Thursday, December 12 , 2019
ಶೋಷಿತ ದಲಿತ ಸಮುದಾಯದ ನಿಜವಾದ ಶತ್ರುಗಳು ಯಾರು?

ಕರ್ನಾಟಕದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ ದಲಿತ ಸಮುದಾಯದ ರಾಜಕೀಯ ನಡೆ ಕಾಲದಿಂದ ಕಾಲಕ್ಕೆ ಹೇಗೆ ಬದಲಾಗುತ್ತಾ ಬಂದಿದೆ ಎಂಬುದು ತಿಳಿಯುತ್ತದೆ. ಅನಕ್ಷರತೆ, ಬಡತನ, ಅನಾರೋಗ್ಯ, ಜೀತಪದ್ದತಿ, ಮೇಲ್ಜಾತಿಗಳ ದಬ್ಬಾಳಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಜರ್ಜರಿತವಾಗಿದ್ದ ದಲಿತ ಸಮುದಾಯ ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ಖಾತೆಯ ಖಾಯಂ ಮತದಾರರಾಗಿದ್ದರು. ಬಹುಶಃ ದೇವರಾಜ ಅರಸು, ಗುಂಡುರಾವ್ ಕಾಲದವರೆಗೂ ಸಹ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತಾ ಬಂದಿದ್ದು ಇದೇ ದಲಿತ ಮತಗಳಾಗಿದ್ದವು.

ಈ ವೇಳೆಗಾಗಲೇ ಕರ್ನಾಟಕದ ನೆಲದಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಸಮಾಜವಾದಿಗಳು ಕಟ್ಟಿಕೊಂಡ ಪಕ್ಷ ತಕ್ಕಮಟ್ಟಿಗೆ ಯಶಸ್ವಿಯಾಯಿತು. ಸಮಾಜವಾದಿಗಳ ಎದುರು ಕಾಂಗ್ರೆಸ್ ಮಂಕಾಗಿ ಹೋಗಿತ್ತಾದರೂ ಸಹ ದಲಿತರು ನಂಬಿಕುಳಿತದ್ದು ಮಾತ್ರ ಇದೇ ಕಾಂಗ್ರೆಸನ್ನು. ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿಯವರ ಜನತಾ ಪಕ್ಷ ಅಧಿಕಾರ ನಡೆಸಿದ ನಂತರ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ದಲಿತರ ಮತಗಳೇ ಮತ್ತೆ ಕಾಂಗ್ರೆಸ್ಸನ್ನು ಗೆಲ್ಲಿಸಿದವು.‌ ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಜನತಾ ಪರಿವಾರ ಮತ್ತು ಕಾಂಗ್ರೆಸ್ ಇವೆರಡೂ ಪಕ್ಷಗಳು ಅಧಿಕಾರ ಬದಲಿಸಿಕೊಂಡು ಕರ್ನಾಟಕದಲ್ಲಿ ಆಡಳಿತ‌ ನಡೆಸುತ್ತಾ ಬಂದವು. ಹೆಚ್.ಡಿ.ದೇವೇಗೌಡ, ಜೆ.ಹೆಚ್.ಪಟೇಲ್ ನಂತರ ಪುನಃ ಎಸ್.ಎಂ.ಕೃಷ್ಣ, ಧರಂಸಿಂಗ್ ಆಡಳಿತದ ಚುಕ್ಕಾಣಿ ಹಿಡಿದರು. ಈ ವೇಳೆಗಾಗಲೇ ಬಿಜೆಪಿ ಕರಾವಳಿ ಭಾಗದಲ್ಲಿ ಸಕ್ರಿಯವಾಗುತ್ತಾ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಸದೃಢವಾಗುತ್ತಾ ಹೋಯಿತು.

