Sunday, September 19 , 2021
ಆಸಾದಿ ಕಣ್ಣಲ್ಲಿ ಮಹಿಷ ಮತ್ತು ಚಾಮುಂಡಿ

ಕೆಲವು ಅರಿವುಗೇಡಿಗಳು, ಭಾರತೀಯ ಮೂಲ ಸಂಸ್ಕೃತಿ, ಆಚರಣೆ, ಹಿನ್ನಲೆಗಳ ಸ್ವಲ್ಪವೂ ಜ್ಞಾನವಿಲ್ಲದ ಅಪಾಪೋಲಿಗಳು, ಮೈಸೂರಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಷ ದಸರಾವನ್ನು ವಿರೋಧಿಸಿ ವಿಕೃತಿ ಮೆರೆದಿರುವ ಸಮಯದಲ್ಲಿ ನಾನು ಈ ಕೆಲವು ವಿಚಾರಗಳನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇನೆ.

ನೆನ್ನೆ ಮಹಾಲಯ ಅಮಾವಾಸ್ಯೆ.‌ ಆಚರಣೆಯ ಪ್ರಕಾರ ಮನೆಯಲ್ಲಿ ಸತ್ತವರಿಗೆಲ್ಲಾ ಎಡೆ ಹಾಕಿ ಸ್ಮರಣೆ ಮಾಡಲಾಗುತ್ತದೆ. ಎಡೆಯಲ್ಲಿ ಅವರು ಉಪಯೋಗಿಸುತ್ತಿದ್ದ ವಸ್ತುಗಳು, ತರತರದ ಊಟ ತಿಂಡಿ, ಶರಾಬು, ಬೀಡಿ ಸಿಗರೇಟುಗಳ ಜೊತೆ ಹೊಸ ಬಟ್ಟೆಗಳನ್ನು ಇಟ್ಟು ಅರ್ಪಿಸಲಾಗುತ್ತದೆ. ನಂತರ ಧೂಪ ಹಾಕಿ ಒಂದತ್ತು ನಿಮಿಷಗಳ ಕಾಲ ಮನೆಯ ಒಳಗೆ ಯಾರೂ ಪ್ರವೇಶಿಸದಂತೆ ಬಾಗಿಲು ಹಾಕಿಕೊಂಡು ಮನೆಯ ಎಲ್ಲರೂ ಹೊರಗೆ ಬಂದು ಬಿಡುತ್ತಾರೆ. ಆ ಸಮಯದಲ್ಲಿ, ಸತ್ತವರು ಬಂದು ಅದೆಲ್ಲಾ ಮುಟ್ಟಿ ರುಚಿ ನೋಡಿ ಹೋಗುತ್ತಾರೆ ಅನ್ನೋದು ನಂಬಿಕೆ. ನಂತರ ಸಂಜೆ ಹೊತ್ತಿಗೆ ಅದೆಲ್ಲಾ ತೆಗೆದು ಬಟ್ಟೆಗಳನ್ನು ಯಾರಿಗಾದರೂ ದಾನ ಮಾಡಿ, ಊಟ ತಿಂಡಿಗಳನ್ನು ಕಾಗೆಗೋ, ದನಕ್ಕೂ ನೀಡಲಾಗುತ್ತದೆ. ಶರಾಬು ಬೀಡಿ ಸಿಗರೇಟಿನ ಅಭ್ಯಾಸವಿದ್ದವರು ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಈ ಆಚರಣೆಯಾದರೂ ಹೇಗೆ ಬಂದಿತೆಂದು ಅರ್ಥವಾದರೆ ಸಾಕು ಮಹಿಷ ದಸರಾ ಆಚರಿಸುವ ಉದ್ದೇಶವೂ ಸರಿಯಾಗಿ ಅರ್ಥವಾಗುತ್ತದೆ.

