Friday, November 22 , 2019
ಮಾಯಾವತಿ ವಿರುದ್ಧ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ಆರೋಪಗಳ ಹಿಂದೇನಿದೆ?

ಲೇಖನ

ಮಹೇಶ್ ಕುಮಾರ್ ಸರಗೂರು

ಬಿ.ಎಸ್.ಪಿ. ಪಕ್ಷದ ಮುಖ್ಯಸ್ಥೆ ಮಾಯಾವತಿಯವರ ಮೇಲೆ ಹತ್ತಾರು ಆರೋಪಗಳಿವೆ. ಆ ಆರೋಪಗಳ ಪಟ್ಟಿಯಲ್ಲಿ ಭ್ರಷ್ಟಾಚಾರದ ಆರೋಪವು ಬಹಳ ಮುಖ್ಯವಾದುದು. ‘ಮಾಯಾವತಿ ತಮ್ಮ ಅಧಿಕಾರಾವಧಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಲೆಕ್ಕವಿಲ್ಲದಷ್ಟು ಆಸ್ತಿ, ಸಂಪತ್ತು ಸಂಪಾದಿಸಿದ್ದಾರೆ. ವೈಭವೋಪೇತ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ’ ಎನ್ನುವ ಸುದ್ದಿಗಳು ಎಲ್ಲಾ ಕಾಲದಲ್ಲೂ ಚಾಲ್ತಿಯಲ್ಲಿರುತ್ತವೆ. ಚುನಾವಣಾ ಸಮಯದಲ್ಲಂತೂ ಈ ಸುದ್ದಿ ವಿಪರೀತ ಕಾವು ಪಡೆದುಕೊಳ್ಳುತ್ತದೆ. ಈ ಬಗ್ಗೆ ನಮ್ಮ ದೇಶದ ಪ್ರಖ್ಯಾತ ಸುದ್ದಿ ಮಾಧ್ಯಮಗಳು, ನಮ್ಮ ನಡುವಿನ ಪ್ರಕಾಂಡ ಬುದ್ಧಿಜೀವಿಗಳು, ಪ್ರಗತಿಪರರು, ಅಪ್ರತಿಮ ರಾಜಕೀಯ ವಿಶ್ಲೇಷಕರು ನಾ ಮುಂದು, ತಾ ಮುಂದು ಎಂಬಂತೆ ಪೈಪೋಟಿಗೆ ಬಿದ್ದು ಬರೆದಿದ್ದಾರೆ, ಮಾತನಾಡಿದ್ದಾರೆ, ಭಾಷಣ ಮಾಡಿದ್ದಾರೆ. ಈಗಲೂ ಈ ಎಲ್ಲವನ್ನು ಮಾಡುತ್ತಲೇ ಇದ್ದಾರೆ!

ಆದರೆ ಮಾಯಾವತಿಯವರು ನಿಜಕ್ಕೂ ಭ್ರಷ್ಟಾಚಾರ ಮಾಡಿದ್ದಾರೆಯೇ? ಅವರ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಪೂರಕ ದಾಖಲೆಗಳಿವೆಯೇ? ಈ ಬಗ್ಗೆ ದೇಶದ ಸಾಂವಿಧಾನಿಕ ಸಂಸ್ಥೆಗಳು ಏನು ತೀರ್ಪಿತ್ತಿವೆ? ಈ ಮಾಧ್ಯಮಗಳಿಂದ, ರಾಜಕೀಯ ಪಂಡಿತರಿಂದ ಹಾಗೆಯೇ ನಮ್ಮ ಬುದ್ಧಿಜೀವಿಗಳ ಬಾಯಿಂದ ಬಂದ ಈ ಮಾತುಗಳಲ್ಲಿ ಹುರುಳಿದೆಯೇ? ಅಥವಾ ಮಾಯಾವತಿಯವರ ಮೇಲಿನ ಭ್ರಷ್ಟಾಚಾರ ಆರೋಪಗಳ ಹಿಂದೆ ವ್ಯವಸ್ಥಿತವಾದ ಸಂಚಿದೆಯೇ? ಎನ್ನುವುದನ್ನು ನಾವು ಬಹಳ ವೈಜ್ಞಾನಿಕವಾಗಿ ಕಾನೂನಿನ ದೃಷ್ಟಿಯಿಂದ ನೋಡಬೇಕಿದೆ. ಮತ್ತು ಅಷ್ಟೇ ನಿರ್ಲಿಪ್ತತೆಯಿಂದ ಮಾಯಾವತಿಯವರ ಮೇಲಿರುವ ಆರೋಪಗಳ ಸತ್ಯಾನುಸತ್ಯತೆ ಏನು ಎನ್ನುವುದನ್ನು ತಿಳಿಯಬೇಕಿದೆ.

