Friday, August 23 , 2019
ಬಣ್ಣಗಳ ತತ್ವಶಾಸ್ತ್ರೀಯ ರಾಜಕಾರಣ

ಕರಿಯೊಡಲ ಕಣ್ಣೋಟ

-ಪಿ.ಆರಡಿಮಲ್ಲಯ್ಯ ಕಟ್ಟೇರ, ಚಳ್ಳಕೆರೆ

ravitheja.pam@gmail.com

ಈ ಲೇಖನವು ನನ್ನ ‘ಬಯಲಾಟದ ಕಥನಗಳಲ್ಲಿ ಸಾಂಸ್ಕೃತಿಕ ಸಂಘರ್ಷ : ಚಾರ್ವಾಕ, ಬುದ್ಧ, ಡಾರ್ವಿನ್, ಕಾರ್ಲ್ಮಾಕ್ರ್ಸ್ ಮತ್ತು ಅಂಬೇಡ್ಕರ್ ದೃಷ್ಟಿಕೋನ’ ಎಂಬ ಸಂಶೋಧನಾ ಪ್ರೌಢಪ್ರಬಂಧದಲ್ಲಿನ ಒಂದು ಸಣ್ಣಭಾಗ. ಬಯಲಾಟದಲ್ಲಿ ಬಳಸುವ ಬಣ್ಣಗಳು ಆಯಾ ಪಾತ್ರದ ರಾಜಕೀಯ ಫಿಲಾಸಫಿಯನ್ನು ಹೇಳುತ್ತವೆ ಎಂಬುದು ನನ್ನ ನಿರ್ಧಾರವಾಗಿತ್ತು. ಹಾಗಾಗಿ ಬಣ್ಣಗಳನ್ನು ಯಾವ ಕಾಲದಲ್ಲಿ ಯಾವ ಅರ್ಥದಲ್ಲಿ ಬಳಸುತ್ತಿದ್ದರು ಎಂಬುದನ್ನು ಬಹುಶಿಸ್ತೀಯ ನೆಲೆಯಲ್ಲಿ ಸಾಕ್ಷೀಕರಿಸಿದ್ದೇನೆ. ಇಂದಿನ ರಾಜಕೀಯ ಪಕ್ಷಗಳ ಬಣ್ಣಗಳಿಗೂ ಬಣ್ಣಗಳ ಆದಿನ ಅರ್ಥವಂತಿಕೆಗೂ ಹೇಗೆ ತಾಳೆಯಾಗುತ್ತಿದೆ ಎಂಬುದನ್ನು ಕೂಡ ಚರ್ಚಿಸಿದ್ದೇನೆ. ಬಯಲಾಟಕ್ಕಾಗಿ ಬರೆದ ಲೇಖನವಿದಾದ ಕಾರಣ ಎಲ್ಲಿಯೂ ಬಯಲಾಟ ಪದವನ್ನು ಬದಲಾಯಿಸಿಲ್ಲ. ಆ ಪದವಿದ್ದರೂ ಏನೂ ಸಮಸ್ಯೆಯಾಗಲಾರದು ಎಂಬ ನಂಬಿಕೆಯೊಂದಿಗೆ ಹಾಗೆಯೆ ಉಳಿಸಿಕೊಳ್ಳಲಾಗಿದೆ. ಸಂಶೋಧನಾ ಲೇಖನವಾದ ಕಾರಣ ಸಂಖ್ಯಾಟಿಪ್ಪಣಿಗಳನ್ನೂ ಹಾಗೆ ಉಳಿಸಿಕೊಳ್ಳಲಾಗಿದೆ.

ಜನಪದ ಕಲೆಗಳಲ್ಲಿ ಬಳಕೆಯಾಗುತ್ತಿದ್ದ ಬಣ್ಣಗಳು ಸಹಜವಾಗಿಯೇ ಸಂಶೋಧನೆಗೆ ಕುತೂಹಲದ ಸಂಗತಿಗಳಾಗಿವೆ. ಕಾಲ, ಸಂದರ್ಭಕ್ಕನುಗುಣವಾಗಿ ವಿಶೇಷ ಆಚರಣೆಗಳ ಸಂದರ್ಭಗಳಲ್ಲಿಯೇ ಬಳಕೆಯಾಗುತ್ತಿದ್ದ ಕಾರಣಗಳನ್ನು ಹುಡುಕುವುದು ಸವಾಲಿನ ಸಂಗತಿ. ಭರತಮುನಿಯು ಯಾವ್ಯಾವುದಕ್ಕೆ ಯಾವ ಬಣ್ಣದ ಬಟ್ಟೆ ಕಟ್ಟಬೇಕು ಎಂಬುದನ್ನು, ರುದ್ರಪರ್ವಕ್ಕೆ ನೀಲಿಬಟ್ಟೆ, ವಿಷ್ಣುಪರ್ವಕ್ಕೆ ಹಳದಿಬಟ್ಟೆ, ಸ್ಕಂದಪರ್ವಕ್ಕೆ ಕೆಂಪುಬಟ್ಟೆ, ಎಂಬುದಾಗಿ ಸೂಚಿಸಿದ್ದಾರೆ. ಆ ಬಣ್ಣಗಳು ಯಾವುದರ ಸಂಕೇತಗಳಾಗಿ ಬಳಕೆಯಾಗುತ್ತಿದ್ದಿರಬಹುದು ಎಂಬುದು ಪ್ರಾಚೀನ ಮಾನವನ ನಡೆಯ ಮೂಲಕ ಗುರುತಿಸಲು ಯತ್ನಿಸಬಹುದು. ಬಣ್ಣಗಳು ತತ್ವಶಾಸ್ತ್ರೀಯವಾಗಿ ಪರಿಗಣಿಸಲ್ಪಟ್ಟಾಗ ಅರ್ಥಗಳನ್ನು ಅರಿಯಲು ಸುಲಭವಾದರೂ ಕ್ರಿಯಾಚರಣೆಗಳ ಆಶಯಗಳ ಅರಿಯುವಿಕೆ ಬಣ್ಣಗಳ ಗುಣಧರ್ಮಗಳನ್ನು ತಿಳಿಯಲು ಸೂಕ್ತ ಕ್ರಮವಾಗಬಲ್ಲದು. ಪ್ರಾಚೀನ ತತ್ವಶಾಸ್ತ್ರ, ಆಚರಣೆಗಳ ಆಶಯ ಮತ್ತು ಆಧುನಿಕ ಮನಃಶಾಸ್ತ್ರಗಳ ಮೂಲಕ ಬಣ್ಣಗಳ ಅರ್ಥಗಳನ್ನು ತಿಳಿಯಲು ಯತ್ನಿಸೋಣ. ‘ಮನಶಾಸ್ತ್ರದಲ್ಲಿ ಹೇಳಿದ ಬಣ್ಣಗಳು ಕಲೆ ಮತ್ತು ಮನುಷ್ಯನ ಮನಸ್ಸಿನ ಗುಣದ ಪ್ರತಿನಿಧಿಗಳಾಗಿವೆ. ಜನಪದ ಕಲೆಯಲ್ಲಿ ಉಪಯೋಗಿಸುವ ಬಣ್ಣವನ್ನು ಮನಶಾಸ್ತ್ರೀಯವಾದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು. ಜನಪದ ಕಲೆಗಳಲ್ಲಿ ಬಳಸಿದ ಬಣ್ಣಕ್ಕೆ ಎರಡು ಹಿನ್ನೆಲೆಗಳಿವೆ: ಒಂದು ಭಾರತೀಯ ತತ್ವಜ್ಞಾನದ ಪ್ರೇರಣೆ. ಎರಡು: ಸಾಮಾಜಿಕ ಧೋರಣೆ. ಈ ಎರಡೂ ಹಿನ್ನೆಲೆಗಳೂ ಬಣ್ಣದ ಬಳಕೆಗೆ ಹೆಚ್ಚು ಪರಿಣಾಮವನ್ನು ಕೊಟ್ಟಿವೆ’1 ಬಣ್ಣಗಳ ವಿವಿಧ ಛಾಯೆ ಕಲಾವಿದನ ವಿವಿಧ ಭಾವೋದ್ವೇಗಗಳಿಗೆ ಹೊಂದಿಕೊಳ್ಳಬಲ್ಲದು. ಹೀಗಾಗಿ ಕಲಾವಿದನೂ ವರ್ಣಸಂಯೋಜನೆಯ ಆಳ, ಪ್ರಖರತೆ ಹಾಗೂ ನೆರಳು ಬೆಳಕುಗಳ ಆಟಗಳನ್ನು ತನ್ನ ಭಾವನೆಗಳ ಅಭಿವ್ಯಕ್ತಿಗಾಗಿ ದುಡಿಸಿಕೊಳ್ಳುತ್ತಾನೆ. ಬಣ್ಣಗಳ ಗುಣಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೋಡಬೇಕಾಗುತ್ತದೆ.