ಮೂಲ ನಿವಾಸಿಗಳ ಕುಲಪುರುಷ ಮಹಿಷನನ್ನು ಕಳೆದುಕೊಂಡ ನೆನಪಲ್ಲಿ ಪ್ರತೀ ಮಹಾಲಯ ಅಮಾವಾಸ್ಯೆಯಲ್ಲೂ ಮಹಿಷನನ್ನು ಕರೆದು ಅವನಿಗೆ ಎಡೆ ಕೊಟ್ಟು ಕಳಿಸುವ ಆಚರಣೆಯ ರೂಢಿಗೆ ಬಂದಿದೆ. ಅವತ್ತಿನ ಆಚರಣೆಯ ಮುಂದುವರೆದ ಭಾಗವಾಗಿಯೇ ನಮ್ಮ ನಮ್ಮ ಕುಟುಂಬಗಳಲ್ಲೂ ತೀರಿಹೋದವರ ಕರೆದು ಎಡೆ ಕೊಟ್ಟು ಕಳಿಸುವ ಆಚರಣೆಗಳೂ ಮುಂದುವರೆದುಕೊಂಡು ಬಂದಿದೆ. ಇದರಿಂದ ಯಾರಿಗೇನು ನಷ್ಟವಾಯಿತೋ, ಅಪಚಾರವಾಯಿತೋ ಗೊತ್ತಿಲ್ಲ. ಆದರೂ ಮಹಿಷನಿಗೆ ಹುಟ್ಟಿದವರು ಮಹಿಷ ದಸರಾ ಮಾಡಲಿ ಎನ್ನುವಷ್ಟರ ಮಟ್ಟಿಗೆ ಕೊಬ್ಬಿ ಹೋಗಿರುವ ಅರಿವುಗೇಡಿಗಳಿಗೆ ಈ ನೆಲದ ಇತಿಹಾಸ ಆಚರಣೆಗಳನ್ನು ತಿಳಿಸಿ ಹೇಳಬೇಕಿದೆ. ಜೊತೆಯಲ್ಲಿ, ಮೌಡ್ಯಗಳನ್ನು ವಿರೋಧಿಸುವ ಬರದಲ್ಲಿ ಈ ನೆಲದ ಈ ನಮ್ಮೆಲ್ಲಾ ಆಚರಣೆಗಳನ್ನು ದಿಕ್ಕರಿಸುವ ಅತಿ ಬುದ್ದಿವಂತರಿಗೂ, ವೈದಿಕ ಆಚರಣೆಗಳಿಗೂ ನಮ್ಮ ಮೂಲ ಭಾರತೀಯ ಆಚರಣೆಗಳಿಗೂ ಇರುವ ವ್ಯತ್ಯಾಸವನ್ನು ಅರ್ಥ ಮಾಡಿಸಬೇಕಿದೆ. ಬಹುತೇಕ ಮಾನವ ವಿರೋಧಿ ವೈದಿಕ ಸಂಪ್ರದಾಯದ ಜೊತೆ, ನಮ್ಮ ಮೂಲ ನಿವಾಸಿ ಗುಣಗಳನ್ನೂ ದೂರ ಮಾಡಿಕೊಳ್ಳಲು ಹವಣಿಸುತ್ತಿರುವ ಇಂದಿನ ಯುವ ಸಮುದಾಯಕ್ಕೆ ಈ ನೆಲದ ಸಂಪ್ರದಾಯ ಆಚರಣೆಗಳ ಪರಿಚಯ ಮಾಡಿಸಬೇಕಿದೆ. ಅದಕ್ಕಾಗಿಯೇ ಮಹಿಷ ದಸರ ಹೆಚ್ಚು ಪ್ರಸ್ತುತವೆನ್ನಿಸುತ್ತದೆ.