ಉತ್ತರಪ್ರದೇಶದಲ್ಲಿ ಒಂದಲ್ಲ, ಎರಡಲ್ಲ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರು ತಮಗೆ ದೊರಕಿದ ಅಲ್ಪಾವಧಿಯಲ್ಲೇ ಅದ್ವಿತೀಯವಾದ ಕೆಲಸಗಳನ್ನು ಮಾಡಿದ್ದಾರೆ. ಮತ್ತು ಅಗಣಿತವಾದ ಸಾಧನೆಗಳನ್ನು ಮಾಡಿ ತೋರಿಸಿದ್ದಾರೆ ಎನ್ನುವುದು ನಿರ್ವಿವಾದ ಸತ್ಯ. ಮಾಯಾವತಿಯವರ ಅಭಿವೃದ್ಧಿ ಕಾರ್ಯಗಳನ್ನು ಕಂಡು ಬೆಕ್ಕಸ ಬೆರಗಾಗಿರುವ ನ್ಯೂಯಾರ್ಕ್ ಟೈಮ್ಸ್, ಫೋರ್ಬ್ಸ್, ಫ್ರಂಟ್ ಲೈನ್ ನಂತಹ ನೂರಾರು ಅಂತರಾಷ್ಟ್ರೀಯ ವಿದೇಶಿ ದಿನಪತ್ರಿಕೆಗಳು, ನಿಯತಕಾಲಿಕಗಳು, ದೃಶ್ಯ ಮಾಧ್ಯಮಗಳು ಮಾಯಾವತಿಯವರ ಸಂದರ್ಶನ ಪಡೆದು ಪ್ರಕಟಿಸಿವೆ. ಜೊತೆಗೆ ಮಾಯಾವತಿಯವರ ಅಧಿಕಾರವಧಿಯಲ್ಲಾದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಬಗ್ಗೆ ದಾಖಲೆಸಹಿತ ಮಾಹಿತಿ ಒದಗಿಸಿವೆ.

ಆದರೆ ಭಾರತದ ಸುದ್ದಿ ಮಾಧ್ಯಮಗಳು ಮಾಯಾವತಿಯವರ ಈ ಯಾವ ಸಾಧನೆಗಳ ಬಗೆಗೂ ಎಲ್ಲಿಯೂ ಎರಡೇ ಎರಡು ಸಾಲೂ ಗೀಚಿಲ್ಲ. ಹೋಗಲಿ, ನಮ್ಮ ನಡುವಿನ ಈ ಪ್ರಗತಿಪರ ಬುದ್ಧಿಜೀವಿಗಳು ಈ ಬಗ್ಗೆ ಯಾವ ವೇದಿಕೆಯಲ್ಲೂ ತುಟಿ ಚಿಚ್ಚಿ ಮಾತನಾಡಿಲ್ಲ. ಅವರು ಬರೆದಿರುವುದು, ಮಾತನಾಡಿರುವುದು ಬರೀ ಮಾಯಾವತಿಯವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದರ ಬಗ್ಗೆ.. ಕೋಮುವಾದಿ ಬಿಜೆಪಿಯೊಂದಿಗೆ ಅಧಿಕಾರ ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎನ್ನುವ  ಬಗ್ಗೆ.. ಮತ್ತು ಅವರು ನಿರ್ಮಿಸಿದ ಪ್ರತಿಮೆ, ಸ್ಮಾರಕಗಳ ಬಗ್ಗೆ!