ಬ್ಯಾಬಿಲೋನಿಯನ್ನರು ಮೂರುವರ್ಣಗಳ ಮಡಕೆಗಳನ್ನು ಪೂಜಿಸುತ್ತಿದ್ದರು. ಕೆಂಪುಬಣ್ಣದಿಂದ ಭೂಮಿಯನ್ನು ಕಪ್ಪು ಬಣ್ಣದಿಂದ ಸಾವನ್ನೂ, ಬದುಕಿನ ಅನಂತತೆಯನ್ನು ಮತ್ತು ಪಾವಿತ್ರ್ಯವನ್ನು ಬಿಳಿಯಿಂದಲೂ ಸಂಕೇತಿಸಿದ್ದರು ಎಂದು ಪೀಟರ್ ವ್ಯಾಟ್ಸನ್ ದಾಖಲಿಸಿದ್ದಾನೆ.  ಇಂಡಿಯಾದ ಪ್ರಾಚೀನ ಗ್ರಂಥಗಳಲ್ಲಿ ಶ್ಲೋಕಗಳು ಬಣ್ಣಗಳ ಗುಣಧರ್ಮವನ್ನು ಕುರಿತು ಮುಂದಿನಂತೆ ವಿವರಿಸುತ್ತವೆ.  ‘ಶ್ಯಾಮೋಭವತಿ ಶೃಂಗಾರಃ ಸಿತೋ ಹಾಸ್ಯ ಪ್ರಕೀರ್ತಿತಃ | ಕಮೋತಃ ಕರುಣಶ್ಚೈರಕ್ತೋ ರೌದ್ರಃ ಪ್ರಕೀರ್ತಿತಃ | ನಾನಾ ವಿಧಾಂಶ್ಚ ಹರಿದಾದಿ ವಿಚಿತ್ರ  ವರ್ಣಾನ್ | ಪಶ್ಯೇಮ ವಾ ಜಗತಿ ಯಾನ್ಚ ನಿಸರ್ಗ ರಮ್ಯಾನ್ | ದೇವೇಷು ಪಕ್ಷಿ ಪಶು ಜೀವ ಜನೇಷು ಯತ್ರ | ವರ್ಣಾಃ ಪ್ರಭಾವಮತುಲಂ ವಿತರಂತಿ ನಿತ್ಯಮ್’ ಶ್ಯಾಮವರ್ಣವು ಶೃಂಗಾರ ರಸವನ್ನು ಪ್ರತಿಪಾದಿಸಿದರೆ ಬಿಳಿಯು ಹಾಸ್ಯರಸವನ್ನು ಸಾಂಕೇತಿಸುತ್ತದೆ. ಅದರಂತೆ ಕಪೋತ (ಕಪೋತ ಪಕ್ಷಿಯ ಬಣ್ಣ) ಕರುಣ ರಸವನ್ನು, ಕೆಂಪು ರೌದ್ರರಸವನ್ನು ಪ್ರಚೋಚಿಸುವದು. ಹೀಗೆಯೇ ವೀರರಸಕ್ಕಾಗಿ ಗೌರವವರ್ಣ, ಭಯಾನಕಕ್ಕಾಗಿ ಕೃಷ್ಣಬಣ್ಣದ ಉಲ್ಲೇಖವಿದೆ. ನೀಲವರ್ಣದಿಂದ ಬೀಭತ್ಸರಸಕ್ಕೆ, ಹಳದಿಯು ಅದ್ಭುತ ರಸಕ್ಕೆ ಪೂರಕವಾಗಿವೆ ಎಂಬುದು ಲೋಕ ಪ್ರಸಿದ್ದಿಯಾದ ಸಂಗತಿಯಾಗಿದೆ.  ಮೇಲಿನ ಶ್ಲೋಕವೂ ಇದನ್ನೇ ಹೇಳುತ್ತದೆ.

ಬಣ್ಣ ಎಂಬ ಪದದ ಉಪಯೋಗದ ವ್ಯಾಖ್ಯಾನ ಸ್ಪಷ್ಟವಾಗಿಲ್ಲದಿರುವುದು ಒಂದು ತೊಡಕಾಗಿದೆ. ಬಣ್ಣ ಎಂಬ ಪದವು ವಣ್ಣ ಎಂಬ ಸಾಮಾಜಿಕ ಅಂತಸ್ತಿನ ನೆಲೆಯಿಂದ ಬಂದುದಾಗಿದೆಯೆಂದು ತಿಳಿಯಲಾಗಿದೆ. ವರ್ಗವ್ಯವಸ್ಥೆಗಿಂತಲೂ ಭಿನ್ನವಾದೊಂದು ಜಾತಿವ್ಯವಸ್ಥೆಯಲ್ಲಿ ವರ್ಣಗಳೇ ಜಾತಿಗಳಾದವೆಂಬ ಸಿದ್ಧಾಂತವನ್ನು ನಂಬಲಾಗಿದೆ. ಹಾಗಾಗಿ ಬಣ್ಣಗಾರಿಕೆಯೊಳಗೆ ಜಾತಿ ಪ್ರತ್ಯೇಕತೆ ಸ್ಪಷ್ಟವಾಗಿಬಿಡುತ್ತದೆ.  ‘ಮೊದಲು ದ್ರಾವಿಡ ಬಣ್ಣಗಳು ಒಟ್ಟು ಮೂರು: ಹಳದಿ, ಕೆಂಪು, ಕಪ್ಪು. ಕಂದು ಬಣ್ಣವು ಕೆಂಪು ಮತ್ತು ಕಪ್ಪಿನ ಮಿಶ್ರಣದಿಂದ ಒದಗುವ ಬಣ್ಣ. ಕಂದು ಬಣ್ಣವನ್ನು ಪ್ರಕೃತಿದತ್ತವಾಗಿ ಸ್ವೀಕರಿಸಿದ್ದಿರಲೂಬಹುದು. ವಿಶೇಷವೆಂದರೆ ದ್ರಾವಿಡರ ಸಂಕೇತವಾದ ಶಿಲಾಯುಗ ಮತ್ತು ಹರಪ್ಪ, ಮೊಹೆಂಜೋದಾರೊಗಳ ಕಲೆಗಳಲ್ಲಿ ಬಿಳಿ ಬಣ್ಣದ ಪ್ರಯೋಗವೇ ಇಲ್ಲ. ದ್ರಾವಿಡರು ಉಪಯೋಗಿಸಿದ ಮುಖ್ಯ ಬಣ್ಣಗಳು ಕಪ್ಪು ಮತ್ತು ಕೆಂಪು, ಹಳದಿ.’2 ದ್ರಾವಿಡ ಪಾತ್ರಗಳ ಉಡುಗೆ ತೊಡುಗೆ ಬಣ್ಣಗಾರಿಕೆ ಕೆಂಪು, ಕಪ್ಪು, ನೀಲಿಯನ್ನು ಬಳಸಿದರೆ ದ್ರಾವಿಡೇತರ ಪಾತ್ರಗಳಿಗೆ ಬಿಳಿಯನ್ನು ಪ್ರಧಾನವಾಗಿ ಬಳಸಲಾಗುತ್ತದೆ.