ಮಹಿಷ ಹೇಗೆ ನಮ್ಮ ಶೂದ್ರ ಸಮುದಾಯದ ಮೂಲ ಪುರುಷನೋ ಹಾಗೆಯೇ ಚಾಮುಂಡಿ ಕೂಡ ಆರ್ಯ ದೇವತೆಯೇನಲ್ಲ. ಆಕೆಯೂ ನಮ್ಮ ಶೂದ್ರ ಸಮುದಾಯದ ಹೆಣ್ಣು ಮಗಳೇ, ಭಾರತಕ್ಕೆ ಹೊರಗಿನಿಂದ ಬಂದು ವಕ್ಕರಿಸಿದ ಈ ಆರ್ಯರೆಂಬ ಅನಾಗರಿಕರ ಕುತಂತ್ರದಿಂದಾಗಿ ಮಹಿಷ ಮತ್ತು ಚಾಮುಂಡಿಯ ನಡುವೆ ಏನೋ ವೈಮನಸ್ಯ ಉಂಟಾಗಿ ಚಾಮುಂಡಿ ಮಹಿಷನನ್ನು ಯಾವುದೋ ವಿಧದಲ್ಲಿ ಕೊಂದಿರಬಹುದು. ಚಾಮುಂಡಿ ಮಹಿಷನನ್ನು ಕೊಂದಿದ್ದರೂ, ಆಕೆ ನಮ್ಮದೇ ಸಮುದಾಯದ ಹೆಣ್ಮಗಳಾದ ಕಾರಣ ನಾವು ಆಕೆಯನ್ನೂ ಬಿಟ್ಟು ಕೊಟ್ಟಿಲ್ಲ. ನಮ್ಮ ಕುಟುಂಬದಲ್ಲಿ ಸತ್ತಿರುವ ಹಿರಿಯರ ಮೂಲಕ ಪರೋಕ್ಷವಾಗಿ ಮಹಿಷನಿಗೇ ನಮ್ಮ ಎಡೆ ಇಟ್ಟ ಕಾರ್ಯದ ನಂತರದ ಒಂಬತ್ತು ದಿನಗಳೂ ಆಸಾದಿ ಪರಂಪರೆಯಲ್ಲಿ ಶಕ್ತಿ ದೇವತೆಗಳನ್ನು ಪಟ್ಟಕ್ಕೆ ಕೂರಿಸಿ ಒಂಬತ್ತು ದಿನವೂ ತರತರದ ಅಡುಗೆ, ಆಚರಣೆಗಳ ಮೂಲಕ ಆರಾಧಿಸಿ ಒಂಬತ್ತನೆ ದಿನಕ್ಕೆ ಆಸಾದಿಗಳ ಚೌಡಿಕೆ ಪದ, ಕತೆಗಳನ್ನು ನಡೆಸಿ ಸಾಕಿ ಹಿಡಿಸಲಾಗುತ್ತೆ. ಸಾಕಿ ಎಂದರೆ ಒಂದು ಹೊಸ ಗಡಿಗೆಯ ತುಂಬಾ ಸೇಂದಿ ತುಂಬಿ, ಬೇವಿನ ಸೂಪ್ಪು ಅದರಲ್ಲಿರಿಸಿ, ಎರಡೂ ಅಂಗೈಗಳನ್ನೇ ಕೋಳವೆಯಾಕಾರ ಹಿಡಿದು ಆಸಾದಿಗಳು ಸಾಕು ಸಾಕೆನ್ನುವಷ್ಟು ಸೇಂದಿಯನ್ನು ಹೊಟ್ಟೆ ತುಂಬಿಸಿ, ಸಾಕಿಯ ಕಿಕ್ಕು ನೆತ್ತಿಗೇರಿದ ನಂತರ ನಡೆಯುವುದೇ ದೇವಿಯ ನಿಂದಾಸ್ತುತಿ. ಇವತ್ತಿನ ನಮ್ಮ ಪರಿಸ್ಥಿತಿಗೆ ನೀನೇ ಕಾರಣಳೆಂದು ದೇವಿಯನ್ನು ಹೊಣೆಯಾಗಿಸಿ ಬೈಯ್ಯುವ ಅಶ್ಲೀಲ ಪದಗಳಿಗೆ ಎಣೆಯಿಲ್ಲ. ಒಮ್ಮೆ ಅವಳನ್ನು ಹೊಗಳುತ್ತಾ, ಮಗದೊಮ್ಮೆ ತರತರದಿ ಬೈದು ಹೀಗಳೆಯುತ್ತಾ ದೇವಿಯ ಕೋಪ ನೆತ್ತಿಗೇರಿಸುತ್ತಾ ಅಬ್ಬರಿಸುತ್ತಾರೆ. ಸಾಕ್ಷಾತ್ ದೇವಿಯೇ ಮೈದುಂಬಿ ಬಂದಂತೆ ಮೈಮರೆತು ಹಾಡಿ, ಕುಣಿದು ಸಂತೋಷ ಪಡುತ್ತಾರೆ. ನಮ್ಮನ್ನು ಈ ಸ್ಥಿತಿಗೆ ತಂದ ದೇವಿಯನ್ನು ರಂಡೆ ಮುಂಡೆ ಮುಂತಾಗಿ ಅವಮಾನಿಸಿ ಬೈದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆ ಬೈಗುಳಗಳ ಒಂದು ಜಲಕ್ ಹೀಗಿದೆ.

