Sunday, May 31 , 2020
ಪರಂಪರೆಯಲ್ಲಿರುವುದು ಅಸಮಾನತೆಯ ಹೂರಣ!

ರವಿ ಕಾಣದನ್ನ ಕವಿ ಕಂಡ ಎಂಬ ಮಾತಿದೆ, ಸಮಾಜದ ಆಗುಹೋಗುಗಳನ್ನ ಗಮನಿಸಿ ಸಮಾಜದ ಒಳಿತಿಗೆ ಅಗತ್ಯವಾದುದನ್ನ ತಿಳಿಸಿಕೊಡುವ ಕೆಲಸವನ್ನು ಕವಿಗಳು, ವಿದ್ವಾಂಸರು, ಚಿಂತಕರು ಮಾಡುವುದರಿಂದಲೇ ಅವರಿಗೆ ಸಮಾಜದಲ್ಲಿ ಅತ್ಯುತ್ತಮವಾದ ಸ್ಥಾನಮಾನವಿದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಪ್ರಜೆಗಳೆ ಪ್ರಭುಗಳು; ನಮ್ಮದು ಜಗತ್ತಿನಲ್ಲೇ ಅತೀ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ. ಈ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವವನ್ನು ಒದಗಿಸಿದೆ. ಆದರೆ, ಇಂದು ಸಮಾಜವು ಜಾತಿ, ಧರ್ಮಗಳ ಆಧಾರದ ಮೇಲೆ ಹೊಡೆದು ಆಳಾಗುತ್ತಿದೆ. ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವುದು, ಮಾರಣಾಂತಿಕವಾಗಿ ಹಲ್ಲೆ ಮಾಡುವುದು, ಹೀನ ಕೃತ್ಯವೆಸಗುವುದನ್ನು ಕಾಣಬಹುದು. ಸಂವಿಧಾನ ಜಾರಿಗೆ ಬಂದು 70 ವರ್ಷಗಳು ಕಳೆದರೂ ನಮ್ಮ ದೇಶದಲ್ಲಿ ಅನೇಕ ಸಾಮಾಜಿಕ ಪಿಡುಗುಗಳಿಂದ, ಮೌಢ್ಯಗಳಿಂದ, ಸಾಮಾಜಿಕ ಧೋರಣೆಗಳಿಂದ ನಲುಗುತ್ತಿದೆ. ಇದಕ್ಕೆಲ್ಲಾ, ಸಂವಿಧಾನವು ಸಮರ್ಪಕವಾಗಿ ಜಾರಿಯಾಗದಿರುವುದೇ ಮೂಲ ಕಾರಣ. ಇತ್ತಿಚೆಗಷ್ಟೇ ಕವಿಯಾದ ಎಸ್.ಎಲ್.ಭೈರಪ್ಪರವರು ನಮ್ಮ ಸಂವಿಧಾನದಲ್ಲಿ ಪರಂಪರೆಯಿಲ್ಲ; ನಮ್ಮ ಪರಂಪರೆಯೇ ನಮ್ಮ ಸಂವಿಧಾನವೆಂದು ಸಂವಿಧಾನವನ್ನು ಅವಹೇಳನ ಮಾಡಿದ್ದಾರೆ. ಹಾಗಾದರೆ, ಇವರ ಪರಂಪರೆ ಯಾವುದು?; ಅದು ಏನನ್ನು ಹೇಳುತ್ತದೆ? ಎಂಬುದನ್ನು ತಿಳಿಯಬೇಕಲ್ಲವೇ?. ಅವರ ಪ್ರಕಾರ, ಪರಂಪರೆಯೆಂದರೆ ಮನುಸ್ಮೃತಿಯ ಪರಂಪರೆಯೇ?. ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಹೀನವಾಗಿ ನಡೆಸಿಕೊಳ್ಳುವುದು ಪರಂಪರೆಯೇ?; ಚಾತುವರ್ಣದ ಆಧಾರದ ಮೇಲೆ ಮೇಲು-ಕೀಳು ಭಾವನೆಗಳನ್ನು ಆಚರಿಸುವುದು ಪರಂಪರೆಯೇ?; ಗಂಡನ ಮರಣದಿಂದ ಬಸವಳಿದ ಹೆಣ್ಣಿಗೆ ಬದುಕುವ ಹಕ್ಕನ್ನು ಕಸಿದುಕೊಂಡು ಸಹಗಮನಕ್ಕೆ ದಾರಿ ತೋರುವುದು ಪರಂಪರೆಯೇ?.