ಮೋಹನ ಕುಂಟಾರರು ಸಂಕೇತಗಳು ಅರ್ಥ ಸ್ಪುರಿಸುವುದು ಬಣ್ಣಗಳ ನೆಲೆಯಿಂದಲ್ಲ ಚಿತ್ರಣದ  ಆಕಾರದ ನೆಲೆಯಿಂದ ಎಂದು ಬರೆಯುತ್ತಾರೆ. ಹಾಗಾಗಿ ಬಣ್ಣ ಬಳಕೆಯು ಬಣ್ಣಗಳ ಅರ್ಥಗಳನ್ನು ಅವಲಂಬಿಸಿಲ್ಲವೆಂದು ನಂಬುತ್ತಾರೆ. ವರ್ತಮಾನದ ದೃಷ್ಠಿಯಿಂದ ನೋಡಿದಾಗ ಅವರ ಮಾತುಗಳಲ್ಲಿ ಸತ್ಯಾಂಶವಿದೆ.  ಆದರೂ ಆದಿಮ ದೃಷ್ಠಿಯಿಂದ ಗಮನಿಸಿದಾಗ ಕೆಲವು ಮಿತಿಗಳು ಅವರ ಮಾತುಗಳಿಗೆ ಪ್ರಾಪ್ತವಾಗುತ್ತವೆ. ಲಾಂಛನಗಳು, ಬಣ್ಣಗಳು ಪಾತ್ರದ ಆದಿಮ ಚರಿತ್ರೆಯನ್ನು ಒಳಗೊಂಡಿರುತ್ತವೆಯೆಂಬುದಷ್ಟೆ ಅಲ್ಲದೆ ಪಾತ್ರದ ಸ್ವಭಾವವನ್ನೂ ನಿರ್ಧರಿಸಲು ಸಹಾಯವಾಗುತ್ತದೆ. ಬಣ್ಣದ ಸಂಕೇತದಿಂದಲೆ ಕೆಲವು ಕಲಾವಿದರು ಪರಕಾಯ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆಯೆಂದು ಹಿರಿಯರು ಹೇಳುತ್ತಾರೆ. ಬಣ್ಣಗಾರಿಕೆಯ ಮೂಲಕವೆ ಇದು ಇಂಥ ಪಾತ್ರವೆಂದು ಅನಕ್ಷರಸ್ಥ ಸಮುದಾಯವೂ ಗುರುತಿಸುತ್ತದೆ. ಅಟ್ಟದ ಮೇಲೆ ಆರ್ಭಟಿಸಿ ಕುಣಿಯುವ ಪಾತ್ರಧಾರಿಯನ್ನು ಯಾರಾದರೂ ಹಂಗಿಸಿದಾಗ ‘ಏನು ಮಾಡುತ್ತಾನೆ ಪಾಪ ಆತ ಹಾಕಿರುವ ಬಣ್ಣವೆ ಅಂತಾಹದ್ದು’ ಎನ್ನುವ ಮಾತುಗಳನ್ನು ನಾನು ಗಮನಿಸಿದ್ದೇನೆ.

ನಾಟ್ಯಶಾಸ್ತ್ರದ ತಾತ್ವಿಕತೆಯಲ್ಲಿ ಬಿಳಿಯು ಸತ್ವಯುತ ವಿಷ್ಣುವಿನ ಅವತಾರಗಳಿಗೆ ಎಂದು ಸೂಚಿಸಲಾಗಿದೆ. ಕೆಂಪು, ಕಪ್ಪು, ನೀಲಿಯನ್ನು ಶಿವನ ಹಾಗೂ ರಾಕ್ಷಸರ ಪಾತ್ರಗಳಿಗೆಂದೂ ಸೂಚಿಸಿದೆ. ನೀಲಿಯನ್ನು ಮನಃಶಾಸ್ತ್ರವು ಸತ್ಯದ ಪ್ರತಿಪಾದನೆಯೆಂದು ಗುರುತಿಸಿರುವುದು ಅಭಿನಂದನಾರ್ಹ. ನಾಟ್ಯಶಾಸ್ತ್ರವು ದ್ರಾವಿಡ ಪಾತ್ರಗಳ ಉಡುಗೆ ಮಲಿನವೆಂದೂ ದ್ರಾವಿಡೇತರ ಪಾತ್ರಗಳ ಉಡುಗೆ ಶುಭ್ರವೆಂದೂ ಗುರುತಿಸಿ ದಾಖಲಿಸುತ್ತದೆ. ‘ಶುದ್ಧೋ ವಿಚಿತ್ರೋ ಮಲಿನಃ’ ಎಂಬ ನಾಟ್ಯಶಾಸ್ತ್ರದ ಶ್ಲೋಕವು ಜಾತಿಯನ್ನು ಸೀಳಿ ವೇಷಭೂಷಣದ ಕ್ರಮವನ್ನು ಸೂಚಿಸುತ್ತದೆ. ‘ಮನಃಶಾಸ್ತ್ರದಲ್ಲಿ ಬಣ್ಣವನ್ನು ಪರೀಕ್ಷೆಯ ಮಾಧ್ಯಮವಾಗಿ ಬಳಸುತ್ತಾರೆ. ಬಣ್ಣದ ಮೇಲಿನ ಆಸಕ್ತಿ ಅವನ (subject) ಮನಸ್ಥಿತಿಯನ್ನು ವಿವರಿಸುವಲ್ಲಿ ಸಹಕಾರಿಯಾಗುತ್ತದೆ. ಮನಃಶಾಸ್ತ್ರಜ್ಞರು ಬಣ್ಣದ ಕುರಿತು ಬೇರೆ ಬೇರೆ ರೀತಿಯ ಅಭಿಪ್ರಾಯ ಕೊಡುತ್ತಾರೆ. ಆದರೆ ಅದರ ಮೂಲ ಸಿದ್ಧಾಂತ (Basic Theory) ಒಂದೇ ಎಂದನ್ನಿಸುತ್ತದೆ. ಯಾಕೆಂದರೆ ಎಲ್ಲಾ ಸಿದ್ಧಾಂತಗಳೂ ಬಣ್ಣ ಮತ್ತು ಮಾನಸಿಕ ಅವಸ್ಥೆಯನ್ನೇ ಪ್ರತಿಧ್ವನಿಸುತ್ತವೆ. ಕಲೆಯಲ್ಲಿ ಬಳಸುವ ಬಣ್ಣಕ್ಕೂ ಮಾನಸಿಕ ಅವಸ್ಥೆಗೂ ಸಂಬಂಧವಿರುವುದರಿಂದ ಕಲೆ ಮನಸ್ಸಿನ ತುಮುಲಗಳ ಪ್ರತಿನಿಧಿಯೇ ಆಗುತ್ತದೆ.’3 ಹೀಗಾಗಿ ಬಣ್ಣದ ಸ್ವರೂಪ ಮೂರ್ತವಾದರೂ ಅದರ ಅರ್ಥ ಅಮೂರ್ತವಾದ ಜಾತಿವ್ಯವಸ್ಥೆಯನ್ನೂ ತಾತ್ವಿಕ ರಾಜಕಾರಣವನ್ನೂ ಒಳಗೊಂಡಿರುತ್ತದೆ. ಬಣ್ಣಗಳ ಅಸ್ತಿತ್ವ ಮಾತ್ರ ಕಣ್ಣಿಗೆ ಕಾಣುತ್ತಿದ್ದು ಅದರ ಸ್ವರೂಪವನ್ನು ಹೇಳಲು ಪ್ರಾಚೀನ ತಂತ್ರವ್ಯವಸ್ಥೆಯನ್ನು ಮನಗಾಣಬೇಕಾಗುತ್ತದೆ. ಬಣ್ಣದ ಬಗ್ಗೆ ಯಾವ ವಿದ್ವಾಂಸರು ಈ ದೃಷ್ಠಿಯಿಂದ ನಿರೂಪಣೆ ಕೊಡದಿರುವುದು ನಮಗೆ ಸವಾಲಾಗಿ ಕಾಣಿಸುತ್ತದೆ.

