Tuesday, July 14 , 2020
ವಾಟ್ಸಾಪ್, ಫೇಸ್ ಬುಕ್ ನಿಂದ ಸಾವಿನ ಸಂಭ್ರಮದವರೆಗೆ | ಕನ್ನಡ ಬರೆಯಲೂ ತಿಳಿಯದವರು ಗಿರೀಶ್ ಕಾರ್ನಾಡ್ ಬಗ್ಗೆ ಏನು ತಿಳಿದುಕೊಂಡಿರಲು ಸಾಧ್ಯ?

ರಾಷ್ಟ್ರಧ್ವನಿ ವರದಿ-ಬೆಂಗಳೂರು(10.06.2019): ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಇಂದು ನಿಧನರಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವಿಗೆ ದುಃಖ ಹಾಗೂ ಸಂಭ್ರಮ ಎರಡೂ ವ್ಯಕ್ತವಾಗಿದೆ. ಪ್ರಗತಿಪರ ನಿಲುವಿನ ಜನರು ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದರೆ, ಬಿಜೆಪಿ ಪರ ಸಿದ್ಧಾಂತದ ನಿಲುವಿನ ಕೆಲವರು ಗಿರೀಶ್ ಕಾರ್ನಾಡ್ ಅವರ ಸಾವಿಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಒಬ್ಬ ಹೋರಾಟಗಾರ ಎಂದಾಗ ಪರ-ವಿರೋಧ ಇರುವುದು ಸಹಜ. ಇಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಆದರೆ ಇವುಗಳು ಸಾವಿನಂತಹ ಸಂದರ್ಭದಲ್ಲಿಯೂ ಸಂಭ್ರಮಕ್ಕೆ ಕಾರಣವಾಗುತ್ತದೆ ಎಂದರೆ, ಭಾರತದ ದೇಶದ ಸಮಗ್ರತೆಗೆ ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

ಗಿರೀಶ್ ಕಾರ್ನಾಡ್ ಅವರು ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮೇಧಾವಿಗಳಲ್ಲಿ ಒಬ್ಬರು. ತಮ್ಮ ಕೊನೆ ಕ್ಷಣದ ವರೆಗೂ ಅನ್ಯಾಯಕ್ಕೊಳಗಾದವರ ಪರವಾಗಿ ನಿಂತು ಮಾತನಾಡಿದವರು. ತಾವೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿದ್ದರೂ ಸಾಮಾನ್ಯರಂತೆ ಪ್ರತಿಭಟನೆಗಳನ್ನು ಭಾಗವಹಿಸಿದವರು. ತಮಗೆ ಉಸಿರಾಟದ ತೀವ್ರ ತೊಂದರೆಯಲ್ಲೂ ಮೂಗಿಗೆ ವೈದ್ಯಕೀಯ ಚಿಕಿತ್ಸೆಯ ಪೈಪ್ ಅಳವಡಿಸಿದ್ದರೂ ಅಂದು ನಾನೂ ಒಬ್ಬ ಅರ್ಬನ್ ನಕ್ಸಲ್ ಎನ್ನುವ ಪಟ್ಟಿಯನ್ನು ಕೊರಳಿಗೆ ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದವರು. ಅವರ ಉದ್ದೇಶ ನಕ್ಸಲಿಸಂನ್ನು ಪ್ರೋತ್ಸಾಹಿಸುವುದು ಆಗಿರಲಿಲ್ಲ. ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುವುದು ಅವರ ಉದ್ದೇಶವಾಗಿತ್ತು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಈ ವಿಚಾರವನ್ನೇ ಪ್ರಸ್ತಾಪ ಮಾಡಿ, ಗಿರೀಶ್ ಕಾರ್ನಾಡ್ ಅವರನ್ನು ನಿಂದಿಸಿದರು. ಆದರೆ ನಿಂದಿಸಿದವರ ಜ್ಞಾನ ಗಿರೀಶ್ ಕಾರ್ನಾಡ್ ಅವರ ಯೋಚನೆಯ ಮಟ್ಟಕ್ಕೆ ಬೆಳೆದಿಲ್ಲವಾಗಿದ್ದರಿಂದ ಅವರನ್ನು ವಿರೋಧಿಸಿ ಯಾವುದೇ ಪ್ರಯೋಜನವಿಲ್ಲ ಎನ್ನುವುದೂ ಸ್ಪಷ್ಟ.

ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ನಿಧನರಾದಾಗಲೂ ಇಂತಹದ್ದೇ ಸಂಭ್ರಮಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದ್ದವು. ವೈಚಾರಿಕ ಭಿನ್ನಾಭಿಪ್ರಾಯಗಳು ಎಷ್ಟೇ ಇದ್ದರೂ ಸಾವಿನ ಸಂದರ್ಭದಲ್ಲಿ ಅವುಗಳನ್ನು ಬದಿಗೊತ್ತಿ ದುಃಖಿಸದಿದ್ದರೂ ಪರವಾಗಿಲ್ಲ. ಒಬ್ಬರ ಸಾವಿನಲ್ಲಿ ಆನಂದ ಪಡುವುದು ಭಾರತೀಯ ಸಂಸ್ಕೃತಿಯಂತೂ ಅಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಸಾವಿಗೆ ಆನಂದಪಡಬೇಕು ಎಂದು ಹೇಳಿದರೆ, ಬಹುಶಃ ಭಾರತದ ಘನತೆಗೆ ಅದು ಮಾರಕ. ಭಾರತದಲ್ಲಿ ಜನಿಸಿದ ಅದೆಷ್ಟೋ ಮಹನೀಯರು, ಶತ್ರುವಿನ ಸಾವಿನಲ್ಲಿ ಸಂಭ್ರಮಿಸ ಬೇಡ ಎಂದೇ ಸಂದೇಶ ನೀಡಿದ್ದಾರೆ. ಇದು ಭಾರತದ ಇತಿಹಾಸ. ಹಾಗಿದ್ದರೆ ಈಗ ತಮ್ಮ ಸಿದ್ಧಾಂತದ ಶತ್ರುಗಳ ಸಾವಿನಲ್ಲಿ ಆನಂದಪಡುವ ಮನೋಸ್ಥಿತಿ ಎಲ್ಲಿಂದ ಆರಂಭವಾಗುತ್ತಿದೆ. ಇದಕ್ಕೆ ಕಾರಣಗಳೇನು?  ಸಾವಿನಲ್ಲಿ ಆನಂದಪಟ್ಟವರು ಮೇಧಾವಿಗಳಾ? ಅಜ್ಞಾನಿಗಳಾ? ಎನ್ನುವುದನ್ನು ಪರಾಮರ್ಶಿಸಲೇ ಬೇಕಾಗುತ್ತದೆ.

ಫೇಸ್ ಬುಕ್, ವಾಟ್ಸಾಪ್ ಯುನಿವರ್ಸಿಟಿಗಳು ಮಾರಕವಾಗುತ್ತಿವೆಯೇ?

