ ಮಾತಾಡಿ ಸಂಚಾರಿ ವಿಜಯ್ ಅವರನ್ನು ಸಂಪರ್ಕಿಸುವುದಾಗಿ ತಿಳಿಸಿದರು. ನಂತರ ಅವರು ಚಕ್ರವರ್ತಿ ಚಂದ್ರಚೂಡ ಅವರ ಮೂಲಕ ವಿಜಯ್ ಅವರನ್ನು ಸಂಪರ್ಕಿಸಿ ಮಾತಾಡಿ ವಿಜಯ್ ಅವರು ಆ್ಯಪ್ ಬಿಡುಗಡೆ ಮಾಡಲು ಒಪ್ಪಿದ್ದಾರೆ, ಬೆಂಗಳೂರಿನ ಕನಕಪುರ ರಸ್ತೆ ಬಳಿಯ ಬಾಲಾಜಿ ಲೇಔಟ್ ನ ಮನೆಗೆ ಬರುವಂತೆ ದಿನಾಂಕ ಗೊತ್ತುಪಡಿಸಿ ಕರೆದಿದ್ದಾರೆ ಅಂತ‌ ಸುದ್ದಿ ಮುಟ್ಟಿಸಿದರು.

ಬಹುಶಃ ಅದು ಜನವರಿ 14, ಸಂಕ್ರಾಂತಿಗೆ ಮುನ್ನಾದಿನ ನಮ್ಮ ತಂಡದ ಸದಸ್ಯರಾದ ಸುರೇಶ್.ಪಿ.ಬಿ, ಗಣೇಶ್ ಪುತ್ತೂರು, ಸಿದ್ದಿಖ್ ನೆಲ್ಲಿಗುಡ್ಡೆ, ಅಶ್ವಿನ್ ಚೆಂಡ್ತಿಮಾರ್, ದುರ್ಗೇಶ್ ಮತ್ತು  ನಮ್ಮ ಆಪ್ತರ ಒಡಗೂಡಿ ಸಂಚಾರಿ ವಿಜಯ್ ಅವರ ಮನೆಯ ಕಡೆಗೆ ಹೊರಟೆವು. ಅವರ ಮನೆಯ ವಿಳಾಸ ಪತ್ತೆಹಚ್ಚಿ ತಲುಪುವುದು ಸ್ವಲ್ಪ ತಡವಾಯಿತೇ ಆದರೂ ಅವರು ನಮ್ಮನ್ನು ಅತ್ಯಂತ ಆಪ್ತವಾಗಿ ಸ್ವಾಗತಿಸಿದರು.