ಈಗಾಗಲೇ ಪ್ರಸ್ತುತ ಸಂಶೋಧನೆಯು ಪುಟ ಮೀರಿ ಬೆಳೆದ ಕಾರಣ ಸಂಕ್ಷಿಪ್ತಗೊಳಿಸಲು ಯತ್ನಿಸಲಾಗಿದೆ. ಭರತನ ನಾಟ್ಯಶಾಸ್ತ್ರದಲ್ಲಿ ಬಣ್ಣಗಾರಿಕೆ ಮತ್ತು ಸಂಕೇತಗಳನ್ನು ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದರೂ ದೀರ್ಘ ವಿಶ್ಲೇಷಣೆಗೆ ತೊಡಗದೆ ಮುಂದುವರಿಯೋಣ. ಬಣ್ಣಗಳನ್ನು ಮನಃಶಾಸ್ತ್ರದ ಮೂಲಕ ನೋಡಿದ ಅಧ್ಯಯನಗಳು ಸಾಕಷ್ಟಿವೆ. ಆಸಕ್ತರು ಕೇಶವಶರ್ಮರ ‘ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆ’, ಮೋಹನ ಕುಂಟಾರರ ‘ಯಕ್ಷಗಾನ ಆಹಾರ್ಯ’ ಕೃತಿಗಳನ್ನು ಗಮನಿಸಬಹುದು. ಪ್ರಾಚೀನ ಕಾಲದ ತತ್ವಶಾಸ್ತ್ರೀಯ ನೆಲೆಗಟ್ಟುಗಳು ಮುಖವರ್ಣಿಕೆಗಳಲ್ಲಿ ಹೇಗೆ ಸಾಧಿತವಾಗುತ್ತದೆ ಎಂಬುದನ್ನು ಇವೆರಡು ಕೃತಿಗಳು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿವೆ. ಪ್ರಸ್ತುತ ಕೃತಿಯಲ್ಲಿ ಪ್ರಧಾನವಾಗಿ ನಾಲ್ಕು ಬಣ್ಣಗಳನ್ನು ಕುರಿತು ಮಾತ್ರ ವಿಶ್ಲೇಷಣೆ ಮಾಡಲಾಗುತ್ತದೆ. ‘ಗಿಡಮೂಲಿಕೆಗಳ ಅಥವಾ ಸಸ್ಯಗಳ ಅವಯವಗಳಿಂದ ಅಂದರೆ ಎಲೆ, ತೊಗಟೆ, ಬೇರು, ಹೂ, ಕಾಯಿ ಮುಂತಾದವುಗಳಿಂದಲೂ ಕೂಡ ಅನೇಕ ರೀತಿಯ ದ್ರವರೂಪದ ಬಣ್ಣಗಳನ್ನು ಪಡೆಯಬಹುದೆಂದು ನಮ್ಮ ಪ್ರಾಚೀನರು ಈ ಮೊದಲೇ ಕಂಡುಕೊಂಡಿದ್ದರು. ಉದಾಹರಣೆಗೆ- ವಿಶಿಷ್ಟ ಪ್ರಕಾರದ ತೊಗಟೆಯನ್ನು ಜಜ್ಜಿ ನೀರಿನಲ್ಲಿ ನೆನೆಹಾಕಿ ಸೋಸಿ ರಸ ತೆಗೆಯುವುದರಿಂದ ಕೆಂಪು ಬಣ್ಣದ ದ್ರವ ದೊರಕಿಸಿಕೊಳ್ಳುವುದು ಹಾಗೂ ಕೆಲವು ಸಸ್ಯದ ಬೇರುಗಳನ್ನು ಕುಟ್ಟಿ ರಸ ತೆಗೆಯುವುದರಿಂದಲೂ ಕೆಂಪು ಬಣ್ಣದ ಉತ್ಪತ್ತಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಮಾಡರ್ (Madder)  ಎಂಬ ಸಸ್ಯದ ಬೇರಿನಿಂದ ಕಡುಗೆಂಪು ಪಡೆಯಬಹುದಾಗಿತ್ತು.’4

ಮುಖವರ್ಣಿಕೆಗಳಲ್ಲಿ ಸಾಂಕೇತಿಕ ಮಹತ್ವವನ್ನು ಹೊಂದಿರುವ ಭೂತಾರಾಧನೆ, ಮಾರಮ್ಮನ ಆಚರಣೆ, ಕೋಲ ಇನ್ನಿತರೆ ಫಲವಂತಿಕೆಯ ಆಚರಣೆಗಳು ಕೆಂಪುಬಣ್ಣಕ್ಕೆ ವಿಶೇಷ ಮಾನ್ಯತೆ ನೀಡಿವೆ. ಲಜ್ಜಾಗೌರಿಯ ಚಿತ್ರವಂತಿಕೆ ಮತ್ತು ಆಚರಣಾ ಪ್ರಾಧಾನ್ಯತೆಯಲ್ಲಿ ಕೆಂಪು ಅಗ್ರಸ್ಥಾನದಲ್ಲಿದೆ. ‘ಕಥಕ್ಕಳಿಯಲ್ಲಿ ಕೆಂಪು ಗಡ್ಡವಿರುವ (ಚೋಕನ್ನ ದಾಡಿ) ಪಾತ್ರವೇ ಅತ್ಯಂತ ಭೀಕರ ಮಾತ್ರ. ಎತ್ತರದ ಕಿರೀಟ ಧರಿಸಿ, ಉರಿಗಣ್ಣುಗಳನ್ನು ಬಿಟ್ಟುಕೊಂಡು, ಶಕ್ತಿಯುತ ಮುದ್ರೆಗಳನ್ನು ಬಳಸುತ್ತಾ ನರ್ತಿಸುವ ಚೋಕನ್ನದಾಡಿ ಪಾತ್ರದ ಧ್ವನಿ ಮದ್ದಳೆಯ ನಾದಕ್ಕಿಂತಲೂ ಜೋರಾಗಿರುತ್ತದೆ. ಕ್ರೋಧದಿಂದ ತುಂಬಿದ ಮುಖವಾಡದಂತಹ ವರ್ಣಿಕೆಯಲ್ಲಿ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳಿದ್ದು, ಚೋಕನ್ನದಾಡಿಯ ಮುಖ ಕೋಪಾವಿಷ್ಟವಾಗಿ ಅದುರುತ್ತದೆ. ತೆರೆದ ಬಾಯಿನಿಂದ ಗುಡುಗು ಸಿಡಿಲಿನಂತೆ ಎರಗಿ, ಆರ್ಭಟಿಸುತ್ತಾ ಪರದೆಯನ್ನು ಭೇದಿಸಿ ಬರುವ ಈ ಭೀಕರ ಪಾತ್ರ ಕ್ರೋಧಾಗ್ನಿಯನ್ನು ಕಾರುತ್ತಾ ಅದೃಶ್ಯವಾಗುತ್ತದೆ. ಒಳಿತು ಕೆಡಕುಗಳ ಸಾಂಕೇತಿಕ ಪಾತ್ರಗಳ ಮೂಲಕ ದೈವಿಕ ಹಾಗೂ ಪಾಶವೀ ಶಕ್ತಿಗಳ ನಡುವಿನ ಸಂಘರ್ಷವನ್ನು ಕಥಕ್ಕಳಿ ಚಿತ್ರಿಸುತ್ತದೆ.’5 ‘ಸುಶ್ರುತ ಸಂಹಿತೆಯಲ್ಲಿ ಯಕ್ಷಗ್ರಹ ಪೀಡಿತರು ಶಕ್ತಿಶಾಲಿಗಳು, ಅವರ ಕಣ್ಣು ಕೆಂಪಾಗಿರುತ್ತದೆಂದು ಹೇಳಿದೆ. ಯಕ್ಷಗ್ರಹ ಪೀಡಿತರು ರಕ್ತವರ್ಣದ ಉಡುಪು ತೊಡ ಬಯಸುತ್ತಾರಂತೆ.’6 ‘ಭಾರತೀಯ ತತ್ವಶಾಸ್ತ್ರಜ್ಞರ ಪ್ರಕಾರ ಕೆಂಪು ರಜೋಗುಣಕ್ಕೆ ಮತ್ತು ರೌದ್ರಕ್ಕೆ ಸಂಕೇತ. ಮನಃಶಾಸ್ತ್ರಜ್ಞರ ಪ್ರಕಾರ ವಿರೋಧಿಸುವ ಮನೋಭಾವಕ್ಕೆ ಆತ್ಮರತಿಗೆ, ಸ್ವಾಭಿಮಾನಕ್ಕೆ ಸಂಕೇತವಾಗುತ್ತದೆ. ಇಂದ್ರಜಿತು, ರಕ್ತಬೀಜನಂತಹ ಪಾತ್ರಗಳು ರಂಗದಲ್ಲಿ ಆತ್ಮಾಭಿಮಾನ, ದುರಹಂಕಾರ, ವಿರೋಧಿಸುವ ಪಾತ್ರಗಳಾಗಿ ಮೆರೆಯುತ್ತವೆ.’7 ‘ಕೆಂಪು ಬಣ್ಣವನ್ನು ರೌದ್ರತೆ ಮತ್ತು ಉತ್ಸಾಹದ ಸಂಕೇತವಾಗಿ ಬಳಸುತ್ತಾರೆ. ಪ್ರಮುಖವಾಗಿ ದೇವಿ ಪಾತ್ರಕ್ಕೆ ಈ ಬಣ್ಣವನ್ನು ಉಪಯೋಗಿಸುತ್ತಾರೆ.’8