ಭಾರತದಲ್ಲಿ ಫ್ರೀ ಇಂಟರ್‍ ನೆಟ್ ಗಳ ಹಾವಳಿ ಎದ್ದ ಮೇಲೆ, ಸುಳ್ಳು ಸುದ್ದಿಗಳ ಮಹಾಪೂರವೇ ಸೃಷ್ಟಿಯಾಗಿದೆ. ತಮ್ಮ ಸಿದ್ಧಾಂತಗಳನ್ನು ಕಾಯ್ದುಕೊಳ್ಳಲು ಬಹುತೇಕರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳೂ ಸಾಮಾಜಿಕ ಜಾಲತಾಣಗಳ ವಿಭಾಗಗಳನ್ನು ಹೊಂದಿವೆ. ಹೀಗೆ ಮುಂದುವರಿಯುತ್ತಾ ಹೋದ ಈ ಪ್ರಯಾಣ ನಿಂತದ್ದು ಸುಳ್ಳಿನ ಆಸ್ಥಾನದಲ್ಲಿ, ಸತ್ಯದ ಸಮಾಧಿಯ ಮೇಲೆ. ಭಾರತದಲ್ಲಿ ಸುಳ್ಳು ಸುದ್ದಿಗಳು ಸೃಷ್ಟಿಯಾಗಿರುವುದು ರಾಜಕೀಯ ಕಾರಣಕ್ಕಾಗಿ. ಸತ್ಯವನ್ನು ಎಷ್ಟರ ಮಟ್ಟಿಗೆ ತಿರುಚಲು ಸಾಧ್ಯವೋ… ಅಷ್ಟರ ಮಟ್ಟಿಗೆ ಭಾರತದಲ್ಲಿ ತಿರುಚಲಾಗುತ್ತಿವೆ. ಆಡಳಿತ ಪಕ್ಷದ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂದು ಯಾವ್ಯಾವುದೋ ವಿಚಾರಗಳನ್ನು ಜನರ ನಡುವೆ ತಂದಿಡಲಾಗುತ್ತಿದೆ. ಫೋಟೋ ಶಾಪ್ ಕಲೆಗಳಿಂದ ಆಗದ ಅಭಿವೃದ್ಧಿಗಳನ್ನು ಆಗಿದೆ ಎಂದು ತೋರಿಸಲಾಗುತ್ತಿದೆ. ದೇಶ ದ್ರೋಹದ ಕೆಲಸವನ್ನು ದೇಶ ಪ್ರೇಮ ಎಂದೂ ತೋರಿಸಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣಗಳು ಒಳ್ಳೆಯದ್ದನ್ನು ಸೃಷ್ಟಿಸುವ ಬದಲು ಬಹುತೇಕ ಪಾಲು ಕೆಟ್ಟದ್ದನ್ನೇ ಸೃಷ್ಟಿಸಿದೆ. ಜನರಲ್ಲಿ ಪ್ರತಿಕಾರ ಭಾವನೆ ಕಠೋರವಾಗಿ ಮೂಡಲು ಇದು ಪ್ರಮುಖ ಕಾರಣವಾಗಿದೆ. ಇಂದು ಸ್ಮಾರ್ಟ್ ಫೋನ್ ಬಳಕೆದಾರರು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದಾರೆ. ಹಾಗಾಗಿ ವಾಟ್ಸಾಪ್ ಗ್ರೂಪ್ ಗಳಲ್ಲೋ, ಫೇಸ್ ಬುಕ್ ಗಳಲ್ಲೋ ತಪ್ಪಾದ ಮಾಹಿತಿ ಬಂದಾಗ ಅವುಗಳನ್ನು ವಿಮರ್ಶೆ ಮಾಡುವ ಸಾಮರ್ಥ್ಯವನ್ನು ಹೊಂದದೇ ಬಹುತೇಕರು ಸುಳ್ಳನ್ನೇ ಸತ್ಯ ಎಂದು ತಿಳಿದುಕೊಳ್ಳುತ್ತಿದ್ದಾರೆ. ಈಗಾಗಲೇ ಇಂತಹ ಕೆಲಸಗಳನ್ನು ಕೆಲವು ಪಕ್ಷಗಳು ಯಶಸ್ವಿಯಾಗಿ ನಿಭಾಯಿಸುತ್ತಿವೆ, ಹಾಗಾಗಿ ದೇಶದ ಸಂವಿಧಾನ, ಕಾನೂನು, ಮಹಾಪುರುಷರು ಹೀಗೆ ಎಲ್ಲರ ಮತ್ತು ಎಲ್ಲದರ ಬಗ್ಗೆಯೂ ಜನರಲ್ಲಿ ತಪ್ಪು ಅಭಿಪ್ರಾಯಗಳು ಮೂಡಿವೆ. ಆ ತಪ್ಪು ಅಭಿಪ್ರಾಯಗಳ ಮುಂದುವರಿದ ಭಾಗ ಸಾವಿನಲ್ಲಿ ಸಂಭ್ರಮಪಡುವ ಮಟ್ಟಕ್ಕೆ ಬೆಳೆದು ನಿಂತಿದೆ.

ಕನ್ನಡ ಸರಿಯಾಗಿ ಬರೆಯಲು ಬಾರದವರೂ ಕನ್ನಡ ಸಾಹಿತಿಯ ಬಗ್ಗೆ ಏನು ತಿಳಿದುಕೊಳ್ಳಲು ಸಾಧ್ಯ?