‘ಅಮ್ಮಾ ಊರ್ ದ್ಯಾವ್ತೆ
ಮನ್ಸಿನ್ ಬೇಲಿ ಕೊಡಮ್ಮ,
ಒಂದ್ ಕೈಲಿ ಬಾಣವ ಹಿಡಿದಿದ್ದಿ
ಒಂದ್ ಕೈಲಿ ಚಕ್ರವ ಹಿಡಿದಿದ್ದಿ
ಒಂದ್ ಕೈಲಿ ತ್ರಿಸೂಲ್ವ ಹಿಡಿದಿದ್ದಿ
ಹಿಂದ ನೋಡಿದ್ರ ಕಡ್ಡಿ ರೂಪ್ವಮ್ಮ
ಮುಂದ ನೋಡಿದ್ರ ಶಿವನ್ ರೂಪ್ವಮ್ಮ
ತೋದನ್ ಬತ್ತಿ
ತೋದನ್ ಬತ್ತಿ
ಬೈದಾರು ಹುಣ್ಸೂರಮ್ಮ ನಿನಗ
ಬೆಳಿ ಕೊಡಮ್ಮ
ಬೆಳೀ ಕೊಡಮ್ಮ
ಹರ್ಕಿ ಕೊಡೂಂತ ಊರೆಲ್ಲಾ ಬಂದು
ರಾಣಿಗೇರ್‌ಗೆ ಹಟ್ಯಾರ
ರಾಣಿಗೇರ್‌ಗೆ ಹಟ್ಯಾರಂತ
ನಾನ್ ಬಂದು ನಿನ್ ಹಟ್ತೀನಮ್ಮಾ……

ಇದು ಉತ್ತರ ಕರ್ನಾಟಕ ಭಾಗದ ಆಸಾದಿಗಳು ಅಥವಾ ರಾಣಿಗೇರರು ಉಪಯೋಗಿಸುವ ಬೈಗುಳದ ಮಾದರಿಯಾದರೆ, ನಮ್ಮ ಬೆಂಗಳೂರು ಭಾಗದ ಆಸಾದಿಗಳ ಬೈಗುಳಗಳು ಹೀಗಿವೆ.

ಛೇ ಚಾಂಡಾಳಿ ಮುಂಡೆ, ಮಾರಿಮುಂಡೆ, ಹಠಾ ಮಾಡಿ ನಾನು ಸಾಕಿರತಕ್ಕಂತ ಕ್ವಾಣನ್ನ ಕಡಿಸೇ ಇದ್ದಿಯಲ್ಲಾ. ಹಠಾ ಮಾಡಿ ನನ್ನ ಕ್ವಾಣನ್ನ ಹೆಂಗೆ ಕಡಿಸಿಕೊಂಡೋ, ಅದೇ ಪ್ರಕಾರವಾಗಿ ನನ್ನ ಕಡಿಸಿಕೊಂಡ್ರೂ ಸಮನೆ ನಾನು ನಿನಗೆ ಆರತಿ ಬೆಳಗೋದಿಲ್ಲ. ನಿನಗೆ ಬಾಯಿ ಬೀಗ ಒಪ್ಪಿಸೋದಿಲ್ಲ. ಈ ತಂದಿರಾ ಟಗರು ನಿನ್ನ ಮುಂದೆ ಕಡಿಯುವುದಿಲ್ಲ.
ಹೀಗೆ ನಾನು ಪ್ರೀತಿಯಿಂದ ಸಾಕಿದ್ದ ಕ್ವಾಣನ್ನ ಕಡಿಸಿಕೊಂಡ ಮುಂಡೆ ರಂಡೆ ಎನ್ನುವಾಗ ಸಾಂದರ್ಭಿಕವಾಗಿ ನೀವು ಆ ಕ್ವಾಣನ್ನ ಮಾರಿಯ ಗಂಡ ದಡ್ಗದ್ರ ಎಂದಾದರೂ ಅರ್ಥ ಮಾಡಿಕೊಳ್ಳಬಹುದು ಅಥವಾ ಕ್ವಾಣ ಎಂದರೆ ನಮ್ಮ ಮೂಲ ಪುರುಷ ಮಹಿಷ ಎಂದಾದರೂ ಅರ್ಥ ಮಾಡಿಕೊಳ್ಳಬಹುದು.
ಹೀಗೆ, ಅಂದು, ಆಡಿ ಎಲ್ಲಾ ಮುಗಿದ ಮೇಲೆ ಶಾಂತರಾಗಿ ಒಟ್ಟು ಕತೆಗೆ ಮಂಗಳ ಹಾಡುವಾಗ ಮಹಿಷನ ಉಲ್ಲೇಖವೂ ಬಂದು ದೇವಿಗೆ ಆರತಿ ಮಾಡಿ ಆ ವರ್ಷದ ಆಚರಣೆಗೆ ಮಂಗಳ ಹಾಡಲಾಗುತ್ತೆ.