‘ಸುಮಾರು 30 ಸಾವಿರ ವರ್ಷಗಳ ಪೂರ್ವದಲ್ಲಿದ್ದ ಸ್ತನ ಮತ್ತು ತುಂಡು ಲಂಗಗಳನ್ನು ಪ್ರದರ್ಶಿಸುವ ಕಲ್ಲಿನ ಮೇಲೆ ಕೆತ್ತಿದ ರತಿಚಿತ್ರಬಿಲ್ಲೆಗಳು ಪತ್ತೆಯಾದವು. ಇಂಥದ್ದೆ ರತಿ ಚಿತ್ರ ಆಕೃತಿಗಳು ಫ್ರಾನ್ಸ್ ಮತ್ತು ಸೈಬೇರಿಯಾಗಳಲ್ಲೂ 25 ಸಾವಿರ ವರ್ಷಗಳ ಹಿಂದೆ ಕಾಣಿಸಿದವು. ಇದು ವಿವಾದಿತವೇನೂ ಅಲ್ಲ. ಬೃಹತ್ ಗಾತ್ರದ ಸ್ತನ ಮತ್ತು ಕಿಬ್ಬೊಟ್ಟೆಗಳು ದುಂಡಾಕೃತಿಗಳು ಪ್ರಾಯಶಃ ಗರ್ಭವತಿಗಳಾಗಿದ್ದಿರಬಹುದು. ಉಬ್ಬಿದ ಯೋನಿಗಳ ಕೆಲವು ಆಕೃತಿಗಳು ಹೆರಿಗೆಯ ಕ್ಷಣಗಳನ್ನು ಸೂಚಿಸುತ್ತಿದ್ದವೆಂದು ಕಾಣುತ್ತದೆ. ಈ ಆಕೃತಿಗಳಿಗೆ ದಟ್ಟ ಕೆಂಪುಬಣ್ಣವನ್ನು ಬಳಿದಿರುವುದು ಋತಿಮತಿಯಾಗಿರುವುದನ್ನು ಸಂಕೇತಿಸಲು ಆಗಿರಬಹುದು’9. ಕೆಂಪು ಮುಖ್ಯವಾಗಿ ರಾಗದ್ವೇಷಗಳ ಸಂಕೇತಿಕವಾಗಿರುವುದು. ಹೃದಯ ಉದ್ರೇಕಿಸುವ ಪ್ರಸಂಗಗಳಲ್ಲೂ ಈ ಕೆಂಪು ಬಣ್ಣದ ಪಾತ್ರ ಪ್ರಮುಖವಾದದ್ದಾಗಿದೆ. ಇದು ಪ್ರೀತಿ ಅನುರಾಗಗಳ ಸಂಕೇತವೂ ಆಗಿರುತ್ತದೆ. ಕ್ರಿಯಾಶಕ್ತಿ ಹಾಗೂ ಲೈಂಗಿಕ ಭಾವನೆಯನ್ನು ಪ್ರಚೋದಿಸುವಂಥಾದ್ದೂ ಆಗಿದೆ. ಅಪಾಯಕಾರಿ ಸಂಕೇತವೂ ಹೌದು.’10 ವೈದ್ಯಕೀಯಶಾಸ್ತ್ರದಲ್ಲಿ ಗರ್ಭಿಣಿಯರಿಗೆ ವಿಶೇಷವಾಗಿ ಸೂಚಿಸಲಾಗುವ ದಾಳಿಂಬೆಯೂ ಕೆಂಪುಬಣ್ಣವಾಗಿದೆ. ರಕ್ತವೃದ್ಧಿಯ ಪ್ರಧಾನ ಆಹಾರವಾಗಿ ದಾಳಿಂಬೆ ಮತ್ತು ಸೇಬುಗಳು ಅಗ್ರಸ್ಥಾನದಲ್ಲಿವೆ. ‘ಥಾಮ್ಸನ್ನನ ಪ್ರಕಾರ ದಾಳಿಂಬೆ ಉಜ್ವಲ ಕೆಂಪುಬಣ್ಣದ ಹಣ್ಣು; ಈ ಹಣ್ಣು ರಕ್ತದ ಸಂಕೇತ. ಇದನ್ನು ಮುಟ್ಟು ಹಾಗೂ ಗರ್ಭಧಾರಣೆಯ ಉದ್ದೇಶಗಳಿಗೆ ಔಷಧಿಯನ್ನಾಗಿ ಬಳಸುತ್ತಿದ್ದರು. ಸಂತಾನಾಭಿವೃದ್ಧಿಯ ಶಕ್ತಿಯ ಸಂಕೇತವಾಗಿ ಸಹ ಬಳಸುತ್ತಿದ್ದರು. ದಾಳಿಂಬೆ ಮನುಷ್ಯನನ್ನು ಲೈಂಗಿಕವಾಗಿ ಪ್ರಚೋದಿಸುತ್ತದೆ ಎಂದು ನಂಬಿದ್ದರು. ಒಟ್ಟಿನಲ್ಲಿ ಈ ಕೆಂಪು ಮೂಲಭೂತವಾಗಿ ಫಲಶಕ್ತಿಯ ರಕ್ತದ ಕೆಂಪನ್ನು ರಜಸ್ಸಿನ ಕೆಂಪನ್ನು ಮತ್ತು ಪ್ರಸವದ ರಜೋಸ್ರಾವದ ಕೆಂಪನ್ನು ಸೂಚಿಸುತ್ತದೆ’11.