ಕಳೆದ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಕಡಿದುಕೊಂಡ ಮಾಯಾವತಿಯವರ ನಿಲುವನ್ನು ಈ ಮಾಧ್ಯಮರಂಗದವರು, ಪ್ರಗತಿಪರರು ಇನ್ನಿಲ್ಲದಂತೆ ಟೀಕಿಸಿ ಜರಿದರು. ಮಾಯಾವತಿಯವರು ತಮ್ಮ ಹಗರಣಗಳನ್ನು ಮುಚ್ಚಿಹಾಕಿಕೊಳ್ಳಲೆಂದೇ ಕೇಂದ್ರದ ಬಿಜೆಪಿಗೆ ಸಹಕರಿಸಲು ಮುಂದಾಗಿದ್ದಾರೆ ಎಂದೇ ಬಗೆದರು. ಆದರೆ, ಚುನಾವಣೆ ಮುಗಿದು ವಿಧಾನಸಭೆ ಅತಂತ್ರವಾದಾಗ ಕಾಂಗ್ರೆಸ್ ಗೆ ಬೆಂಬಲ ಕೊಡಲು ಮೊದಲು ಮುಂದೆ ಬಂದವರೇ ಮಾಯಾವತಿಯವರು. ನಂತರ ದೇಶದಲ್ಲಿ ಮೋದಿ ಅಬ್ಬರವನ್ನು ಕುಗ್ಗಿಸುವ ಸಲುವಾಗಿ ಸಮಾಜವಾದಿ ಪಕ್ಷದೊಂದಿಗೆ ಮಹತ್ವದ ಹೊಂದಾಣಿಕೆ ಮಾಡಿಕೊಂಡ ಮಾಯಾವತಿಯವರು ಬಿಜೆಪಿಗೆ ಮುಟ್ಟಿನೋಡಿಕೊಳ್ಳುವಂತಹ ಮರ್ಮಾಘಾತ ಕೊಟ್ಟರು. ಆದರೆ ಮಾಯಾವತಿಯವರನ್ನು ನಖಶಿಖಾಂತ ದ್ವೇಷಿಸಿದವರು ಅಪ್ಪಿತಪ್ಪಿಯೂ ಈ ಬಗ್ಗೆ ಮಾತನಾಡಲಿಲ್ಲ. ಒಂದು ವೇಳೆ ಮಾಯಾವತಿಯವರು ಭ್ರಷ್ಟಾಚಾರ ಮಾಡಿದ್ದರೆ, ಆ ಬಗ್ಗೆ ಅವರಿಗೆ ಭಯವಿದ್ದಿದ್ದರೆ ಕೇಂದ್ರದ ಬಿಜೆಪಿ ವಿರುದ್ದ ಇಂತಹ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿತ್ತೇ? ಮಾಯಾವತಿಯವರ ಮೇಲಿನ ಭಾರತೀಯ ಮಾಧ್ಯಮಗಳ ಮತ್ತು ಬುದ್ಧಿಜೀವಿಗಳ ಈ ಇಬ್ಬಗೆಯ ನೀತಿಗೆ ಕಾರಣವೇನು ?

ಕಾರಣ ಸ್ಪಷ್ಟ; ಜಾತಿಯನ್ನೇ ನೀತಿ ಮಾಡಿಕೊಂಡ ಈ ದೇಶದಲ್ಲಿ ಎರಡು ಬಗೆಯ ವಾದವಿದೆ. ಒಂದು ಮನುವಾದ. ಇನ್ನೊಂದು ಮಾನವತಾವಾದ. ಮನುವಾದದ ಪರವಿರುವರು ಶೇ. 90ರಷ್ಟು ದೇಶದ ಆಸ್ತಿ , ಸಂಪತ್ತು, ಅಧಿಕಾರವನ್ನು ಹಿಡಿದುಕೊಂಡಿದ್ದಾರೆ. ತಮ್ಮ ಈ ಹಿತಾಸಕ್ತಿಗಳ ರಕ್ಷಣೆಗಾಗಿಯೇ ಕಾಂಗ್ರೆಸ್, ಬಿಜೆಪಿ, ಕಮ್ಯುನಿಷ್ಟ್ ಗಳಂತಹ ಭಿನ್ನ ನೆಲೆಯ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಈ ಅಧಿಕಾರ ಬಲದಿಂದಲೇ ಈ ಪಕ್ಷಗಳ ಬಂಡವಾಳವಾಹಿಗಳು, ಬೃಹತ್ ಉದ್ಯಮಿಗಳು ದೇಶದಲ್ಲಿ MONEY, MEDIA, MAFIAಗಳನ್ನು ವ್ಯವಸ್ಥಿತವಾಗಿ ನಿಗ್ರಹಿಸುತ್ತಿದ್ದಾರೆ. ನೂರಾರು ಸುದ್ದಿ ಮಾಧ್ಯಮ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವರಿಗೆ ಪೂರಕವಾದ ಸುದ್ದಿಗಳನ್ನು ಸಕಾರಾತ್ಮಕವಾಗಿಯೂ ಮತ್ತು ಅವರ ಹಿತಾಸಕ್ತಿಗೆ ವಿರುದ್ದವಾದ ವಿಷಯಗಳನ್ನು ನಕಾರಾತ್ಮಕವಾಗಿಯೂ ಬಿಂಬಿಸಿ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಕಲೆಗಾರಿಕೆ ಪಡೆದುಕೊಂಡಿದ್ದಾರೆ. ಇವರ ಹಿತಾಸಕ್ತಿಗಳಿಗೆ ತದ್ವಿರುದ್ಧವಾದ ಸಿದ್ಧಾಂತ ಹೊಂದಿರುವ ಯಾವುದೇ ರಾಜಕೀಯ ಪಕ್ಷಗಳನ್ನು , ಸಂಘಟನೆಗಳನ್ನು ಭ್ರಷ್ಟಾಚಾರ ಆರೋಪದ ಹೆಸರಿನಲ್ಲಿ , ಜನವಿರೋಧಿ ನೀತಿ ಹೆಸರಿನಲ್ಲಿ ಹೊಸಕಿ ಹಾಕಿ ಬಿಡುವುದು ಇವರಿಗೆ ತೀರಾ ಸುಲಭದ ಕೆಲಸ.