ದಯವಿಟ್ಟು ಆಸಾದಿಗಳ ಈ ಮಂಗಳ ಗೀತೆ ಗಮನಿಸಿ.

ಮಂಗಾಳ ಜಯ ಮಂಗಾಳ
ಮಂಗಾಳ ಶುಭ ಮಂಗಾಳ
ವರಾಹ ಮೈಸಾಸುರನಿಗೆ
ಜಯ ಜಯ ಮಂಗಳ ಜಯ ಮಂಗಾಳ
ಮಂಗಾಳ ಜಯ ಮಂಗಾಳ
ಮಂಗಾಳ ಶುಭ ಮಂಗಾಳ
ದುಂಡು ಮಲ್ಲಿಗೆಯಲ್ಲಿ ಎದುರು ಮಂಗಾಳಾರತಿಯ
ಸತ್ಯವಿದ್ದರೆ ನಮ್ಮ ಗ್ರಾಮದವ್ವನೆ
ಸತ್ಯವಿದ್ದರೆ ನಮ್ಮ ಮನೆತಾಯಿ ಗ್ರಾಮದವ್ವನೆ
ಸತ್ಯದಾರತಿ ತಂದೆತ್ತಿರೇ
ಮಂಗಾಳ ಜಯ ಮಂಗಾಳ
ಮಂಗಾಳ ಶುಭ ಮಂಗಾಳ
ಈಕೆ ದೂಪುಗಳೆಲ್ಲಾ ಈಬತ್ತಿ ಪರಿವಾರ
ಆಕೆ ನಮ್ಮಮ್ಮನ ಗುಡಿಯೊಳಗೆ
ದೂಪಾದ ಹೊಗೆಗಾಳು ನಿಲಬಾರದೆ
ಮಂಗಾಳ ಜಯ ಮಂಗಾಳ
ಮಂಗಾಳ ಶುಭ ಮಂಗಾಳ
ಎತ್ತಿದಾರತಿಯೋ ಮುತ್ತೈದೆರೆಲ್ಲಾ
ಬೆಳಗಿದಾರತಿಯೋ
ಮಂಗಾಳ ಜಯ ಮಂಗಾಳ
ಮಂಗಾಳ ಶುಭ ಮಂಗಾಳ
ಆರದಿತೋ ಮಂಗಳಾರತಿಕೋ
ಯಾತದ ಯಲವಂಕ
ಕೋಟಗುಂಪಾಲನು
ಪತಿಯ ನುಡಿದಳೆಂದು ಎತ್ತಿದಳಾರತಿಯ
ಎತ್ತಿದಳಾರತಿಯ ಮುತ್ತೈದೆರೆಲ್ಲಾ
ಬೆಳಗಿದಾರತಿಯ
ಶುಭ ಶುಭ ಮಂಗಾಳ
ಗ್ರಾಮದಮ್ಮನಿಗೆ ಮಂಗಾಳ
ಆರದಿತೋ ಮಂಗಾಳಾರತಿಕೋ
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಅಮ್ಮಯ್ಯಾ……
ಕತೆಗಳೇ ಮುಗುದಾವಲ್ಲಾ ರಾಮಾರಾಮಾ
ಅಮ್ಮಯ್ಯಾ,,, ರಾಮಾರಾಮಾ……..
ಶುಭಂ.

  • ಬಿ. ಆರ್. ಭಾಸ್ಕರ್ ಪ್ರಸಾದ್.
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]