ದಲಿತರನ್ನು ಎಡಗೈ ಬಲಗೈ ಹೆಸರಿನಲ್ಲಿ ರಾಜಕೀಯ ಕಾರಣಕ್ಕೆ ಇಬ್ಬಾಗ ಮಾಡುವ ತಂತ್ರಗಳು ನಡೆದು ಕಡೆಗೆ ದಲಿತರು ಒಳಮೀಸಲಾತಿಗಾಗಿ ಹೋರಾಟ ಪ್ರಾರಂಭ ಮಾಡಬೇಕಾಯಿತು. 2005ರ ನಂತರದಲ್ಲಿ ದಲಿತರ ಒಳಮೀಸಲಾತಿಗೆ ಸಂಬಂಧಿಸಿದಂತೆ ಕೆ.ಸದಾಶಿವ ವರದಿ ಹೊರಬೀಳುತ್ತಿದ್ದಂತೆಯೇ ‘ಒಳಮೀಸಲಾತಿ’ ವಿಚಾರ ಸಂಪೂರ್ಣವಾಗಿ ರಾಜಕೀಯ ವಿಷಯವಾಗುತ್ತಾ ದಲಿತ ಸಮುದಾಯದ ಮಾದಿಗರು ಬಿಜೆಪಿಯನ್ನು ಬೆಂಬಲಿಸಿದರೆ ಬಲಗೈ ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಬಿಂಬಿತವಾಯಿತು. ನಂತರದಲ್ಲಿ ಬಲಗೈ ಎಡಗೈ ಎರಡೂ ಸಮುದಾಯಗಳ ಓಲೈಕೆ ರಾಜಕಾರಣ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಅನಿವಾರ್ಯವಾಗುತ್ತಾ ಹೋಯಿತು.

ಇತ್ತ ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಅವರ ರಾಜಕೀಯ ಪ್ರಾಬಲ್ಯದ ಮುಂದೆ ಅದೇ ಪಕ್ಷದ ಮಾದಿಗ ಸಮುದಾಯದ ಜಿ.ಆಂಜನೇಯ ನಾಯಕರಾದರು, ಮಂತ್ರಿಯೂ ಆದರು. ಇದರ ಹೊರತಾಗಿ ಬಿಜೆಪಿ ಪಕ್ಷದಲ್ಲಿ ಮಾದಿಗ ಸಮುದಾಯ, ಹೊಲೆಯ ಸಮುದಾಯದ ನಾಯಕರು ಎಡಗೈ ಬಲಗೈ ಅಂತಲೇ ಗುರುತಿಸಿಕೊಳ್ಳಲು ಪ್ರಾರಂಭಿಸಿದರು.

ಒಳಮೀಸಲಾತಿ ಜಾರಿಮಾಡದೆ ಮಾದಿಗರನ್ನು ವಂಚಿಸಿದ ಬಿಜೆಪಿ:

ಮಾದಿಗರನ್ನು ತಮ್ಮ ಮತಬ್ಯಾಂಕಾಗಿ ಮಾಡಿಕೊಂಡ ಬಿಜೆಪಿಯು ಯಡಿಯೂರಪ್ಪ ನೇತೃತ್ವದ ಸರ್ಕಾರವು ಅಸ್ತಿತ್ವಕ್ಕೆ ಬಂದಾಗಲೂ ಸಹ ಒಳಮೀಸಲಾತಿಯನ್ನು ಜಾರಿಮಾಡಲಿಲ್ಲ.

ಸದಾನಂದಗೌಡ, ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿಕೊಂಡಾಗಲೂ ಸಹ ಮಾದಿಗರ ಒಳಮೀಸಲಾತಿಗೆ ನ್ಯಾಯ ದೊರಕಲೇ ಇಲ್ಲ.‌ 2008 ರಲ್ಲಿ ಬಿಜೆಪಿ ಘೋಷಣೆ ಮಾಡಿಕೊಂಡ ತನ್ನ‌ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಸಂಬಂಧ ವರದಿ ಪರಿಶೀಲನೆ ಮಾಡುವಲ್ಲಿ ಬದ್ದ ಎಂದು ಹೇಳಿಕೊಂಡಿತ್ತು. ಆದರೆ ಬಿಜೆಪಿ ಒಳಮೀಸಲಾತಿ ವಿಚಾರವನ್ನು ನಯವಾಗಿ ಹತ್ತಿಕ್ಕಿತು, ಅಲ್ಲದೆ ಅದನ್ನು ಮುಂದಿನ ಚುನಾವಣೆಗಳಲ್ಲಿ ಮಾದಿಗರ‌ ಮತಗಳನ್ನು ಸಂಪೂರ್ಣವಾಗಿ ಸೆಳೆಯಲು ಜೀವಂತವಾಗಿರಿಸಿಕೊಂಡಿತು.