ಇನ್ನೂ ಈ ಪ್ರಗತಿಪರರ ಕಥೆಗೆ ಬಂದರೆ, ಈ ಬುದ್ದಿಜೀವಿ ಎನ್ನುವ ಹೆಸರಿನಲ್ಲಿ ಜನರ ಮೆದುಳುಗಳನ್ನು ಆಳುತ್ತಿರುವವರು, ಸುಧಾರಣಾವಾದಿಗಳೆಂದು ತಮ್ಮನ್ನು ಬಿಂಬಿಸಿಕೊಂಡರೂ ಇವರು ಶೋಷಕರ ಹಿನ್ನೆಲೆಯನ್ನು ಹೊಂದಿರುವ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್  ಪಕ್ಷಗಳನ್ನು ಹಿಂಬಾಳಿಸುತ್ತಿದ್ದಾರೆ. ಇವರ ಈ ಕೃತ್ಯ ತಿಳಿಯದೇ ಇರುವವರೋ ಅಥವಾ ಆಮಿಷಗಳಿಗೆ ಒಳಗಾದವರೋ ನಿಷ್ಠೆಯಿಂದ ಹಿಂಬಾಲಿಸುತ್ತಿದ್ದಾರೆ. ಈ ಮೂಲಕ  ಬಾಬಾಸಾಹೇಬ್ ಅಂಬೇಡ್ಕರ್ ರವರ ಹಾದಿಯಲ್ಲಿ ಯಾವ ಕಾಲದಲ್ಲೂ ಹೆಜ್ಜೆ ಹಾಕದ, ಹೆಜ್ಜೆ ಹಾಕಲು ನಿರಾಕರಿಸಿರುವ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳೊಳಗಿರುವ ದಲಿತ-ಹಿಂದುಳಿದ ಬುದ್ದಿಜೀವಿಗಳು, ದಾದಾಸಾಹೇಬ್ ಕಾನ್ಷಿರಾಮರ ಬಹುಜನ ಚಳುವಳಿಯನ್ನೂ ಅನುಮಾನಿಸಿದ್ದಾರೆ. ಮಾಯಾವತಿಯವರ ರಾಜಕೀಯ ನಡೆಗಳನ್ನು ಹೀಯಾಳಿಸಿದ್ದಾರೆ ಮತ್ತು ಅಪಪ್ರಚಾರಗಳಿಗೆ ಬಲಿಬಿದ್ದು ಈಗಲೂ ವಿರೋಧಿಸುತ್ತಲೇ ಇದ್ದಾರೆ. ಇಂತಹ ಬುದ್ದಿಜೀವಿಗಳಿಗೆ ಸಾಮಾಜಿಕ ಬದಲಾವಣೆಯೂ ಬೇಕಾಗಿದೆಯೋ ಅಥವಾ ಆರ್ಥಿಕ ಪ್ರಗತಿಯೂ ಅವಶ್ಯಕತೆ ಇದೆಯೋ ತಿಳಿಯದು. ಆದರೆ ಇವರು ಸಾಮಾಜಿಕ, ಹಾಗೂ ಆರ್ಥಿಕ ಪ್ರಗತಿ ಎರಡನ್ನೂ ದಕ್ಕಿಸಿಕೊಡಬಲ್ಲ ರಾಜಕೀಯ ಅಧಿಕಾರವನ್ನು ತಾವೇ ಗಳಿಸಿಕೊಳ್ಳುವ ರಿಸ್ಕ್ ಗೆ ತಲೆ ಹಾಕಲು ಹೋಗಲ್ಲ.  ರಿಸ್ಕ್ ತೆಗೆದುಕೊಳ್ಳುವವರನ್ನು ಸಹಿಸಿಕೊಳ್ಳುವ ವಿವೇಚನೆಯೂ ಇಲ್ಲವಾಗಿದೆ.

