Sunday, May 31 , 2020
ಮಾನವತೆಯ ಮೇರು ಸಾದೃಶ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

ಭಾರತ ಇತಿಹಾಸದ ಪುಟಗಳಲ್ಲಿ ಕಡೆಗಣನೆಯಾಗಿರುವ ಬಹುಜನರ ಏಳಿಗೆಗೆ ತನ್ನ ಶ್ರಮ, ತ್ಯಾಗ, ಬಲಿದಾನ ಮಾಡಿ ನಮಗಾಗಿ ಮಿಡಿದಂತಹ ನೂರಾರು ಮಹಾಪುರುಷರಗಳ ಚರಿತ್ರೆಗಳು ದಾಖಲಾಗಿಲ್ಲ, ದಾಖಲಾಗಿದ್ದರೂ ಅವುಗಳ ತಿರುಚಲಾಗಿದೆ ಅಥವಾ ಅಸ್ಪಷ್ಟ ಮಾಹಿತಿ ನೀಡಲಾಗಿ ಗೊಂದಲಕ್ಕೊಳಪಟ್ಟಿರುವುದು ಈ ನಾಡಿನ ಬಹುದೊಡ್ಡ ದುರಂತ. ಇದನ್ನು ಎಸಗಿರುವುದು ಘೋರ ಅಪರಾಧ ಇಂತಹ ಮಹಾಪುರುಷರ ನಿಜವಾದ ಇತಿಹಾಸ ಹುಡುಕುತ್ತಾ ಹೋದಂತೆ ಚಾರಿತ್ರ್ಯಾರ್ಹ ವ್ಯಕ್ತಿಗಳು ಸಮಾನತೆಯ ಮತ್ತು ಮಾನವತೆಯ ನೆಲೆಗಟ್ಟಿನ ಮೇಲೆ ಸಮಾಜದ ಪರ ದನಿ ಎತ್ತಿದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿ ಸಾರಿದ ಸಂಸ್ಥಾನವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಪುರುಷರಲ್ಲಿ ಮಹಿಷಮಂಡಲ ದೊರೆ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  ಅವರ ಇತಿಹಾಸ ದೊರಕುತ್ತದೆ.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರ ಭಾರತದಲ್ಲಿ ಮಾದರಿ ರಾಜ್ಯಾಡಳಿತಕ್ಕೆ ಎಲ್ಲರಿಗೂ ನೆನಪಾಗುವುದು ಮೈಸೂರು ಸಂಸ್ಥಾನ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1884 ಜೂನ್ 4 ರಂದು ತಂದೆ ಚಾಮರಾಜ ಒಡೆಯರ್ ತಾಯಿ ಕೆಂಪರಾಜಮ್ಮಣ್ಣಿರವರ ಮಗನಾಗಿ ಜನಿಸಿದ ಇವರು, ಉತ್ತಮ ಶಿಕ್ಷಣ ಪಡೆದರು, ಕನ್ನಡ, ಇಂಗ್ಲಿಷ್, ಉರ್ದು, ಪಾರ್ಸಿ, ಭಾಷೆಗಳಲ್ಲಿ ಪಾಂಡಿತ್ಯ ಪಡೆದರು ತಂದೆ ಕಲ್ಕತ್ತ ಪ್ರವಾಸದಲ್ಲಿದಾಗ ತೀರಿ ಹೋದರು. ಹೀಗಾಗಿ 10 ವರ್ಷ ವಯಸ್ಸಿನಲ್ಲಿಯೇ ಒಡೆಯರ್ ಅಧಿಕಾರಕ್ಕೆ ಬಂದರು. ಅಪ್ರಾಪ್ತ ವಯಸ್ಕರಾಗಿವುರಿಂದ ಅವರ ತಾಯಿ ಕೆಂಪರಾಜಮ್ಮಣಿ ವಾಣಿವಿಲಾಸ ಸನ್ನಿದಾನರವರು ರಾಜಪ್ರತಿನಿಧಿಯಾಗಿದ್ದರು. ನಂತರದಲ್ಲಿ 1902ರಲ್ಲಿ 18 ವರ್ಷ ತುಂಬಿದ ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ವಹಿಸಿಕೊಂಡರು.