ಬಹಳ ಗಂಭೀರವಾದ ನಿಲುವು, ಹಿತವಾದ ದನಿ, ಮಲ್ಲಿಗೆ ಮೊಗ್ಗು ಬಿರಿದಂತೆ ಆಗಾಗ್ಗೆ ಮುಖದಲ್ಲಿ ಮೂಡುವ ಆ ನಗು ಇವೆಲ್ಲದರ ಜೊತೆಯಲ್ಲಿ ತುಂಬಾ ಅಚ್ಚರಿ ಎನಿಸಿದ್ದು ಅವರು ತೋರಿಸಿದ ಕಾಳಜಿ. ಸೆಲೆಬ್ರಿಟಿ,  ರಾಷ್ಟ್ರಪ್ರಶಸ್ತಿ ವಿಜೇತ ನಟ ಈ ತರದ ಯಾವುದೇ ಸಣ್ಣ ಅಹಂ ಕೂಡ ಇಲ್ಲದೆ ನಮ್ಮೆಲ್ಲರ ಜೊತೆಯಲ್ಲಿ ಅವರು ನಡೆದುಕೊಂಡ ರೀತಿ. ಬಹಳ ಕಷ್ಟಪಟ್ಟು ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ರೂಢಿಸಿಕೊಂಡಿರುವ‌ ಸರಳ ವ್ಯಕ್ತಿತ್ವ ಎಂತವರನ್ನೂ ಆಕರ್ಷಿಸುತ್ತದೆ.  ವಿಶಾಲವಾದ ಮನಸ್ಸು, ಯುವಕರ ಹೊಸ ಹೊಸ ಪ್ರಯತ್ನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಬೆನ್ನು ತಟ್ಟಿ ಬೆಂಬಲಿಸುವ ಅವರ ಮನೋಭಾವ ಎಲ್ಲರಲ್ಲೂ ಕಾಣಸಿಗುವಂತದ್ದಲ್ಲ. ಆ ದಿನ ನಮ್ಮ ಮಾಧ್ಯಮದ ಕಿರುಪರಿಚಯ ಮಾಡಿಕೊಂಡು, ಅಂತರ್ಜಾಲ ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ವಿನಯದಿಂದಲೇ ಕಿರಿಯ ವಿದ್ಯಾರ್ಥಿಯ ಹಾಗೆ ನಮ್ಮ ಸಂಪಾದಕರ ಮಾತುಗಳನ್ನು ಕೈಕಟ್ಟಿ ಕುಳಿತು ಆಲಿಸಿದ್ದರು. ನಂತರ ಮಾಧ್ಯಮ ಜಗತ್ತಿನಲ್ಲಿ ನಮ್ಮ ಹೊಸ ಪ್ರಯತ್ನವನ್ನು ತುಂಬು ಮನಸ್ಸಿನಿಂದ ಹರಸಿ ಹಾರೈಸಿ ಆ್ಯಪ್ ಬಿಡುಗಡೆ ಮಾಡಿಕೊಟ್ಟಿದ್ದರು. ನಂತರ ಒಂದಷ್ಟು ಮಾತುಕತೆ. ಇಷ್ಟಕ್ಕೆ ಬೆಟ್ಟದಷ್ಟು ಇಷ್ಟವಾಗುವ ವ್ಯಕ್ತಿತ್ವ ಅವರದ್ದು ಅಂತ ನಾವು ಯಾರೂ ಊಹಿಸಿರಲಿಲ್ಲ. ಮಾತಿಗೆ ಸಿಕ್ಕ ಕೆಲವೇ ನಿಮಿಷಗಳಲ್ಲಿ ಎಂತವರನ್ನೂ ತಮ್ಮವರಂತೆ ಆಪ್ತವಾಗಿ ನೋಡುವ ಬಹಳ ಅಪರೂಪದ ವ್ಯಕ್ತಿತ್ವ ಸಂಚಾರಿ ಅವರದ್ದು. ನಂತರ ಮತ್ತಷ್ಟು ಅವರ ಅಮೂಲ್ಯವಾದ ಸಮಯ ಕಸಿಯುವುದು ಬೇಡವೆಂದು ನಾವೆಲ್ಲರೂ ಅಲ್ಲಿಂದ ಹೊರಟುಬಿಟ್ಟೆವು. ಅಲ್ಲಿಂದ ಹೊರಟ ನಂತರವೂ ಕಛೇರಿ ತಲುಪುವವರೆಗೂ ಅವರದ್ದೇ ಮಾತು, ಅವರದ್ದೇ ಗುಣಗಾನ.

‌‌‌‌     ಸಂಚಾರಿ ವಿಜಯ್ ಅವರು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡಿದ್ದ ವ್ಯಕ್ತಿ ಎಂಬುದು ಅವರ ಪರಿಚಿತರಿಗೆ ಚೆನ್ನಾಗಿ ಗೊತ್ತಿದೆ‌. ಗ್ರಾಮೀಣ ಹಿನ್ನೆಲೆಯಿಂದ ಬಂದು ನಟನಾ ಬದುಕಿನಲ್ಲಿ ಹಲವಾರು ಸಾಧನೆಗಳ ಮೈಲಿಗಲ್ಲುಗಳನ್ನು ಮುಟ್ಟಿ, ಯಾವುದೇ ಗಾಢ್ ಫಾದರ್ ಇಲ್ಲದೆಯೆ ತನ್ನ ಸ್ವಂತ ಪರಿಶ್ರಮದಿಂದ ಬೆಳೆದು, ಅವಕಾಶಗಳನ್ನು ಗಿಟ್ಟಿಸಿ, ಕನ್ನಡ ಚಿತ್ರರಂಗಕ್ಕೆ  ದೇಶದ ಮಟ್ಟದಲ್ಲಿ ವಿಶೇಷ ಗೌರವವನ್ನು ತಂದುಕೊಟ್ಟ ಕೀರ್ತಿ ಅವರದ್ದು.