ದೇಶಕ್ಕೆ ದೊರಕಿರುವ ಮಾಯಾವತಿಯವರಂತಹ ಸಮರ್ಥ ಮತ್ತು ಯಶಸ್ವಿ ನಾಯಕತ್ವವನ್ನು ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್  ಪಕ್ಷಗಳು ಸುಲಭವಾಗಿ ಜೀರ್ಣಿಸಿಕೊಳ್ಳುವುದು ಅಸಾಧ್ಯ. ಈ ಕಾರಣದಿಂದಾಗಿಯೇ ಅವರುಗಳು ‘ತಾಜ್ ಹಗರಣ ಮತ್ತು ಆದಾಯಕ್ಕಿಂತ ಮಿಗಿಲಾದ ಸಂಪತ್ತು ಶೇಖರಣೆ’ ಎಂಬ ಸುಳ್ಳು ಆರೋಪಗಳನ್ನು ಹೊರಿಸಿ, ಮಾಯಾವತಿಯವರ ನಾಯಕತ್ವಕ್ಕೆ ಮಸಿ ಬಳಿಯುವಂತಹ ಹುನ್ನಾರಗಳನ್ನು ಮಾಡಲಾರಂಭಿಸಿದರು. ಹತ್ತು ವರ್ಷಗಳ ದೀರ್ಘಕಾಲದ ನಂತರ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮೇಲ್ಕಂಡ ಸುಳ್ಳು ಆರೋಪಗಳಿಂದ ಮುಕ್ತಿಗೊಳಿಸಿ, ಮಾಯಾವತಿಯವರಿಗೆ ನ್ಯಾಯ ನೀಡಿದೆ. ಆದರೆ ಇದರ ವಿರುದ್ಧವೂ ಸಹ ಅನೇಕ ಪಿತೂರಿಗಳು ನಡೆಯುತ್ತಿವೆ.

ಮಾಯಾವತಿಯವರು ಕೋಟ್ಯಾಂತರ ರೂಪಾಯಿಗಳ ಅಕ್ರಮ ಆಸ್ತಿ ಸಂಪಾದಿಸಿದ್ದರೂ ಈ ಪಕ್ಷಗಳು ಹಾಗೂ ಮಾಧ್ಯಮಗಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡದಿದ್ದರೂ ಚಕಾರವೆತ್ತುತ್ತಿರಲಿಲ್ಲ. ಆದರೆ ಮಾಯಾವತಿಯವರು ಶತಶತಮಾನಗಳಿಂದ ದೇಶದ ಇತಿಹಾಸದಲ್ಲಿ ಗುರುತಿಸದ, ಶೋಷಿತ ಸಮಾಜಕ್ಕಾಗಿ ದುಡಿದ ಮಹಾನೀಯರ ಚರಿತ್ರೆಯನ್ನು ತಿಳಿದುಕೊಳ್ಳಲು ಅಂಬೇಡ್ಕರ್ ಪಾರ್ಕ್, ಕಾನ್ಷಿರಾಮ್ ಪ್ರೇರಣಾ ಕೇಂದ್ರಗಳಂತಹ ಅದ್ಭುತವಾದ ಸ್ಮಾರಕಗಳನ್ನು ನಿರ್ಮಿಸುತ್ತಾರೆ. ಮತ್ತು ಅಂಬೇಡ್ಕರ್, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಭಗವಾನ್ ಬುದ್ದ, ಕಾನ್ಷಿರಾಮ್, ಸಂತ ಕಬೀರ್, ಮಹಾಮಾಯ ಹೆಸರಿನಲ್ಲಿ ಜಿಲ್ಲೆಗಳನ್ನು ಸೃಷ್ಟಿಸುತ್ತಾರೆ. ಸಾವಿರಾರು ಶಾಲಾಕಾಲೇಜುಗಳನ್ನು ಸ್ಥಾಪಿಸುತ್ತಾರೆ. ಇದರ ಜೊತೆಗೆ ಎಲ್ಲಾ ಜಾತಿಯ ಬಡವರಿಗೆ ಪ್ರತಿ ಮನೆಗೆ ಮೂರು ಎಕರೆ ಜಮೀನನ್ನು ನೀಡುತ್ತಾರೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡಿದ್ದರಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಮತ್ತು ಬ್ಯಾಕ್ ಲಾಗ್ ತುಂಬಿದ್ದರಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಸ್ವಾವಲಂಬನೆಯ ಜೊತೆಗೆ ಸ್ವಾಭಿಮಾನವೂ ಸೃಷ್ಟಿಯಾಗುತ್ತದೆ. ಇದು ಪರಂಪರಾನುಗತ ಅಧಿಕಾರಶಾಹಿಗಳಾದ ಕಾಂಗ್ರೆಸ್, ಬಿಜೆಪಿ, ಕಮ್ಯುನಿಷ್ಟ್ ಪಕ್ಷಗಳ ಹಿತಾಸಕ್ತಿಯ ಪೋಷಕರಿಗೆ ನುಂಗಲಾರದ ತುತ್ತಾಗಿದೆ.