ದಕ್ಷತೆ, ಸಮರ್ಥತೆ, ವಿದ್ಯಾಪ್ರೌಢಿಮೆ, ಲೋಕಾನುಭವ, ವಿವೇಚನಾಶಕ್ತಿ, ಸಚ್ಚಾರಿತ್ರ್ಯ, ಕಾರ್ಯಶ್ರದ್ಧೆ ಸಂಯಮಶೀಲತೆಯಿಂದೆ ಕೂಡಿದ ನಾಲ್ವಡಿಯವರು ಅಧಿಕಾರ ಸ್ವೀಕರಿಸಿದಾಗ “ನನ್ನ ಮೇಲೆ ಈ ದಿನ ಹೊರಿಸಲ್ಪಟ್ಟಿರುವ ಜವಾಬ್ದಾರಿಯು ಎಷ್ಟು ಮಹತ್ತರವಾದದೆಂದು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ ಇದನ್ನು  ಮಾತಿನಿಂದಲ್ಲ ಕಾರ್ಯದಿಂದ  ಸಾಬೀತುಪಡಿಸಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ. ನನ್ನ ಪ್ರಜೆಗಳು ಸುಖ ಸಂತೋಷದಿಂದಿರಲು ಎಂದು ಕುಂದುಂಟಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಸಂಸ್ಥಾನದ ಸ್ಥಿತಿಯು ಇನ್ನು ಉತ್ತಮವಾಗುವಂತೆ ಮಾಡುತ್ತೇನೆ. ಯಾವ ವ್ಯಕ್ತಿಗಾಗಲಿ, ತಂತ್ರಕ್ಕಾಗಲಿ ಹಿಂಜರಿಯದೆ, ಒಳಗಾಗದೆ ನನ್ನ ಪ್ರಜೆಗಳ ನಿರಂತರ  ರಕ್ಷಣೆಗಾಗಿ ಕಾರ್ಯಬಾರ ನಿರ್ವಹಿಸುತ್ತೇನೆ. ತಮ್ಮ ಸಂಸ್ಥಾನದ ಆಡಳಿತದ ವ್ಯವಸ್ಥೆಯ ಎಲ್ಲಾ ಹಂತಗಳನ್ನು ಪ್ರಜ್ಞಾವಂತಿಕೆಯಿಂದ ಗಮನಿಸಿ ಪ್ರಜೆಗಳ ಹಿತಾಶಕ್ತಿಗಳನ್ನು ಕಾಪಾಡುತ್ತೇನೆ ಎಂದರು.

ನಾಲ್ವಡಿಯವರ ತಂದೆ ಚಾಮರಾಜ ಒಡೆಯರು 1881ರಲ್ಲಿ ರೈತರು, ವರ್ತಕರು ಮತ್ತು ಇತರ ಪ್ರತಿನಿಧಿಗಳಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆಯನ್ನು ರಚಿಸಿದರು. ಭಾರತದಲ್ಲಿ ಮೊದಲ ಬಾರಿಗೆ ಅಸ್ಥಿತ್ವಕ್ಕೆ ಬಂದ ಈ ಜನ ಪ್ರತಿನಿಧಿಸಭೆ ಇತರ ಸಂಸ್ಥಾನಗಳಿಗೆ ಮಾದರಿಯಾಯಿತು. ನಂತರದ ದಿನಗಳಲ್ಲಿ ನಾಲ್ವಡಿಯವರು ಅಸ್ಪøಶ್ಯರನ್ನು  ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ ಮಾಡುವ ಅವಕಾಶವನ್ನ ಕಲ್ಪಿಸಿಕೊಟ್ಟರು. 1881ರಲ್ಲಿ ಜಾರಿಯಾದ ಪ್ರಜಾಪ್ರತಿನಿಧಿಗಳ ಸಭೆ ಜನತೆಯ ಅಶೋತ್ತರಗಳಿಗೆ ದನಿಯಾಗಿ, ಪರಿವರ್ತನೆಗಾರರಿಂದ ಆರಂಭಿಸಿತು.