‘ಹಳದಿ ಜ್ಞಾನದ ಸಂಕೇತವಾಗಿದೆ. ಹಟವಾದಿತನದ ಗುಣವನ್ನು ಬಿಂಬಿಸುತ್ತದೆ. ಹೊನ್ನಿನ ಬಣ್ಣವನ್ನು ಸಾಂಕೇತಿಸುತ್ತದೆ. ಈ ಬಣ್ಣವು ಶಕ್ತಿದಾಯಕವಾಗಿದ್ದು ಮಾನವನ ಖಿನ್ನತೆ ಮತ್ತು ಒಂಟಿತನವನ್ನು ದೂರ ಮಾಡುವ ಸ್ವಭಾವವನ್ನು ಹೊಂದಿದೆ ಎನ್ನಲಾಗಿದೆ. ಹಸಿರು ಕಾಮನ ಬಿಲ್ಲಿನ ಸಪ್ತವರ್ಣಗಳಲ್ಲಿ ಮಧ್ಯಸ್ಥಾನವನ್ನು ಪಡೆದಿದೆ. ಇದು ಸಮಶೀತೋಷ್ಣಗಳ ಪ್ರತೀಕ ಹಾಗೂ ಶಾಂತಿದ್ಯೋತಕ. ಮನಸ್ಸಿಗೆ ಪ್ರಸನ್ನತೆಯನ್ನುಂಟು ಮಾಡುವ ಶಕ್ತಿ ಈ ಬಣ್ಣಕ್ಕಿದೆ. ಮನಸ್ಸಿಗೆ ಬೇಸರ ಉಂಟಾದಾಗ ಹಸಿರು ಉದ್ಯಾನ ಅಥವಾ ಕಾಡಿನಲ್ಲಿ ತಿರುಗಾಡಿ ಬಂದರೆ ಬೇಸರ ಹೋಗಿ ಆಹ್ಲಾದಕರೆವೆನಿಸುತ್ತದೆ. ಹಸಿರು ಕೆಟ್ಟ ಪರಿಣಾಮಗಳಿಗೂ ಸಾಂಕೇತಿಕವಾಗಿದೆ. ಇದು ಹೊಟ್ಟೆಕಿಚ್ಚಿನ ಸೂಚಕವೂ ಹೌದು. ಇದು ಪ್ರಗತಿಯ ಕುಂಠಿತದ ಸಂಕೇತವು ಆಗಿಯೂ ಭಾಗಿಯಾಗುತ್ತದೆ. ಸಮೃದ್ಧಿಯ ಸಂಕೇತವೂ ಹೌದು. ನೀಲಿ  ಇದು ಸತ್ಯ ಮತ್ತು ಪ್ರೇಮ ಗುಣಗಳ ಸಂಕೇತ. ಇದು ಆತ್ಮಕಾರಕ ಹಾಗೂ ಮನಸ್ಸಿನ ದೌರ್ಬಲ್ಯಗಳನ್ನು ದೂರೀಕರಿಸಿ ಮನಸ್ಸಿಗೆ ನೆಮ್ಮದಿ, ಶಾಂತಿ ಮತ್ತು ಸಮಾಧಾನ ನೀಡಬಲ್ಲದು. ಇದು ಕಣ್ಣಿಗೆ ತಂಪನ್ನೆರಚಬಹುದು. ಈ ಬಣ್ಣದ ಪ್ರಿಯರು ಒಂಟಿತನ ಬಯಸುತ್ತಾರೆ ಪ್ರೇಮಿಯನ್ನು ಬಯಸುತ್ತಾರೆ. ಶಾಂತಿಯನ್ನು ಬಯಸುತ್ತಾರೆ ಎನ್ನಲಾಗಿದೆ.’12

‘ಚೈನಾದಲ್ಲಿ ಹಳದಿ ಪವಿತ್ರವೆಂದು ನಂಬಿಕೆ ಇದೆ. ಈ ನಿಟ್ಟಿನಲ್ಲಿ ನೀಲಿಯು ಸತ್ಯದ ಸಂಕೇತವಾದರೆ, ಹಸಿರು ಕ್ರಿಶ್ಚಿಯನರ ಚಿತ್ರಕಲೆಯಲ್ಲಿ ಉತ್ತಮ ಮೌಲ್ಯವುಳ್ಳದಾಗಿದೆ. ಭಾರತದಲ್ಲಿ ಕೆಂಪು ಮಾತೃದೇವತೆಯ ಮತ್ತು ಶುಭದ ಸಂಕೇತ. ಸ್ತ್ರೀಯರು ವಿಧವೆಯರಾದಾಗ ಬಿಳಿ ಬಟ್ಟೆಯುಡಬೇಕೆಂದು ಹೇಳುವುದು ಗಮನಾರ್ಹ ವಿಚಾರ. ಭಾರತೀಯ ವಿಧವೆಯವರು ಹಣೆಗೆ ಬೊಟ್ಟಿಲ್ಲದೆ, ಕೆಂಪು ಸೀರೆಯನ್ನು ಉಡಬೇಕೆಂದು ಬಂದುದು ಇತ್ತೀಚೆಗೆ ಇರಬಹುದು. ರೋಮನ್ನಲ್ಲಿ ಕೆಂಪು ಶುಭಕ್ಕೆ, ದೈವಿಕತೆಗೆ ಸಂಕೇತ. ಈಜಿಪ್ಟಿನ ಒಡಿಸಿಸ್ ದೇವತೆಗೆ ಹಸುರು ಎಂಬ ನಂಬಿಕೆ ಇದೆ.’13 ಕೆಂಪು, ನೀಲಿ, ಕಪ್ಪು, ಬಿಳಿ ಬಣ್ಣಗಳಿಗೂ ತತ್ವಶಾಸ್ತ್ರೀಯ ಪಂಥಗಳಿಗೂ ನೇರವಾದ ಸಂಬಂಧವಿದೆಯಾದ ಕಾರಣ ನಾಲ್ಕು ಬಣ್ಣಗಳನ್ನು ಗಮನಿಸಲಾಗುತ್ತದೆ. ಸಂಶೋಧಕರು ಗುರುತಿಸುವಂತೆ; ದ್ರಾವಿಡ ಬಣ್ಣಗಳು ಮೂರು ಮಾತ್ರ. ಹಳದಿ, ಕೆಂಪು, ಕಪ್ಪು. ಇಂದಿಗೂ ದ್ರಾವಿಡ ಜನಾಂಗಗಳು ಭೂತಾರಾಧನೆ, ಮಾರಮ್ಮನ ಜಾತ್ರೆ, ಪುರುವಂತಿಕೆ ಮುಂತಾದ ಆಚರಣೆಗಳಲ್ಲಿ ಈ ಬಣ್ಣಗಳೇ ಪ್ರಧಾನವಾಗಿ ಬಳಸಲ್ಪಡುತ್ತವೆ. ಮಹೆಂಜೋದಾರೋವಿನಲ್ಲಿ ದೊರಕಿದ ಮಡಕೆಗಳಲ್ಲಿ ಕೆಂಪುಬಣ್ಣವೆ ಹೆಚ್ಚು ಕಂಡುಬರುತ್ತದೆಯೆಂದು ಸಂಶೋಧನೆಗಳು ವರದಿ ಮಾಡುತ್ತವೆ. ‘ದಿ ಯಂಗ್ ಹೆರ್ಮ ಹೋಟ್ಲೆ (The young Herma Hotze)  ಅಥವಾ ಟ್ರೈಕ್ರೋಮೇಟಿಕ್ಸ್ (Trichromatics) ಸಿದ್ಧಾಂತವು ಎಲ್ಲಾ ಬಣ್ಣಗಳ ಮೂಲ ಬಣ್ಣವು ಮೂರೇ ಬಣ್ಣದಲ್ಲಿ ಅಡಕವಾಗಿದೆ ಎಂದು ತಿಳಿಸುತ್ತದೆ. ಕೆಂಪು, ಹಸಿರು ಮತ್ತು ನೀಲಿ ಎಂಬುವು ಮೂಲ ಬಣ್ಣಗಳು ಎಂಬುದು ಈ ಸಿದ್ಧಾಂತದ ಅಭಿಪ್ರಾಯ.’14 ಈ ಬಣ್ಣಗಳು ಆಧುನಿಕ ಚಿಂತಕರನ್ನು ಅದೆಷ್ಟು ಸೂಕ್ಷ್ಮವಾಗಿ ಪ್ರಭಾವಿಸಿವೆಯೆಂದರೆ ಕಾರ್ಲ್ ಮಾರ್ಕ್ಸ್ ಕೆಂಪುಬಣ್ಣವನ್ನು, ಅಂಬೇಡ್ಕರರು ನೀಲಿಯನ್ನೂ, ಮುಸ್ಲಿಮರು ಹಸಿರನ್ನೂ ತಮ್ಮ ಪಕ್ಷಗಳ ಬಣ್ಣವನ್ನಾಗಿಸಿಕೊಂಡರು. ಹೀಗಾಗಿ ತಾತ್ವಿಕವಾಗಿ ಮತ್ತು ಪಕ್ಷೀಯವಾಗಿ ಬಣ್ಣಗಳು ಪಕ್ಷಗಳ ಮ್ಯಾನಿಪ್ಯಾಸ್ಟೋವನ್ನು ಸೂಚಿಸುತ್ತಿರುತ್ತವೆ. ಕೋಮುವಾದವನ್ನು ಮುನ್ನೆಲೆಗೆ ತಂದ ಪಕ್ಷದ ಕೇಸರಿ ಬಣ್ಣದ ಪ್ರಸ್ತಾಪವೇ ಅಲ್ಲ. ಕೇಸರಿಯು ಹೆಣ್ಣು ಸಿಂಹಕ್ಕೆ ಬಳಸುವ ಪದವಾಗಿದೆ. ಹಾಗಾಗಿಯೆ ಬಿಜೆಪಿಯು ಸಿಂಹವನ್ನು ರಾಷ್ಟ್ರೀಯ ಪ್ರಾಣಿಯೆಂಬಂತೆ ಬಿಂಬಿಸಲು ಯತ್ನಿಸುತ್ತದೆ. ಸಿಂಹದ ಲಾಂಛನವೂ ಅದಕ್ಕೀಗ ಬಹುಮೆಚ್ಚು.