ಗಿರೀಶ್ ಕಾರ್ನಾಡ್ ಅವರ ಸಾವಿಗೆ ಸಂಭ್ರಮಿಸಿದ ಬಹಳಷ್ಟು ಪೋಸ್ಟ್ ಗಳ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೋಸ್ಟ್ ಗಳನ್ನು ಗಮನಿಸಿದರೆ, ಅಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಕನ್ನಡವನ್ನು ಸರಿಯಾಗಿ ಬರೆಯಲು ಬಾರದ ವ್ಯಕ್ತಿ, ಕನ್ನಡ ಸಾಹಿತಿಯ ಸಾವಿಗೆ ಸಂಭ್ರಮಿಸಿದನೆಂದರೆ, ಅದು ಅವನ ಸ್ವಂತ ಅಭಿಪ್ರಾಯವೇ? ಗಿರೀಶ್ ಕಾರ್ನಾಡ್ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ಕನ್ನಡ ಚಾನೆಲ್ ಗಳಲ್ಲಿ ವರದಿ ಪ್ರಸಾರವಾಯಿತು. ಆ ವೇಳೆ ಕೆಲವೊಂದು ವ್ಯಕ್ತಿಗಳು ಮೊದಲು ಕಾರ್ನಾಡ್ ಕುರಿತು ಕೆಟ್ಟ ಕಮೆಂಟ್ ಗಳನ್ನು ಹಾಕಿದ್ದಾರೆ. ಇದನ್ನು ನೋಡಿಕೊಂಡು ಇನ್ನೂ ಕೆಲವರು ಹಾಕಿದ್ದಾರೆ. ಇನ್ನು ಕೆಲವರು ಬೇರೆಯವರು ಹಾಕಿರುವ ಕಮೆಂಟ್ ಗಳನ್ನು ನಕಲು ಮಾಡಿ ತಾವೂ ಹಾಕಿದ್ದಾರೆ. ಒಟ್ಟಿನಲ್ಲಿ ಕೆಲವು ವ್ಯಕ್ತಿಗಳ ಪ್ರೇರೇಪಣೆಯಿಂದ ಇಂದು ಎಲ್ಲರೂ ಗಿರೀಶ್ ಕಾರ್ನಾಡ್ ಅವರನ್ನು ವಿರೋಧಿಸಿದ್ದಾರೆ. ಸಾಮಾಜಿಕ ಅಸಮಾನತೆ ಹಾಗೂ ಬಲವಂತದ ಹೇರಿಕೆಗಳ ಬಗ್ಗೆ ಗಿರೀಶ್ ಕಾರ್ನಾಡ್ ಅವರು ಧ್ವನಿಯೆತ್ತಿದ್ದರು. ಅವರ ಧ್ವನಿ ಒಳ್ಳೆಯದ್ದು ಮಾಡುವಂತದ್ದಾಗಿತ್ತು. ಆದರೆ ಅದನ್ನು ಕೆಟ್ಟದಾಗಿ ನೋಡಿದರೆ ಕೆಟ್ಟದಾಗಿ ಕಾಣಿಸುತ್ತದೆ ಎನ್ನುವುದು ಸತ್ಯ.

ಅಂತ್ಯ ಕ್ರಿಯೆಯಲ್ಲಿ ಗೌರವ ನೀಡಿದರೆ ಸರಕಾರದ ಜವಾಬ್ದಾರಿ ಮುಗಿಯಿತೇ?

ಗಿರೀಶ್ ಕಾರ್ನಾಡ್ ಅವರಿಗೆ ಸರಕಾರ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನಡೆಸಲಿದೆ ಎಂದು ಸರಕಾರ ಘೋಷಿಸಿದೆ. ಆದರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾರ್ನಾಡ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಮಾಡಿದವರನ್ನು ಸರಕಾರ ಸುಮ್ಮನೆ ಬಿಟ್ಟರೆ, ಸರಕಾರ ಏನು ಗೌರವ ಕೊಟ್ಟು ಏನು ಪ್ರಯೋಜನ? ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿರುವವರ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಯಿತು. ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಬಗ್ಗೆ ತಪ್ಪು ವರದಿ ಮಾಡಿದ ಪತ್ರಿಕೆಯ ಮೇಲೂ ಕೇಸು ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾದರು. ಆದರೆ ಕರ್ನಾಟಕದ ಘನತೆಗೆ ತಮ್ಮದೇ ಕೊಡುಗೆ ನೀಡಿದ ಕಾರ್ನಾಡ್ ಅವರ ಸಾವಿಗೆ ಸಂಭ್ರಮಿಸಿದ ಮನುಷ್ಯತ್ವ ಹೀನರ ವಿರುದ್ಧ ಸರಕಾರ ಕ್ರಮಕೈಗೊಳ್ಳದಿದ್ದರೆ, ಸರಕಾರ ಕೇವಲ ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದ ಘನತೆ ಮಾತ್ರ ಕಾಪಾಡಲು ಶಕ್ತ ಎನ್ನುವ ಹಣೆಪಟ್ಟಿಯನ್ನು ಶಾಶ್ವತವಾಗಿ ಕಟ್ಟಿಕೊಳ್ಳುವುದಂತೂ ವಾಸ್ತವ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]