ಹಿಂದುಳಿದ ವರ್ಗಗಳನ್ನು ತುಚ್ಛೀಕರಿಸಿ ನೋಡುವ ಸಂದರ್ಭದಲ್ಲಿ ಬ್ರಾಹ್ಮಣೇತರ ಅಂದರೆ, ಹಿಂದುಳಿದ ವರ್ಗಗಳಿಗೆ 1902ರಂದು ಅಧಿಕಾರ ಸ್ವೀಕರಿಸಿದ ದಿನದಿಂದಲೇ ಹಿಂದುಳಿದ ಸಮುದಾಯಗಳ, ಸಂಘಟನೆಗಳನ್ನು ಕಟ್ಟಿಕೊಂಡು ಸಂಘಟಿತರಾಗಿ ಬಲಗೊಳ್ಳಬೇಕೆಂದು 1904ರಲ್ಲಿ ವೀರಶೈವ ಮಹಾಸಭಾ, 1905ರಲ್ಲಿ ಮೈಸೂರು ಲಿಂಗಾಯಿತ ಶೈಕ್ಷಣಿಕ ದತ್ತುನಿಧಿ, 1906ರಲ್ಲಿ ಒಕ್ಕಲಿಗರ ಸಂಘ, 1909ರಲ್ಲಿ  ಕೇಂದ್ರೀಯ ಮಹಮದಿಯ ಸಂಘ, ಕಟ್ಟಲು ಸಹಕರಿಸಿ ಕಟಿಬದ್ಧರಾಗಿ ದುಡಿದು ಸಂಸ್ಥಾನದಲ್ಲಿ ನೈತಿಕ, ಬೌದ್ದಿಕ, ಬಲತುಂಬಿ ಸಾಮಾಜಿಕ ಭದ್ರತೆ ಒದಗಿಸಿ ಹಿಂದುಳಿದ ವರ್ಗಗಳನ್ನು ಕತ್ತಲಿನ ಬದುಕಿನಿಂದ ಬೆಳಕಿನಡೆಗೆ ಹೊರತಂದು ಹಿಂದುಳಿದ ವರ್ಗಗಳ ನೇತಾರರೆನಿಸಿದರು.

ಸರ್ಕಾರದ ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಹಿಂದುಳಿದ ಜಾತಿಗಳಿಗೆ ಸೂಕ್ತ ಪ್ರಾತಿನಿತ್ಯ ನೀಡಬೇಕೆಂದು ಈ ನಿರ್ಣಯ ಕೈಗೊಂಡು. ಫೆಬ್ರವರಿ 10-1918ರಂದು ಮೈಸೂರಿನಲ್ಲಿ ಪ್ರಜಾಮಿತ್ರ ಮಂಡಳಿ ಶಾಖೆಯನ್ನು ಪ್ರಾರಂಭಿಸುತ್ತಾರೆ. ಹಿಂದುಳಿದ ವರ್ಗಗಳಿಗೆ ಕಾನೂನು ಬದ್ಧವಾಗಿ ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಒದಗಿಸುವುದು ಸೂಕ್ತವೆಂಬ ಅಂತಿಮ ತೀರ್ಮಾನಕ್ಕೆ ಬಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂದಿನ ಮುಖ್ಯನ್ಯಾಯಾಧೀಶರಾಗಿದ್ದ ಸರ್.ಲೆಸ್ಲಿಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ 23-8-1918ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ “ಹಿಂದುಳಿದ ವರ್ಗಗಳ ಆಯೋಗ” (ಮಿಲ್ಲರ್ ಆಯೋಗ) ಸ್ಥಾಪಿಸಿದರು. ಇದರ ಶಿಫಾರಸ್ಸಿನ ಮೇರೆಗೆ ನಾಲ್ವಡಿಯವರು ಶೂದ್ರ ಅತಿಶೂದ್ರರಿಗೆ ಮೀಸಲಾತಿ ನೀಡಲು ಮುಂದಾದಾಗ ಆಗಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಹೀಗೆ ಮಾಡುವುದರಿಂದ ದಕ್ಷತೆ ಮತ್ತು ಅರ್ಹತೆ ಹಾಳಾಗುತ್ತದೆ ಎಂಬ ನೆಪವೊಡ್ಡಿ ಅದನ್ನು ವಿರೋಧಿಸಿ ರಾಜೀನಾಮೆ ನೀಡುವುದಾಗಿ ಬೆದರಿಸಿದರು. ಆದರೆ ರಾಜಶ್ರೀ ನಾಲ್ವಡಿಯವರು ನಾನು ಹಿಂದುಳಿದ ಜಾತಿಯಲ್ಲಿ ಅರ್ಹರನ್ನ ದಕ್ಷರನ್ನ ಸೃಷ್ಟಿ ಮಾಡಿರುತ್ತೇನೆ. ಹಿಂದುಳಿದವರ ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಹೇಳಿ ವಿಶ್ವೇಶ್ವರಯ್ಯನವರಿಗೆ ರಾಜೀನಾಮೆ ನೀಡಲು ಸೂಚಿಸಿ 1921ರಲ್ಲಿ ತನ್ನ ಸಂಸ್ಥಾನದ ಎಲ್ಲಾ ಹುದ್ದೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಸ್ಪøಶ್ಯರಿಗೆ ಶೇಕಡ 75ರಷ್ಟು ಮೀಸಲಾತಿ ನೀಡುವುದರ ಮೂಲಕ ಜನರ ಸ್ವಾವಲಂಬನೆ ಬದುಕಿಗೆ ಸ್ವಾಭಿಮಾನದಿಂದ ಬಾಳುವಂತೆ ಮಾಡುವುದರ ಮೂಲಕ ಅವರು ಸರ್ವ ಸಮುದಾಯಗಳಲ್ಲಿ ಸಮಾನತೆಯನ್ನು ತರುವಂತೆ  ಮಾಡಿ ರಾಜಕೀಯ ಮತ್ಸದ್ದಿ ಸಮಸಮಾಜದ ನಿಮಾತೃ ಎನಿಸಿದರು.