ಜನರ ಸಂಪರ್ಕಗಳನ್ನು ವಾಟ್ಸಪ್, ಫೇಸ್‌ಬುಕ್‌ ಗಳಿಗೆ ಸೀಮಿತಗೊಳಿಸಿಕೊಂಡು ದೂರ ಉಳಿದ ಇತರ ಸೆಲೆಬ್ರಿಟಿಗಳ ಹಾಗೆ ಸಂಚಾರಿ ವಿಜಯ್ ಇರಲಿಲ್ಲ.  ತನ್ನ ಸೆಲೆಬ್ರಿಟಿ ಗರಿಮೆಯನ್ನೆಲ್ಲಾ ಪಕ್ಕಕ್ಕೆ ಇಟ್ಟು ಜನರ ಕಷ್ಟಗಳಲ್ಲಿ ನೆರವಾಗಲು ಮುಂದಾಗುತ್ತಿದ್ದರು. ಪ್ರವಾಹಕ್ಕೆ ತುತ್ತಾದ ಕೊಡಗಿನ ತುಂಬೆಲ್ಲಾ ಓಡಾಡಿ ಸಂಕಷ್ಟ ಸಿಲುಕಿದ್ದ ಜನರಿಗೆ ತಮ್ಮಿಂದಾದ ಸಹಾಯ ಮಾಡಿದ್ದರು. ಮಾತ್ರವಲ್ಲದೆ ಉತ್ತರ ಕರ್ನಾಟಕ ನೆರೆಗೆ ಸಿಲುಕಿದ್ದಾಗಲೂ ಮಿಡಿದಿದ್ದರು, ಅವಿರತ ದುಡಿದಿದ್ದರು.

ಕೋವಿಡ್ ಬಂದು ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ ನಾಡಿಗೆ ನಾಡೇ ಸ್ತಬ್ಧವಾದಾಗ ಸಂಚಾರಿ ವಿಜಯ್ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಹಸಿವಿನಿಂದ ನರಳುತ್ತಿರುವ ಜನರಿಗಾಗಿ ಆಹಾರ ಪದಾರ್ಥಗಳನ್ನು ಕೊಟ್ಟು ಸಲುಹುವ ಕಾರ್ಯದಲ್ಲಿ ಹಲವಾರು ತಂಡಗಳ ಜೊತೆಯಲ್ಲಿ ಸೇರಿಕೊಂಡು ಕೆಲಸ ಮಾಡಿದರು. ಆಕ್ಸಿಜನ್ ಗೆ ಹಾಹಾಕಾರ ಎದ್ದಂತಹ ಸಂದರ್ಭದಲ್ಲಿ ಜನರಿಗೆ ‘ಉಸಿರು’ ಆಗಿ ಕೆಲಸ ಮಾಡಿದ್ದರು.

ಚಿತ್ರರಂಗದ ಪಾಲಿಗೆ ರಾಷ್ಟ್ರಮೆಚ್ಚಿದ ನಟನಾಗಿ, ಕೊರೋನ ಕಾಲದಲ್ಲಿ ರೋಗಿಗಳಿಗೆ ಉಸಿರಾಗಿ, ಕನ್ನಡ ನಾಡಿನ ಶ್ರೇಷ್ಠ ಕನ್ನಡಿಗನಾಗಿ ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ‘ಒಳ್ಳೆಯ ಮನುಷ್ಯ’ನಾಗಿದ್ದ ವಿಜಯ್ ಮೇಲೊಬ್ಬ ಮಾಯಾವಿಯ ಕರೆಗೆ ಓಗೊಟ್ಟಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಎಲ್ಲರಿಗೂ ಮಾದರಿಯಾಗಲಿ ಆ ಮೂಲ‌ಕ ಅವರು ಎಲ್ಲರಲ್ಲೂ ಉಳಿಯಲಿ ಎನ್ನುವ ಮೂಲಕ ರಾಷ್ಟ್ರಧ್ವನಿ ಬಳಗವು ಈ ನುಡಿ ನಮನವನ್ನು ಅರ್ಪಿಸಿದೆ. ಇನ್ನು, ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ…,
-ಸಂಪಾದಕರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]