ಒಳಮೀಸಲಾತಿ: ದಲಿತರಿಗೆ ದ್ರೋಹಬಗೆದ ಕಾಂಗ್ರೆಸ್:

ಬಿಜೆಪಿ ಅಧಿಕಾರ ಕಳೆದುಕೊಂಡ ಮೇಲೆ ಅಧಿಕಾರ ಹಿಡಿದ ಕಾಂಗ್ರೆಸ್ ನ ಸಿದ್ದರಾಮಯ್ಯ ಸರ್ಕಾರ ಸದಾಶಿವ ವರದಿ ಜಾರಿಮಾಡಲು‌ ನಮ್ಮ ಸರ್ಕಾರ ಬದ್ದವಾಗಿದೆ ಅಂತ ಹೇಳುತ್ತಲೇ ಐದು ವರ್ಷ ಅಧಿಕಾರ ನಡೆಸಿದರು‌. ಮಾದಿಗ ಸಮುದಾಯದ ಆಂಜನೇಯ ಅವರು ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ್ಯೂ ಮಾದಿಗರಿಗೆ ಒಳಮೀಸಲಾತಿ ಮರೀಚಿಕೆಯಾಯಿತು. 2015 ರಲ್ಲಿ‌ ಸರ್ಕಾರ ಸುಮಾರು 170 ಕೋಟಿ ರೂಪಾಯಿ ವೆಚ್ಚ‌ ಮಾಡಿ ನಡೆಸಿದ ಸಾಮಾಜಿಕ, ಶೈಕ್ಷಣಿಕ ಗಣತಿಯ ವರದಿ ಕೂಡ ಇಲ್ಲಿಯವರೆಗೂ ಬಿಡುಗಡೆ ಆಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಮಾದಿಗರು ಕಾಂಗ್ರೆಸ್ ನ ವಿರುದ್ಧ ನಿಂತು ಬಿಜೆಪಿಯ ಮತಬ್ಯಾಂಕ್ ಆಗಿ ಪರಿವರ್ತಿತವಾದರೂ ಸಹ ಮಾದಿಗರಿಗೆ ಬಿಜೆಪಿ ತಾನು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಯಾವ ನ್ಯಾಯ ಒದಗಿಸದೆ ಮೋಸ ಮಾಡಿತು. ಒಟ್ಟಾರೆಯಾಗಿ ದಲಿತರು ಎಡಗೈ, ಬಲಗೈ ಹೆಸರಿನಲ್ಲಿ ಇಬ್ಬಾಗವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗಡೆ ಸಹ ಪರಿಶಿಷ್ಟ ಜಾತಿಯೊಳಗಿನ ‘ಎಡಗೈ’ ಮತ್ತು ‘ಬಲಗೈ’ ಸಮುದಾಯಗಳಾಗಿ ಅಧಿಕಾರಕ್ಕಾಗಿ ಪೈಪೋಟಿಗಿಳಿದಿವೆ.