ಮೈಸೂರು ಪ್ರಾಂತ್ಯದ ಬಹುತೇಕ ಭಾಗಗಳು ಬರಡಾಗಿದ್ದ ಪ್ರದೇಶದಲ್ಲಿ ನೀರುಣಿಸುವ ಪ್ರಯತ್ನದ ಫಲವಾಗಿ ಕೆ.ಆರ್.ಎಸ್. ಅಣ್ಣೆಕಟ್ಟು ನಿರ್ಮಾಣವು ಅಧಿಕೃತವಾಗಿ 1911ರಲ್ಲಿ ಆರಂಭಿಸುತ್ತಾರೆ. ಅವರ ಕಾಲಕ್ಕೆ 2.5 ಕೋಟಿ ವೆಚ್ಚದಲ್ಲಿ ಕೃಷ್ಣರಾಜಸಾಗರ ಅಣ್ಣೆಕಟ್ಟು ನಿರ್ಮಿಸುತ್ತಾರೆ. ಸತತ 21 ವರ್ಷ ದೀರ್ಘಕಾಲದವರೆಗೆ ಸಾವಿರಾರು ಜನ ಕಾರ್ಮಿಕರು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡು. 1931ರಲ್ಲಿ ಅಣ್ಣೆಕಟ್ಟನ್ನು ಪೂರ್ಣಗೊಳಿಸಿದರು. ಅವರ ಕನಸು, ತ್ಯಾಗ, ಶ್ರಮ. ತನು. ಮನ, ಧನ ಅರ್ಪಿಸಿ ತನ್ನ ಕುಟುಂಬದ ಸಕಲಭರಣಗಳನ್ನು ಒತ್ತೆಯಿಟ್ಟು ಕೃಷ್ಣರಾಜಸಾಗರ ಜಲಾಶಯ ಪೂರ್ಣಗೊಳಿಸಿದರು. 1932ರಲ್ಲಿ ಕೆ.ಆರ್.ಎಸ್. ಜಲಾಶಯದ ನೀರನ್ನು ಅಧಿಕೃತವಾಗಿ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನಾಲ್ವಡಿಯವರು ಹಸಿರು ನಿಶಾನೆ ಘೋಷಿಸಿದರು. ಕೆ.ಆರ್.ಎಸ್. ಕಾವೇರಿ ನದಿಪಾತ್ರಕ್ಕೆ ಒಳಪಡುವ ಎಲ್ಲ ರೈತರು, ನಾಲ್ವಡಿಯವರ ಅನ್ನದ ಋಣಕ್ಕೆ ಒಳಗಾಗಿದ್ದಾರೆ.