ಸಂವಿಧಾನದ ಕತೃವಾದ ಅಂಬೇಡ್ಕರರು 1950 ಜನವರಿ 26 ರಂದು ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿ ನೆರೆದಿದ್ದ ಪರ್ತಕರ್ತರಿಗೆ ನನ್ನ ಸಂವಿಧಾನ ಉತ್ತಮವಾಗಿದೆ, ಅದು ಎತಾವತ್ತಾಗಿ ಜಾರಿಯಾದರೆ ಈ ದೇಶ 20 ವರ್ಷಗಳಲ್ಲಿ ಪ್ರಬುದ್ಧವಾಗಿ ಬೆಳೆಯುತ್ತದೆ. ಆದರೆ, ನನ್ನ ಸಂವಿಧಾನವು ಜಾರಿಯಾಗುತ್ತದೆ ಎಂಬ ನಂಬಿಕೆಯಿಲ್ಲ. ಏಕೆಂದರೆ, ನನ್ನ ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ನನ್ನ ವಿರೋಧಿಗಳು ಕುಳಿತ್ತಿದ್ದಾರೆ ಎನ್ನುತ್ತಾರೆ.  ಆದ್ದರಿಂದ, ನಾವು ಅರಿತುಕೊಳ್ಳಬೇಕಾದ್ದದ್ದೇನೆಂದರೆ ಸಂವಿಧಾನವನ್ನು ಜಾರಿಗೊಳಿಸುವಲ್ಲಿ ನಾವು ವಿಫಲವಾಗಿದ್ದೇವೆ ಎನ್ನುವುದಾಗಿದೆ. ಅಲ್ಲದೇ, ಸಮಾನತೆಯನ್ನು ಸಾರುವ ಸಂವಿಧಾನವು ದೇಶದ ಮನುವಾದಿ ಧೋರಣೆಗಳಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಕಾಲದಿಂದ ಕಾಲಕ್ಕೆ ಸಂವಿಧಾನವನ್ನು ವಿರೋಧಿಸುವ, ನಾಶಮಾಡುವ, ತಿರಸ್ಕರಿಸುವ ಸಂವಿಧಾನ ವಿರೋಧಿ ಗುಂಪುಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಮತ್ತೋರ್ವ ಕವಿಗಳಾದ ಅಡಿಗರು ಅದನ್ನು ಅವಹೇಳನ ಮಾಡಿದ್ದರು ಎಂಬುದನ್ನು ತೇಜಸ್ವಿ ತಮ್ಮ ಕೃತಿಯಲ್ಲಿ ನಮೂದಿಸಿದ್ದಾರೆ. ಹೀಗೆ ಕಾಲದಿಂದ ಕಾಲಕ್ಕೆ ದೇಶದ ಮೂಲಭೂತವಾದಿಗಳು ಅಂಬೇಡ್ಕರ್‍ ರ ಸಮಾನತೆಯ ಸಂದೇಶವನ್ನು; ಕುವೆಂಪುರವರ ವಿಶ್ವಮಾನವ ಕಲ್ಪನೆಯನ್ನು ತಿರಸ್ಕಾರದಿಂದ ಕಂಡಿರುವುದನ್ನು ಕಾಣಬಹುದಾಗಿದೆ.