ರಾಜ್ಯಕ್ಕೆ ಬಿಎಸ್ಪಿ ಪ್ರವೇಶ: ಬದಲಾದ ದಲಿತ ರಾಜಕಾರಣ

ತೊಂಬತ್ತರ ದಶಕದಂಚಿನ ವೇಳೆಗೆ ಕರ್ನಾಟಕದ ನೆಲದಲ್ಲಿ ಬಹುಜನ ಚಳುವಳಿಯು ನಿಧಾನವಾಗಿ ಚಿಗುರೊಡೆಯುತ್ತಲೇ ದಲಿತ ರಾಜಕಾರಣದ ದಿಕ್ಕು ಬದಲಾಗಲು ಆರಂಭವಾಯಿತು. 2002 ರಿಂದೀಚೆಗಂತೂ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷ ಭದ್ರವಾಗಿ ಬೇರೂರಲು ಪ್ರಾರಂಭಿಸಿತು.‌ ಹಳೆ ಮೈಸೂರಿನ ಭಾಗದಲ್ಲಿ ಬಹುಜನ ಸಮಾಜ ಪಕ್ಷ ದಲಿತರನ್ನು ಪ್ರಭಾವಿಸುವಲ್ಲಿ ಯಶಸ್ವಿ ಕೂಡ ಆಯಿತು. ಪರಿಣಾಮವಾಗಿ ಕಳೆದ ವಿಧಾನಸಭೆಯಲ್ಲಿ ಕೊಳ್ಳೇಗಾಲದ ಮತದಾರರ ಮೊದಲ ಆಯ್ಕೆ ಬಿಎಸ್ಪಿ ಆಯಿತು. ಗೆಲುವಿನ ಮೂಲಕ ಹೊಸ ಉತ್ಸಾಹದಲ್ಲಿರುವ ಬಿಎಸ್ಪಿ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು ಈ ಭಾಗದ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಕನಿಷ್ಠ ಹತ್ತರಿಂದ ಇಪ್ಪತ್ತು ಸಾವಿರ ಮತಬ್ಯಾಂಕ್ ಹೊಂದಿದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಬೂತ್ ಮಟ್ಟದವರೆಗೆ ಕಾರ್ಯಕರ್ತರು ತಯಾರಾಗಿದ್ದಾರೆ. ಬೆಂಗಳೂರು ನಗರದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಹ ಈಗಾಗಲೇ ಬಿಎಸ್ಪಿ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದ್ದು ಮುಂದಿನ ದಿನಗಳಲ್ಲಿ ಇತರ ಪಕ್ಷಗಳಿಗೆ ಸವಾಲೊಡ್ಡುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡಾ ಕಳೆದ ಬಿಎಸ್ಪಿ ಭದ್ರವಾಗಿ ನೆಲೆಯೂರುತ್ತಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಪರಿಣಾಮ 224 ರಲ್ಲಿ ಕೇವಲ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು ಕರ್ನಾಟಕದಲ್ಲಿ ಬಿಎಸ್ಪಿಯ ಒಟ್ಟು ಶಕ್ತಿಯನ್ನು ಯಾರೂ ತಿಳಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಲೋಕಸಭಾ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯು ಜನರ ಪರ್ಯಾಯ ಆಯ್ಕೆ ಆಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕೈಕೊಟ್ಟ ಜೆಡಿಎಸ್ ಗೆ ದಲಿತರು ಪಾಠ ಕಲಿಸುತ್ತಾರೆಯೇ?

ಜೆಡಿಎಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದು ಪಕ್ಷದಲ್ಲಿದ್ದ ಪ್ರಭಾವಿ ಘಟಾನುಘಟಿ ನಾಯಕರನ್ನು ಕಳೆದುಕೊಂಡು ಪಕ್ಷದ ನಾಯಕತ್ವ ಹೆಚ್.ಡಿ. ದೇವೇಗೌಡ ಮತ್ತು ಕುಟುಂಬಕ್ಕೆ ಸೀಮಿತವಾಗಿದೆ. ಪಕ್ಷದಲ್ಲಿದ್ದ ಪ್ರಭಾವಿ ಮುಸ್ಲಿಂ ಮುಖಂಡ ಜಮೀರ್‌ ಅಹ್ಮದ್ ಅವರು ಕಾಂಗ್ರೆಸ್ ಅನ್ನು ಸೇರಿದ್ದರಿಂದ ಜೆಡಿಎಸ್ ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಂಡಿತು. ಹಾಗಾಗಿ ಮುಸ್ಲಿಂ ಮತಗಳ ಬದಲಾಗಿ ದಲಿತ ಮತಬ್ಯಾಂಕ್ ಮೇಲೆ ಕಣ್ಣಿಟ್ಟ ಜೆಡಿಎಸ್ ಬಿಎಸ್ಪಿಯ ಹೈಕಮಾಂಡ್ ಮಟ್ಟದಲ್ಲಿ ಮೈತ್ರಿಯನ್ನು ಕುದುರಿಸಿಕೊಂಡು ಚುನಾವಣೆ ಎದುರಿಸಿತು. ಈ ಚುನಾವಣೆಯಲ್ಲಿ ದಲಿತರ ಮತಗಳು ಜೆಡಿಎಸ್ ಗೆ ಹರಿದ ಪರಿಣಾಮ ಸುಮಾರು 36 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತು. ಇದರಲ್ಲಿ ಸುಮಾರು 14 ಕ್ಷೇತ್ರಗಳ ಗೆಲುವಿನಲ್ಲಿ ಬಿಎಸ್ಪಿ ಮತಗಳು ನಿರ್ಣಾಯಕವಾಗಿದ್ದವು ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿತ್ತು. ಬದಲಾದ ಸಂದರ್ಭದಲ್ಲಿ ಜೆಡಿಎಸ್-ಬಿಎಸ್ಪಿ-ಕಾಂಗ್ರೆಸ್ ನ ಮೈತ್ರಿ ಸರ್ಕಾರ ಕೂಡ ಅಸ್ತಿತ್ವಕ್ಕೆ ಬಂದು ಜೆಡಿಎಸ್ ಮುಖ್ಯಮಂತ್ರಿ ಗಾದಿಯನ್ನು ಏರಿದೆ. ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಎನ್.ಮಹೇಶ್ ಅವರು ಸಚಿವರಾಗಿದ್ದು ಕೆಲ ತಿಂಗಳುಗಳ ತರುವಾಯ ರಾಜೀನಾಮೆಯಿತ್ತು ಪಕ್ಷ ಸಂಘಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆಯೇ ಜೆಡಿಎಸ್ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾತುಕತೆಗೆ, ಸೀಟು ಹಂಚಿಕೆಗೆ ಮುಂದಾಯಿತೇ ವಿನಃ ಬಿಎಸ್ಪಿಯನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಈ ಮಧ್ಯೆ ಬಿಎಸ್ಪಿ ಕೂಡ ಸದ್ದಿಲ್ಲದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಚುನಾವಣಾ ತಯಾರಿ ನಡೆಸಲು ಪ್ರಾರಂಭಿಸಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಮತಹಾಕಿಸಿಕೊಂಡು ಕೈಕೊಟ್ಟ‌ ಜೆಡಿಎಸ್ ಗೆ ಈ ಬಾರಿ ದಲಿತರು ಮತಹಾಕುವುದು ಬಹುತೇಕ ಸಂಶಯವಾಗಿದೆ.