ದೇವದಾಸಿ ಮತ್ತು ಗೆಜ್ಜೆಪೂಜೆಯಂತಹ ಅನಿಷ್ಠ ಪದ್ಧತಿಯನ್ನು 1909ರಲ್ಲಿ ತನ್ನ ಸಂಸ್ಥಾನದಲ್ಲಿ ನಿಷೇಧಿಸಿ ಅವರ ಬದುಕಿಗೆ ಭದ್ರತೆಗಾಗಿ ನಿವೇಶನಗಳನ್ನು ನೀಡಿದರು. ತನ್ನ ಅರಮನೆಯ ನೃತ್ಯ ಮಾಡುತ್ತಿರುವುದನ್ನು ನಿಲ್ಲಿಸಿದರು. ಶಿಕ್ಷಣದ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದರು. 1913ರಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದು. ತಳ ಸಮುದಾಯದವರು ಎದುರಿಸಿದ ಪರಿಸ್ಥಿತಿಗಳನ್ನು ಸುಧಾರಿಸಲು ಹಲವಾರು ಸವಲತ್ತುಗಳನ್ನು ತಂದು ಅವರನ್ನ ಪ್ರತಿಭಾವಂತರಾಗಿ ಮಾಡಲು ಅಸ್ಪೃಶ್ಯರಿಗೆ 800 ಶಾಲೆಗಳನ್ನು ಹಾಗೂ ಹಾಸ್ಟೆಲ್‍ ಗಳನ್ನು ತೆರೆದು ಅಸ್ಪೃಶ್ಯನ ಬದುಕಿನಲ್ಲಿ ಜ್ಞಾನದ ಬೆಳಕಾದರು.

1936ರಲ್ಲಿ ಅಸ್ಪೃಶ್ಯರಿಗೆ ಪ್ರಥಮ ಬಾರಿಗೆ ಅರಮನೆ ಪ್ರವೇಶ ನೀಡಿ ಸಮಸಮಾಜದ ನಿರ್ಮಾಣಕ್ಕೆ ಕಾರಣೀಕರಾದರು. 1902ರಲ್ಲಿ ಏಷ್ಯಾಖಂಡದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆಯನ್ನು ಶಿವನಸಮುದ್ರದಲ್ಲಿ ಸ್ಥಾಪಿಸಿ ಅದರಿಂದ ಜಲವಿದ್ಯುತ್ ಉತ್ಪಾದಿಸಿ 1905ರಲ್ಲಿ ಬೆಂಗಳೂರಿಗೂ ಹಾಗೂ 1906ರಲ್ಲಿ ಮೈಸೂರು ನಗರಕ್ಕೂ ವಿದ್ಯುತ್ ಪೂರೈಕೆ ಮಾಡುವುದರ ಮೂಲಕ ಕತ್ತಲು ತುಂಬಿದ ರಾಜ್ಯಕ್ಕೆ ಬೆಳಕಿನ ಕಿಡಿಯನ್ನು ಹಚ್ಚಿ ಮೈಸೂರು ಪ್ರಾಂತ್ಯವನ್ನ ಜಾಗತಿಕ ಮಟ್ಟದಲ್ಲಿ ಬೆಳಗಿಸಿದ ಕೀರ್ತಿ ನಾಲ್ವಡಿಯರದು.

ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ 1916ರಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಿದ್ದು ಶಿಕ್ಷಣ ಪ್ರಗತಿಯ ಮಹತ್ವದ ಹೆಜ್ಜೆಯಾಗಿ ಹಲವಾರು ತಾಂತ್ರಿಕ ಶಾಲೆಗಳು ಮತ್ತು ವೈದ್ಯಕೀಯ ಶಾಲೆಗಳು, ಕಾಲೇಜುಗಳು ಮತ್ತು ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಕಲಾವಿಜ್ಞಾನ ಕಾಲೇಜು, ಪಶುವೈದ್ಯಕೀಯ ಕಾಲೇಜು, ಬೆಂಗಳೂರು ಮತ್ತು ಮೈಸೂರಿನ ವೈದ್ಯಕೀಯ ಕಾಲೇಜು ಅಸ್ಥಿತ್ವಕ್ಕೆ ಬಂದವು ಸಾರ್ವಜನಿಕ ಆರೋಗ್ಯಕ್ಕಾಗಿ ಹೆಚ್ಚಿನ ಗಮನಹರಿಸಿ ಆರೋಗ್ಯದ ಬಗ್ಗೆ ಮಹತ್ವ ನೀಡಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ಶಿವಮೊಗ್ಗದ ಮೆಗ್ಯಾನ್ ಆಸ್ಪತ್ರೆ, ಕೋಲಾರದ ನರಸಿಂಹರಾಜ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಮಾನಸಿಕ ಆಸ್ಪತ್ರೆ, ಮೈಸೂರು ಕೃಷ್ಣರಾಜ ಆಸ್ಪತ್ರೆ ಮತ್ತು ಚಲುವಾಂಬ ಆಸ್ಪತ್ರೆ ಪಾರ್ಶ್ವವಾಯು ಆಯುರ್ವೇದ ಆಸ್ಪತ್ರೆಗಳನ್ನು ಕಟ್ಟಿಸಿದರು.

