
ಅತ್ಯಾಚಾರಿಗಳಿಗೆ ಧರ್ಮ ಇದೆಯೇ? ಇದ್ದರೆ ಅದು ಯಾವುದು? ಬಹುಶಃ ಹೈದರಾಬಾದ್ ನ ನಗರದ ಹೊರವಲಯದಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದು ಸುಟ್ಟು ಹಾಕಿದ ಅಮಾನವೀಯ ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ ಇಂತಹದ್ದೊಂದು ಪ್ರಶ್ನೆ ಮೂಡುವುದು ಸಹಜ.
ಅತ್ಯಾಚಾರಿಗಳನ್ನು ಒಂದು ಧರ್ಮದ ಆಧಾರದಲ್ಲಿ ಗುರುತಿಸುವ ಮೂಲಕ ಆ ಇಡೀ ಧರ್ಮೀಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮನಸ್ಥಿತಿಗಳು ಭಾರತದಲ್ಲಿ ಇದು ಮೊದಲಲ್ಲ. “ನನ್ನ ಹೆಸರು ಮುಹಮ್ಮದ್ ಪಾಶಾ, ನಾನೊಬ್ಬ ರೇಪಿಸ್ಟ್” ಅಂತ ಬಿಜೆಪಿ ಪರ ಭಾಷಣಗಾರ ಚಕ್ರವರ್ತಿ ಸೂಲಿಬೆಲೆ ಅವರು ಒಂದು ಟ್ವೀಟ್ ಮಾಡುತ್ತಾರೆ. ಈ ಟ್ವೀಟ್ ನ್ನು ನೆಟ್ಟಿಗರು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳ ಫೋಟೋ ತಾವ್ಯಾಕೆ ಹಾಕಿಲ್ಲ? ಅತ್ಯಾಚಾರಿಗಳಲ್ಲಿ ಹಿಂದೂಗಳೂ ಇದ್ದರಲ್ಲ, ಈ ತಾರತಮ್ಯ ಏಕೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೇವಲ ಒಬ್ಬ ಆರೋಪಿಯ ಚಿತ್ರ ಬಳಸಿದ್ದರಿಂದಾಗಿ ಸಹಜವಾಗಿಯೇ ಈ ಪ್ರಶ್ನೆಗಳು ಕೇಳಿ ಬಂದಿವೆ.
ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಿದ್ಯಮಾನಗಳು ಅತ್ಯಾಚಾರಿಗಳಲ್ಲಿ ಯಾರು ಒಳ್ಳೆಯವರು ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ. ಆರೋಪಿ ಮುಹಮ್ಮದ್ ಆರಿಫ್ ಹಾಗೂ ಉಳಿದ ಆರೋಪಿ ಗಳಾದ ಜೊಲ್ಲು ನವೀನ್, ಜೊಲ್ಲು ಶಿವಾ ಮತ್ತು ಚಿಂತಕುಂಟಾ ಕೇಶವುಲು ಇವರಿಗೂ ಏನು ವ್ಯತ್ಯಾಸ? ಇವರೆಲ್ಲರೂ ಅತ್ಯಾಚಾರದ ಆರೋಪ ಹೊತ್ತಿರುವವರೇ ಆಗಿದ್ದಾರೆ. ಆರೋಪಿಗಳಾದ ಜೊಲ್ಲು ನವೀನ್, ಜೊಲ್ಲು ಶಿವಾ ಮತ್ತು ಚಿಂತಕುಂಟಾ ಕೇಶವುಲು, ಆರೋಪಿ ಮುಹಮ್ಮದ್ ಆರೀಫ್ ನಷ್ಟೇ ಅತ್ಯಾಚಾರದ ಪಾಲುದಾರರು. ಇವರನ್ನು ಧರ್ಮದ ಆಧಾರದಲ್ಲಿ ಗುರುತಿಸುವುದು ನಿಜಕ್ಕೂ ದುರಂತವಲ್ಲವೇ?
ನಾಲ್ವರು ಆರೋಪಿಗಳಲ್ಲಿ ಒಬ್ಬ ಆರೋಪಿಯನ್ನು ಯಾರೇ ತೋರಿಸಿದರೂ ಅಥವಾ ನಾಲ್ವರು ಆರೋಪಿಗಳಲ್ಲಿ ಮೂವರು ಆರೋಪಿಗಳನ್ನು ಯಾರೇ ತೋರಿಸಿದರೂ, ಅದು ಆರೋಪಿಗಳ ರಕ್ಷಣೆಗೆ ನಿಂತಂತಾಗುತ್ತದೆ ಎನ್ನುವುದು ಸತ್ಯ. ಅತ್ಯಾಚಾರಿಗಳಿಗೆ ಯಾವುದೇ ಧರ್ಮವಿಲ್ಲ, ಅವರ ಧರ್ಮವೇ ಅತ್ಯಾಚಾರ. ಯಾರೋ ಅನಾಗರಿಕರು ಅತ್ಯಾಚಾರ ಮಾಡುತ್ತಾರೆ. ನಾಗರಿಕರೆನಿಸಿಕೊಂಡ ವಿದ್ಯಾವಂತರು ಅದನ್ನು ಧರ್ಮದ ಆಧಾರದಲ್ಲಿ ಪಾಲು ಮಾಡಿಕೊಳ್ಳುತ್ತಾರೆಂದರೆ, ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಆಲೋಚಿಸಬೇಕಿದೆ.
ಅತ್ಯಾಚಾರಿ ಹಿಂದುವೋ? ಮುಸಲ್ಮಾನನೋ ಎನ್ನುವ ಆಧಾರದಲ್ಲಿ ಅತ್ಯಾಚಾರವನ್ನು ನೋಡಿ ಮರುಕ ಪಡುವ ಸಾಲಿನಲ್ಲಿ ನಾವು ನಿಂತಿದ್ದೇವೆ ಎಂದರೆ ಅದರಷ್ಟು ಹೀನಾಯ ಸ್ಥಿತಿ ಮತ್ತೊಂದಿಲ್ಲ. ಅತ್ಯಾಚಾರಿಗಳಿಗೆ ಬೆಂಬಲ ನೀಡಿದಷ್ಟೇ ಘೋರ ಅಪರಾಧ ಅದು. ಹಾಗಾಗಿ ಜನರು ಅತ್ಯಾಚಾರಿಗಳನ್ನು ಅತ್ಯಾಚಾರಿಗಳಾಗಿಯೇ ನೋಡಬೇಕು. ಅಂತಹವರ ವಿರುದ್ಧ ಒಗ್ಗೂಡಿ ದೇಶದ ಕಾನೂನಿನಡಿಯಲ್ಲಿ ನೇಣುಕಂಬಕ್ಕೆ ಏರಿಸಬೇಕು. ಇದು ಅತ್ಯಾಚಾರಿಗಳಿಗೆ ನೀಡಬೇಕಾದ ನಿಜವಾದ ಶಿಕ್ಷೆ.