ಈ ದೇಶದ ಶೋಷಿತರ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬೆಳವಣಿಗೆಯು ಮುಂದೊಂದು ದಿನ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ಹಿತಾಸಕ್ತಿಗಳಿಗೆ ಬಲವಾದ ಪೆಟ್ಟು ಕೊಡುತ್ತದೆ ಎನ್ನುವುದನ್ನು ನಿಖರವಾಗಿ ಬಲ್ಲವರ  ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಇಂತಹ ಅಪಪ್ರಚಾರಗಳನ್ನು ಹಬ್ಬಿಸುತ್ತಾರೆ. ಯಾವುದೇ ಒಬ್ಬ ಸಚ್ಚಾರಿತ್ರ್ಯ ವ್ಯಕ್ತಿಯ ಘನತೆಗೆ ಮಸಿ ಬಳಿಯಲು ಬಳಸಬಹುದಾದ ಸುಲಭ ಅಸ್ತ್ರವೆಂದರೆ ಅದು ಭ್ರಷ್ಟಾಚಾರದ ಆರೋಪ. ಈ ತಂತ್ರದಿಂದ ಶತ್ರುವನ್ನು ಯಾವುದೇ ಹೊಡೆದಾಟವಿಲ್ಲದೆ ಸುಲಭವಾಗಿ ಮಣಿಸಿಬಿಡಬಹುದು. ಯಾಕೆಂದರೆ ಮನುವಾದಿಗಳ ಈ ಮರ್ಮವನ್ನು ಅರಿಯದ ಮುಗ್ಧ ಜನರು ಅವರ ನಾಯಕರ ಮೇಲಿನ ವಿಶ್ವಾಸವನ್ನು ತಾವಾಗಿಯೇ ಕಡಿದುಕೊಳ್ಳುತ್ತಾರೆ. ಇದರಿಂದಾಗಿ ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ನಿರ್ಮಿಸಿಕೊಂಡಿರುವ ಅಸಮಾನತೆಯ ವ್ಯವಸ್ಥೆಗೆ ಪರ್ಯಾಯವಾಗಿ ರೂಪುಗೊಂಡಿರುವ ಮಾನವತಾವಾದಿ ಚಳವಳಿಗೆ ಹಿನ್ನಡೆ ಉಂಟಾಗುತ್ತದೆ. ಮನುವಾದಿಗಳು ವಿಜೃಂಭಿಸುತ್ತಾರೆ.

ಈ ಕಾರಣಗಳಿಗಾಗಿಯೇ ಮಾಯಾವತಿಯವರಿಗೆ ಭ್ರಷ್ಟೆ ಎನ್ನುವ ಹಣೆಪಟ್ಟಿ ಕಟ್ಟಿ ಅವರನ್ನು ಸಮಾಜದಿಂದ ಬೇರ್ಪಡಿಸುವ ಕೀಳು ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.  ಈ ಬಗ್ಗೆ ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮಾಧ್ಯಮಗಳ ಜನ ವಿರೋಧಿ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಪ್ರಗತಿಪರ ಸೋಗಿನ ನಕಲಿ ಸುಧಾರಣಾವಾದಿಗಳಿಂದ ಅಂತರ ಕಾಯ್ದುಕೊಳ್ಳಬೇಕು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಕನ್ನಡ ಉಳಿಸುವ ಜವಾಬ್ದಾರಿ ಬಡ ಮಕ್ಕಳಿಗೆ..
ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಆದೇಶವನ್ನು ಹಿಂಪಡೆಯಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ...
POLL

[democracy id="1"]