ಕೈಗಾರಿಕ ಪ್ರಗತಿ ಸಾಧಿಸಲು 1923ರಲ್ಲಿ ಭದ್ರವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಶಿವಮೊಗ್ಗ ಮತ್ತು ಮೈಸೂರು ಗಂಧದ ಎಣ್ಣೆ ಕಾರ್ಖಾನೆ ಮಂಡ್ಯದ ಸಕ್ಕರೆ ಕಾರ್ಖಾನೆ, ಮಂಗಳೂರು ಹೆಂಚು ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನೆ ಕೇಂದ್ರ, ರಸಾಯನಿಕ ಕಾರ್ಖಾನೆ. ಮೈಸೂರು ಮತ್ತು ಚನ್ನಪಟ್ಟಣ ರೇಷ್ಮೆ ಕಾರ್ಖಾನೆ ಸ್ಥಾಪನೆಗೊಂಡವು. ಮೈಸೂರಿನಲ್ಲಿ ಆಕಾಶವಾಣಿ ನಿಲಯ, ಮೈಸೂರು ಬ್ಯಾಂಕ್ ಸ್ಥಾಪಿಸಿ ಸಂಸ್ಥಾನದ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಅಭಿವೃದ್ಧಿಯ ಕಾರ್ಯಕ್ರಮ ಹಮ್ಮಿಕೊಂಡರು. ಅವುಗಳಲ್ಲಿ ರಾಜ್ಯ ಸಹಕಾರಿ ಅಪೇಕ್ಷ ಬ್ಯಾಂಕ್,  ಭೂಅಭಿವೃದ್ಧಿ ಬ್ಯಾಂಕು ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸಿದರು.

ಮೈಸೂರು-ಮಂಡ್ಯ, ಬೆಂಗಳೂರು-ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಕಡೂರುಗಳಿಗೆ ಆಧುನಿಕ ರಸ್ತೆ ಸೌಲಭ್ಯ ಹಾಗೂ ರೈಲ್ವೆ ಸೌಲಭ್ಯಗಳನ್ನು ಕಲ್ಪಿಸಿದರು.  1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಕರ್ನಾಟಕ ರಾಜ್ಯಕ್ಕೆ ಕನ್ನಡ ನಾಡುನುಡಿಯ ಅಭಿವೃದ್ಧಿಗೆ ತನ್ನದೆ ಅಸಮಾನ್ಯವಾದ ಕೊಡುಗೆಗಳನ್ನು ನೀಡಿದ ಈ ದೇಶದ ಎಲ್ಲಾ ಪ್ರಾಂತೀಯ ಸಂಸ್ಥಾನಗಳಿಗೂ ಮಾದರಿಯಾಗಿ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ. 1909ರಲ್ಲಿ ದೇವದಾಸಿ, 1936ರ ಜುಲೈ 14 ರಂದು ವೇಶ್ಯೆವೃತ್ತಿ ತಡೆಗಟ್ಟಲು ಕಾನೂನುಗಳನ್ನು ಜಾರಿಗೆ  ತಂದರು 1933 ಜೂನ್ 29 ರಂದು ಹಿಂದೂ ಸ್ತ್ರೀಯರಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಪಡೆಯವ ಹಿಂದೂ ಲಾ ವುಮೆನ್ಸ್ ಜಾರಿಗೆ ತಂದರು. 1936ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಪ್ರಥಮ ಬಾರಿಗೆ ಅಸ್ಪೃಶ್ಯರಿಗೆ ಅರಮನೆ ಪ್ರವೇಶ ಮಾಡಲು ಅವಕಾಶ ನೀಡಲಾಯಿತು.