ನಿಸರ್ಗದತ್ತ ಮಾನವನ ಆಲೋಚನೆಯ ಕ್ರಿಯೆಗಳು ಮಾನವನ ಸೃಜನತೆಯ ಆಕರ. ಬಣ್ಣಗಾರಿಕೆ ಕೇವಲ ಸೌಂದರ್ಯಪ್ರಜ್ಞೆಯ ಅರಿವಿನ ಅಸ್ಮಿತೆಯಲ್ಲ. ಸಾಂಸ್ಕೃತಿಕ ಜತನ ಸಾಂಕೇತಿಕತೆಯೊಳಗೆ ಅನನ್ಯತೆಯಿಂದ ಕೂಡಿದ್ದಾಗಿದೆ. ಬಣ್ಣಗಳ ಗುಣಗಳನ್ನು ಕುರಿತಾಗಿ ಈ ನಿಟ್ಟಿನ ಆಯಾಮ ಪ್ರಮುಖವಾದುದಾಗಿದೆ. ಪ್ರಾಚೀನ ಮಾನವ ನಿಸರ್ಗದಲ್ಲಿ ಅವಲೋಕನ ಕ್ರಮದ ಮೂಲಕ ತನ್ನ ಅರಿವನ್ನು ತೀಕ್ಷ್ಣಗೊಳಿಸುವಲ್ಲಿ ಬಣ್ಣದ ಪಾತ್ರವೂ ಹಿರಿದಾದುದು. ಆಕಾಶದ ನೀಲಿ, ರಕ್ತದ ಕೆಂಪು, ಕತ್ತಲಿನ ಕಪ್ಪು, ಗಿಡಮರಗಳ ಹಸಿರು ಮನುಷ್ಯ ಕಂಡುಕೊಂಡ ಪ್ರಾಚೀನ ಬಣ್ಣಗಳಾಗಿರಬೇಕು. ರಕ್ತದ ಕೆಂಪಿಗೂ ಜೀವಕ್ಕೂ ವೈಜ್ಞಾನಿಕ ಜೀವಂತ ಕಾರಣಗಳಿಂದಾಗಿ ಜೀವವಿಕಾಸದ ಚರಿತ್ರೆಯಲ್ಲಿ ಕೆಂಪುಬಣ್ಣಕ್ಕೆ ಇನ್ನಿಲ್ಲದಂತೆ ಪ್ರಾಮುಖ್ಯತೆ ನೀಡಲಾಗಿದೆ. ಫಲವಂತಿಕೆ ಮತ್ತು ಅಸ್ತಿತ್ವದ ಹೋರಾಟಗಳಲ್ಲಿ ರಕ್ತದ ಕೆಂಪು ಮಹತ್ವದ ಸ್ಥಾನ ವಹಿಸುವುದು ಇದಕ್ಕೆ ಕಾರಣವಿರಬೇಕು. ಕೆಂಪು ಕೇವಲ ಕಾಲ್ಪನಿಕ ಅರ್ಥಗಳನ್ನು ಹೊಂದಿರದೆ ರಕ್ತವರ್ಣ ಎಂಬ ಅಭಿದಾನಕ್ಕೂ ಪಾತ್ರವಾಗಿದೆ.

ಬಯಲಾಟ ಮತ್ತು ಬಯಲಾಟದ ಆಯ್ಕೆಯ ಕಥನಗಳ ವಸ್ತುಗಳು ದ್ರಾವಿಡೇತರ ಆಲೋಚನೆಗಳೊಂದಿಗೆ ನಡೆಸಿಕೊಂಡು ಬಂದ ನಿರಂತರ ಸಂಘರ್ಷವನ್ನು ಅಧ್ಯಯನಗಳು ಕಡೆಗಣಿಸಿವೆಯಾದ ಕಾರಣ ಈ ವಿಷಯ ಕುರಿತ ಗಂಭೀರ ಚಿಂತನೆಯ ಅವಶ್ಯಕತೆಯಿದೆ. ಹತ್ತು ವರುಷದ ಹಿಂದಿನ ಬಯಲಾಟದ ಸ್ವರೂಪ ಮತ್ತು ನಂತರದ ಆಚರಣಾ ವಿಧಾನಕ್ಕೂ ಹಾಗೂ ಪ್ರೇಕ್ಷಕವರ್ಗದ ಪ್ರತಿಕ್ರಿಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಬಯಲಾಟದಿಂದ ಕವಲೊಡೆದು ದ್ರಾವಿಡೇತರರ ಆರೈಕೆಯಲ್ಲಿ ಬೆಳೆದು ಅಂತರಾಷ್ಟ್ರೀಯ ಖ್ಯಾತಿ ಪಡೆದ ಯಕ್ಷಗಾನದಿಂದ ಬಯಲಾಟ ಕೆಲವು ವಿಷಯಗಳಿಂದ ಪ್ರಭಾವಿತವಾಗಿದೆ. ಇತ್ತೀಚಿಗೆ ಬಯಲಾಟವನ್ನೂ ಅನೇಕರು ಯಕ್ಷಗಾನ, ಭಾಗವತರಾಟವೆಂದು ಕರೆಯುತ್ತಿದ್ದಾರೆ. ಬಯಲಾಟ, ಯಕ್ಷಗಾನ, ಭಾಗವತರಾಟಗಳ ಮಧ್ಯೆ ಸಾಮ್ಯತೆಗಿಂತ ಭಿನ್ನತೆಗಳು ಹೆಚ್ಚಾಗಿವೆ. ಶೈವಸಂಪ್ರದಾಯದ ಅಡ್ಡನಾಮದೊಂದಿಗೆ ವೈಷ್ಣವ ಸಂಪ್ರದಾಯದ ಉದ್ದನಾಮಗಳು ಇಂದು ಬಯಲಾಟದಲ್ಲಿ ಕಂಡುಬರುತ್ತಿವೆ. ಇವೆರಡರ ಸಮನ್ವಯತೆಗಾಗಿ ನಡೆದ ಸಂಘರ್ಷ ಚಾರಿತ್ರಿಕವಾದುದಾದರೂ ಅನಕ್ಷರಸ್ಥ ಕಲಾವಿದರಿಗೆ ಇದರ ಜ್ಞಾನವಿಲ್ಲದೆ ಭಾಗವತ ಸಂಪ್ರದಾಯವನ್ನು ಅನುಸರಿಸುತ್ತಾರೆ. ಬಯಲಾಟದ ಪಾತ್ರಗಳಿಗೆ ಬಣ್ಣ ಬಳಿಯುವನಿಗೆ ಕೇಳಿದೆ, ಮುಖವರ್ಣಿಕೆಯಲ್ಲಿ ಈ ಅಡ್ಡನಾಮ ಮತ್ತು ಉದ್ದನಾಮ ಯಾಕೆ ಬಳಸುವೆ ಎಂದು. ‘ಮೊದಲೆಲ್ಲ ಅಡ್ಡನಾಮ ಇಡುತ್ತಿದ್ದೆವು. ಉಡುಪಿಯ ಕಡೆಗೆ ಹೋಗಿ ಯಕ್ಷಗಾನ ನೋಡಿದೆವು. ಸೊಗಸಾಗಿತ್ತು. ಅಡ್ಡನಾಮ ಮತ್ತು ಉದ್ದನಾಮಗಳು ತುಂಬಾ ಸುಂದರವಾಗಿ ಕಂಡ ಕಾರಣಕ್ಕೆ ಬಯಲಾಟದಲ್ಲಿ ಬಣ್ಣ ಹಾಕುವಾಗ ಎರಡೂ ನಾಮ ಇಡುತ್ತಿದ್ದೇವೆ.’ ಈ ಮಾತು ಯಾಕೆ ಮುಖ್ಯ ಎಂಬುದನ್ನು ಗಮನವಿಟ್ಟು ಯೋಚಿಸಬೇಕಾಗಿದೆ.