ದಲಿತ ಸಂಘಟನೆಗಳ ಅಪಕ್ವ ರಾಜಕೀಯ ನಿರ್ಣಯಗಳು: ಕರ್ನಾಟಕದಲ್ಲಿ ಎಂಬತ್ತು, ತೊಂಭತ್ತರ ದಶಕಗಳಲ್ಲಿ ದಲಿತ ಚಳುವಳಿ ಬಲಿಷ್ಠವಾಗಿತ್ತು. ಈಗಲೂ ಸಹ ನೂರಾರು ದಲಿತ ಸಂಘಟನೆಗಳು ಅಸ್ತಿತ್ವದಲ್ಲಿವೆಯಾದರೂ ಅವುಗಳ ರಾಜಕೀಯ ನಿಲುವುಗಳು ಮಾತ್ರ ಅಸ್ಪಷ್ಟವಾಗಿಯೇ ಉಳಿದಿರುತ್ತವೆ. ಪ್ರಸ್ತುತ ಯಾವೊಂದೂ ದಲಿತ ಸಂಘಟನೆ ಕೂಡ ರಾಜ್ಯಮಟ್ಟದಲ್ಲಿ ದಲಿತರನ್ನು ಪ್ರಭಾವಿಸುವಷ್ಟು ಶಕ್ತವಾಗಿ ಉಳಿದಿಲ್ಲ. ಕೇವಲ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿವೆ ಉಳಿದುಬಿಟ್ಟಿವೆ. ಈ ದಲಿತ ಸಂಘಟನೆಗಳ ರಾಜಕೀಯ ನಿಲುವು ಸ್ಥಳೀಯ ರಾಜಕಾರಣದ ಭಾಗವಾಗಿರುತ್ತದೆಯೇ ವಿನಃ ರಾಜ್ಯದ ಅಖಂಡ ದಲಿತ ಸಮುದಾಯದ ಹಿತಕಾಪಾಡುವ ನಿಟ್ಟಿನಲ್ಲಿ ರೂಪುಗೊಂಡ ನಿಲುವಾಗಿರುವುದಿಲ್ಲ. ಪ್ರತಿ ಚುನಾವಣೆ ಮುನ್ನವೇ ದಲಿತ ಸಂಘಟನೆಗಳು ತಮ್ಮ ರಾಜಕೀಯ ನಿರ್ಣಯವನ್ನು ಪತ್ರಿಕಾಗೋಷ್ಠಿ ಕರೆದು ತಿಳಿಸುವುದು ವಾಡಿಕೆಯಾಗಿ ಹೋಗಿದೆ. ಪ್ರತಿ ಚುನಾವಣೆಯಲ್ಲಿ ಸಹ ಈ ಬಾರಿ ನಮ್ಮ ಸಂಘಟನೆ ಈ ಪಕ್ಷವನ್ನು ಬೆಂಬಲಿಸಲಿದೆ, ಆ ಪಕ್ಷವನ್ನು ಬೆಂಬಲಿಸಲಿದೆ ಎಂಬುದನ್ನು ಘೋಷಣೆ ಮಾಡಿಕೊಳ್ಳುವುದು ಸಹಜವಾಗಿದೆ. ದಲಿತ ಸಂಘಟನೆಗಳ ಈ ರೀತಿಯ ಅಪಕ್ವ ರಾಜಕೀಯ ನಿರ್ಣಯಗಳು ದೊಡ್ಡ ಮಟ್ಟದಲ್ಲಿ ದಲಿತರನ್ನು ಪ್ರಭಾವಿಸದಿದ್ದರೂ ಸಹ ಡಾ.ಅಂಬೇಡ್ಕರ್ ಅವರು‌ ಕನಸಿದ ಈ ದೇಶದ ಶೋಷಿತ‌ ಸಮುದಾಯಗಳು ಸ್ವತಂತ್ರ ರಾಜಕೀಯ ಶಕ್ತಿಯಾಗುವ ಪ್ರಕ್ರಿಯೆಗೆ ತುಸು ಹಿನ್ನೆಡೆಯುಂಟು ಮಾಡುತ್ತವೆ.