ಇನ್ನು ಹಲವಾರು ಸಾಮಾಜಿಕ ಸುಧಾರಣೆಗಳು, ಶೈಕ್ಷಣಿಕ ಸುಧಾರಣೆಗಳು ಮತ್ತು ಕೃಷಿ, ನೀರಾವರಿ ಯೋಜನೆ ವಿದ್ಯುತ್‍ಚ್ಛಕ್ತಿ ಕೈಗಾರಿಕೀಕರಣವು ಸಾರಿಗೆ ಸಂಪರ್ಕ ಅಭಿವೃದ್ಧಿ ರೈಲುಸಾರಿಗೆ ಸಾಹಿತ್ಯ ಸಂಗೀತ ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಇವರ ಆಡಳಿತದಲ್ಲಿ ತಂದ ಬದಲಾವಣೆಗಳು ಈಗಿನ ಸರ್ಕಾರಗಳಿಗೆ ದಿಕ್ಸೂಚಿಯಾಗಬೇಕಾಗಿದೆ ಆದರ್ಶನಾಡೊಂದನು ಕಟ್ಟಿದ ಸಾಮಾಜಿಕ ಪರಿವರ್ತನೆಯ ಮಹಾಪುರುಷ

ಇಂತಹ ಮಹಾನ್ ವ್ಯಕ್ತಿ ಮೈಸೂರು ಸಂಸ್ಥಾನವನ್ನು ಭಾರತ ಸಂಸ್ಥಾನಗಳಲ್ಲಿ ಮಾದರಿ ಸಂಸ್ಥಾನವಾಗಿ ಮಾಡಿದ ಕೀರ್ತಿ ನಾಲ್ವಡಿಯವರದು. ಈ ಸಂಸ್ಥಾನದ ಅಭಿವೃದ್ಧಿಯನ್ನು ಭಾರತದ ಇನ್ನಾವುದೇ ಸಂಸ್ಥಾನದ ಇತರೆ ರಾಜರುಗಳು ಮಾದರಿ ಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಮಾದರಿಯಾಗಿಸಿಕೊಳ್ಳದೆ ಇತಿಹಾಸದ ವೈಭವದಿಂದ ನೇಪತ್ಯಕ್ಕೆ ಸರಿಸಿದ್ದರ ಹಿಂದೆ ಬಹಳ ದೊಡ್ಡ ಹುನ್ನಾವಿದೆ. ಬ್ರಾಹ್ಮಣವಾದಿಗಳ ಕುತಂತ್ರಗಳಿಗೆ ಬೆಂಬಲ ನೀಡಿದ ಬ್ರಾಹ್ಮಣೇತರ ನಾಯಕರು ಮಾತ್ರ ಚರಿತ್ರೆ ಎಂದೆಂದಿಗೂ ಕ್ಷಮಿಸಲಾರದು. ಮಹಾರಾಜರ ಬೆಂಬಲ ಮತ್ತು ಸಹಾಯ ಪಡೆದು ಬ್ರಾಹ್ಮಣೇತರ ಚಳುವಳಿಯ ಹುಟ್ಟಿಹಾಕಿ ಮೇಲಕ್ಕೆ ಬಂದ ಶೂದ್ರ ಜಾತಿಗಳ ಮುಖಂಡರುಗಳು ಬ್ರಾಹ್ಮಣವಾದಿಗಳ ಕಾಂಗ್ರೆಸ್ ಜೊತೆ ಸೇರಿ ಮಹಾರಾಜರ ಬೆನ್ನಿಗೆ ಚೂರಿ ಹಾಕಿದ್ದು ಬಹು ದೊಡ್ಡ ಘೋರ ಮೋಸ.

ಸಾಮಾಜಿಕ ನ್ಯಾಯದ ಪರ ದನಿ ಎತ್ತಿದ ಮಹಾಚೇತನ ಜುಲೈ 31-1940ರಂದು ತೀವ್ರ ಹೃದಯಾಘಾತಕ್ಕೆ ಒಳಗಾದ ರಾಜಶ್ರೀ ಪ್ರಜಾಚಿಂತಕ ಸಾಮಾಜಿಕ ಪರಿವರ್ತನೆಯ ರೂವಾರಿ ನವ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್  ಈ ನಾಡಿನ ರಾಜಪ್ರಭುತ್ವದ ನೆಲೆಯಲ್ಲಿ ಪ್ರಜಾಪ್ರಭುತ್ವದ ಚಿಂತನೆಗಳ ಹರಿಸಿದ ದೂರದೃಷ್ಟಿ ಇನ್ನಿಲ್ಲವಾದರು.  ಮೈಸೂರು ಸಂಸ್ಥಾನದ ಪ್ರಜಾಪರಿಪಾಲಕನಿಗೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವವನ್ನು ತಂದು ಕೊಟ್ಟ ಕೀರ್ತಿಗೆ  ಪತ್ರಿಕೆಗಳು ಸಾಕ್ಷಿಯಾಗಿವೆ.