ನಾಟ್ಯದ ಬಣ್ಣಗಳ ವಿಷಯಕ್ಕೆ ಬಂದಾಗ ಆ ಪಾತ್ರಗಳ ವರ್ಗವಿಭಜನೆ ಮಾಡಿ ಶ್ರೇಣಿಗನುಗುಣವಾದ ಉಡುಗೆ ತೊಡುಗೆ ಬಣ್ಣಗಾರಿಕೆಯನ್ನು ಶಾಸನ ಮಾಡಿದ್ದು ನಾಟ್ಯಶಾಸ್ತ್ರವೆ. ನಾಟಕದ ಹುಟ್ಟಿಗೆ ಸಂಬಂಧಿಸಿದಂತೆ ಭರತ ನೀಡುವ ಮಿಥ್ ಕೂಡ ಜಾತಿಯಾಧಾರಿತ ವರ್ಗವಿಭಜನೆಯನ್ನು ನೆಲೆಗೊಳಿಸುತ್ತದೆ. ಕಲೆಯು ಪ್ರತಿಭೆಗೆ ಸಂಬಂಧಿಸಿದ್ದು ಎನ್ನುವ ಮಾತುಗಳು ಪ್ರತಿಭೆಯ ಧರ್ಮ ಮತ್ತು ವರ್ಗಶ್ರೇಣಿಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿಯೇ ಬಂದವುಗಳಾಗಿವೆ. ಬಯಲಾಟ, ಯಕ್ಷಗಾನ ಭಾಗವತರಾಟಗಳ ತಾತ್ವಿಕ ಸ್ವರೂಪವನ್ನು ಗಮನಿಸಿದಷ್ಟೂ ಈ ಮಾತುಗಳ ವಾಸ್ತವ ತಿಳಿಯುತ್ತದೆ.  ‘ಯಕ್ಷಗಾನದ ಆಹಾರ್ಯವನ್ನು ಗಮನಿಸಿದರೆ ಅದು ಶ್ರೇಣೀಕರಣ ವ್ಯವಸ್ಥೆಯ ಪ್ರತಿಬಿಂಬವಾಗಿಯೇ ಇದೆ ಎಂಬುದು ವೇದ್ಯವಾಗುತ್ತದೆ. ನಾಟ್ಯಶಾಸ್ತ್ರದಲ್ಲೂ ಇದೇ ಬಗೆಯ ಉಲ್ಲೇಖಗಳನ್ನು ಕಾಣುತ್ತೇವೆ. ಶ್ರೀಮಂತರು ಸಮಾಜದ ಮೇಲ್ವರ್ಗದವರು ಸಮಾಜದ ಗೌರವವನ್ನು ಪಡೆಯುವ ಪಾತ್ರಗಳಿಗೆ  ಉನ್ನತ ಸ್ಥಿರದ ವೇಷವಿಧಾನಗಳಿವೆ. ಕೆಳಸ್ತರದ ಪಾತ್ರಗಳು ಸೇವಕ ಧೂತ ಮೊದಲಾದ ಪಾತ್ರಗಳು ವೇಷವಿಧಾನದಲ್ಲಿ ಇತರ ವೇಷಗಳ ಜೊತೆ ಹೊಂದಾಣಿಕೆಯ ರೂಪದಲ್ಲಿ ಇರುವುದಿಲ್ಲ.’15

ಬಯಲಾಟದ ತಾತ್ವಿಕತೆಯು ನೆಲಮೂಲ ಲೋಕವಾದಿ ತತ್ವಶಾಸ್ತ್ರೀಯ ಆಚರಣಾತ್ಮಕ ಪ್ರಕ್ರಿಯೆಯಾಗಿದೆ. ಬಯಲಾಟಕ್ಕೆ ವಿಶ್ವಾತ್ಮಕ ಲೋಕದೃಷ್ಠಿಯಿದೆಯಾದ ಕಾರಣ ಪ್ರಾದೇಶಿಕ ಭಿನ್ನತೆಯಾಚೆಯೂ ಪ್ರಾದಿಮ ಐತಿಹಾಸಿಕ ಸಂಕೇತಿಕಾರ್ಥಗಳು ಅದರೊಳಗಿವೆ. ಭಾರತೀಯತ್ವವನ್ನಾಗಲೀ ಕರ್ನಾಟಕತ್ವವನ್ನಾಗಲೀ ಕನ್ನಡಿಗರ ಕಲೆಯೆಂದಾಗಲೀ ಕರೆದಲ್ಲಿ ಅದರ ವಿಸ್ತಾರ ಆರ್ಥಗಳು ಸಂಕುಚಿತಗೊಳ್ಳುತ್ತವೆ. ಬಯಲಾಟದ ಸಂವಿಧಾನವನ್ನು ಒಟ್ಟಾರೆಯಾಗಿ ಗ್ರಹಿಸುವಾಗ ಉಡುಗೆಗಳ ಸಾಂಕೇತಿಕ ವೈಭವಗಳು ದ್ರಾವಿಡ ಒಡೆತನದ ಅನಾದಿ ಕಾಲವನ್ನು ಸೂಚಿಸುತ್ತವೆ. ನಿಸರ್ಗದಿಂದ ಒಂದಂಶವೂ ಪ್ರತ್ಯೇಕವಾಗದ ವೇಷಭೂಷಣ ಬಣ್ಣಗಾರಿಕೆಯು ಕಥಾವಸ್ತುವಿನ ವಿಷಯದಲ್ಲಿ ವಾಸ್ತವದ ವ್ಯಕ್ತಮೂಲವನ್ನು ಸೂಚಿಸಬಹುದಾಗಿದೆ. ಅನಸೂಯ, ಸತಿಸಾವಿತ್ರಿಯರಂಥ ಪತಿನಿಷ್ಟತೆ ಪಾತಿವ್ರತ್ಯವನ್ನು ಸಾರುವ ಪ್ರಸಂಗಗಳು ಬಯಲಾಟದಲ್ಲಿರದೆ ಪಾತಿವ್ರತ್ಯ ಹರಣಗಳು ಮತ್ತು ಪರಿಣಯಗಳು ಬಯಲಾಟದ ವಸ್ತುಗಳಾಗಿರುವುದು ದ್ರಾವಿಡೇತರ ಲೋಕದೃಷ್ಟಿಗೆ ದ್ರಾವಿಡ ಲೋಕದೃಷ್ಟಿಯು ತೋರಿದ ಸಂಘರ್ಷದಂತೆಯೆ ಗಮನಿಸಲು ಸಾಧ್ಯವಿದೆ.

ಮುಂದಿನ ಸಂಚಿಕೆಯಲ್ಲಿ ರಾಮಾಯಣ ಮತ್ತು ಮಹಾಭಾರತದಲ್ಲಿ ನಿರೂಪಿತವಾಗಿರುವ  ಕೌರವ – ಪಾಂಡವರು, ರಾಮ – ಲಕ್ಷ್ಮಣರು ಮತ್ತು ಕೃಷ್ಣ – ಬಲರಾಮರು ಯಾಕೆ ಮತ್ತು ಹೇಗೆ ಅಣ್ಣತಮ್ಮಂದಿರಲ್ಲವೆಂದು ಸಾಕ್ಷ್ಯ ಸಮೇತ ನೋಡೋಣ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]