ಭವಿಷ್ಯದಲ್ಲಿ ದಲಿತ ರಾಜಕಾರಣ ಪ್ರಬಲವಾಗಲಿದೆಯೇ?

ಕಳದೆರಡು ದಶಕಗಳಲ್ಲಿ ದಲಿತರು ‘ರಾಜಕೀಯ ಅಕ್ಷರಸ್ಥ’ರಾಗುತ್ತಿರುವುದು ಭವಿಷ್ಯದ ದಲಿತ ರಾಜಕಾರಣದ ಭದ್ರ ಬುನಾದಿಯಾಗಲಿದೆ. ದಲಿತರಿಗೆ ರಾಜಕೀಯ ಪ್ರಜ್ಞೆ ಎಂದರೆ ಮೇಲ್ಜಾತಿಯ ‌ನಾಯಕತ್ವದ ರಾಜಕೀಯ ಪಕ್ಷಗಳನ್ನು ತ್ಯಜಿಸಿ ತಮ್ಮದೇ ರಾಜಕೀಯ ಪಕ್ಷಕ್ಕೆ ಮತಹಾಕುವುದಾಗಿದೆ ಎಂಬ ಮಟ್ಟಿಗೆ ಪ್ರಜ್ಞರಾಗುತ್ತಿರುವ ಸೂಚನೆ‌ ಕಂಡು ಬರುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ದಲಿತರು ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳನ್ನು ಸಂಘಟಿಸಿಕೊಂಡು ಒಂದೇ ರಾಜಕೀಯ ನೆಲೆಯಲ್ಲಿ ನಿಂತು ಚುನಾವಣೆ ಎದುರಿಸುವಂತಾದಲ್ಲಿ ಸ್ಪಷ್ಟವಾಗಿ ರಾಜ್ಯದಲ್ಲಿ ದಲಿತ ರಾಜಕಾರಣ ಮಹತ್ವ ಪಡೆದುಕೊಳ್ಳಲಿದೆ. ಈ ಮೂಲಕ ‘ಮತದಾರ ವರ್ಗ’ವಾಗಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳು ಒಗ್ಗೂಡುವ ಮೂಲಕ ಭವಿಷ್ಯದಲ್ಲಿ ‘ಆಳುವ ವರ್ಗ’ವಾಗಿ ಬದಲಾಗುವ ಸಾಧ್ಯತೆ‌ ನಿಚ್ಚಳವಾಗಿದೆ. ಈ ಮೂಲಕ ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವನ್ನು ಕೂಡ ಯಾರೂ ತಡೆಯಲಾಗದಂತಹ ವಾತಾವರಣ ಸೃಷ್ಟಿಯಾಗಲೂಬಹುದಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]