►ಇಂಗ್ಲೆಂಡಿನ ಗ್ರಾಫಿಕ್ ಎಂಬ ಪತ್ರಿಕೆ 1906 ಮೇ- ಮಾರ್ಚ್ ಸಂಚಿಕೆಯಲ್ಲಿ ಮಾದರಿ ಸಂಸ್ಥಾನ ಎಂಬ ಹೆಮ್ಮೆಯ ಹೆಸರಿಗೆ ಮೈಸೂರು ಸಂಸ್ಥಾನವೇ ವಿನಃ ಭಾರತೀಯ ಮತ್ತ್ಯಾವ ಸಂಸ್ಥಾನಕ್ಕೂ ಆ ಅರ್ಹತೆ ಇಲ್ಲ ಎಂದು ಪ್ರಕಟವಾಗಿದೆ.

► 1938ರ ಎನ್‍ಸೈಕ್ಕೋಪಿಡಿಯಾ ಬ್ರಿಟಾನಿಕಾ ಬೃಹತ್ ಸಂಪುಟದಲ್ಲಿ “ಭಾರತ ಖಂಡದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಮುಂದುವರೆಯುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ನ್ಯಾಯಾವಾದ ಅರ್ಹತೆಯನ್ನು ಪಡೆದಿರುವ ಮೈಸೂರು ಮಾದರಿ ಸಂಸ್ಥಾನವಾಗಿದೆ” ಎಂದು ಪ್ರಕಟಿಸಿದೆ.

►ನನ್ನ ತಿಳುವಳಿಕೆಯಲ್ಲಿ 1881ರಿಂದ 1940 ಅವಧಿಯ ವರ್ಷಗಳು ಮೈಸೂರಿನ ಸುವರ್ಣಯುಗ ಎಂಬುದನ್ನು ಡಿ.ವಿ.ಜಿ. ಯವರು ಹೇಳಿದ್ದಾರೆ.

ಇಂತಹ ಮಹಾಚೇತನ ಮೈಸೂರು ಸಂಸ್ಥಾನವನ್ನ ಜಗತ್ತಿನೆಡೆಗೆ ಕೊಂಡೊಯ್ದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ.

ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಜಾರಾಜ್ಯ ಮಾದರಿಯ ರೂವಾರಿ ಮತ್ತು ಪ್ರೇರಕ ಶಕ್ತಿ ಮೊಟ್ಟಮೊದಲು ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ಶಿಕ್ಷಣ ಮತ್ತು ಆಡಳಿತದಲ್ಲಿ ಮೀಸಲಾತಿ ಒದಗಿಸಿ ಅವರನ್ನೂ ಅಭಿವೃದ್ಧಿಯಲ್ಲಿ ಪಾಲುದಾರರಾಗಿಸಿದ ಕೀರ್ತಿ ರಾಜಶ್ರೀಯವರಿಗೆ ಸಲ್ಲುತ್ತದೆ.

ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆ ಧಾರೆಯೆರೆದು ಕೃಷಿ, ಶಿಕ್ಷಣ, ಕೈಗಾರಿಕೆ, ನೀರಾವರಿ ವಿದ್ಯುತ್ ಕ್ಷೇತ್ರದಲ್ಲಿ ದೂರದೃಷ್ಟಿಯಿಂದ ಕೈಗೊಂಡ ಯೋಜನೆ ಮೂಲಕ ಸಂವೃದ್ಧಿ ಸಾಧಿಸಿದ ರಾಜಶಾಯಿಯೊಳಗೆ ಪ್ರಜಾಶಾಯಿ ವ್ಯವಸ್ಥೆಯ ಕಂಡುಕೊಂಡ ಮಾನವತೆ ನೆಲೆಯ ಮೇರು ಸಾದೃಶ.

  • ಅಪ್ಪಗೆರೆ ಪ್ರದೀಪ್‍ ಕುಮಾರ್
Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]