ಖ್ಯಾತ ಕವಿಗಳು ಹೇಳುವ ಪರಂಪರೆಯ ಬಿಂಬವಾದ ಮನುಸ್ಮೃತಿಯಲ್ಲಿ ನಮೂದಿಸಿರುವ ಕೆಲವು ಶ್ಲೋಕಗಳನ್ನು ಈ ಲೇಖನದ ಚರ್ಚಾ ವಿಷಯವನ್ನಾಗಿ ತೆಗೆದುಕೊಳ್ಳಲಾಗಿದೆ. ಮೊದಲಿಗೆ ಹೆಣ್ಣಿನ ಬಗ್ಗೆ ಮನು ಧರ್ಮಶಾಸ್ತ್ರದ ಅಧ್ಯಾಯ 9(03) ಹೀಗೆ ಹೇಳುತ್ತದೆ. ‘ಪಿತ ರಕ್ಷತಿ ಕೌಮಾರೆ, ಭರ್ತಾ ರಕ್ಷತಿ ಯೌವ್ವನೆ, ರಕ್ಷಂತಿ ಸ್ಥವಿರೆ ಪುತ್ರಾ, ನ ಸ್ತ್ರೀ ಸ್ವಾತಂತ್ರ್ಯಂರ್ಹತಿ’. ಅಂದರೆ ಸ್ತ್ರೀ ತನ್ನ ಜೀವನವನ್ನು ಪರರ ಆಶ್ರಯದಲ್ಲಿಯೇ ಕಳೆಯಬೇಕು. ಅವಳು ತನಗಿಚ್ಚೆ ಬಂದಂತೆ ಬದುಕುವ ಸ್ವತಂತ್ರ್ಯವನ್ನು ಹೊಂದಿಲ್ಲವೆಂದು, ಸಮಾಜದಲ್ಲಿ ಸ್ತ್ರೀಯ ಅಸ್ಥಿತ್ವವನ್ನೇ ಗೌಣಮಾಡಿದ್ದ ಪರಂಪರೆಯದು. ಇನ್ನೂ ಮುಂದುವರೆದು ಅಧ್ಯಾಯ 9(17) ‘ಶಯ್ಯಾ ಶನಮಲಂಕಾರಂ ಕಾಮಂ ಕ್ರೋಧಮನಾರಜವಂ ವiಃಅನಾರ್ಯತಂ, ದ್ರೊಹಭಾವಂ ಕುಚರಯ್ರಾಂ ಚ ಸ್ತ್ರಿಭ್ಯೊ ಮನುರಕಲ್ಪಯತ್ ದ್ರೊಗ್ಧ್ರಭಾವಂ’ ಶಯ್ಯೆ, ಆಸನ, ಅಲಂಕಾರ ಇವುಗಳ ಮೇಲೆ ಅವಳ ವ್ಯಾಮೋಹ. ಕಾಮ, ಕ್ರೋಧ, ದುರ್ನಡತೆ, ಅಪ್ರಾಮಾಣಿಕತೆ ಮೊದಲಾದುವು ಸ್ತ್ರೀಯ ಸಾಮಾನ್ಯ ಗುಣಗಳೆಂದು ಜರಿದು ಸ್ತ್ರೀಯನ್ನು ಕೇವಲ ಭೋಗದ ವಸ್ತುವೆಂಬಂತೆ ಸ್ವತಂತ್ರಹೀನಳನ್ನಾಗಿ ಮಾಡಿದ್ದ ಮನು ಧರ್ಮಶಾಸ್ತ್ರವನ್ನು ಇಂದು ಜನರು ಮರಳಿ ತರಲು ಇಚ್ಛಿಸುತ್ತಿರುವುದು ಇವರ ಮತಿಗೇಡಿತನವನ್ನು ತೋರಿಸುತ್ತದೆ. ಹಿಂದೂ ಧರ್ಮದಲ್ಲಿದ್ದ ಲೋಪಗಳನ್ನು ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್‍ ಅವರು ಹಿಂದೂ ಕೋಡ್‍ ಬಿಲ್ ಜಾರಿಗಾಗಿ ಹೋರಾಟ ನೆಡೆಸಿ ಅದು ವಿಫಲವಾದಾಗ 1951ರಲ್ಲಿ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಆದ್ದರಿಂದ ಈ ದೇಶದ ಮಹಿಳೆಯರು ಅಂಬೇಡ್ಕರ್‍ ಅವರಿಗೆ ವಿಧೇಯರಾಗಿರಬೇಕಿದೆ. ಸಮಾಜದ ದಮನಿತ ವರ್ಗಗಳ ಕುರಿತು ನೋಡುವುದಾದರೆ ಅಧ್ಯಾಯ 10(129)ರಲ್ಲಿ ‘ಶಕ್ತೆನಾಪಿ ಹಿ ಶೂದ್ರೆನ ನ ಕಾರ್ಯೋ ಧನಸಂಚಾಯಃ, ಶೂದ್ರೊ ಹಿ ಧನಮಾಸಾದ್ಯ ದ್ರೋಹ್ಮನಾನೆವ ಬಾಧತೆ’ ಅಂದರೆ ಶೂದ್ರನು ಹಣವನ್ನು ಸಂಪಾದಿಸುವ ಶಕ್ತಿಯನ್ನು ಹೊಂದಿದ್ದರೂ ಹಣವನ್ನು, ಸಂಪತ್ತನ್ನು ಸಂಪಾದಿಸಲು ಬಿಡಬಾರದು, ಒಂದು ವೇಳೆ ಬಿಟ್ಟರೆ ಅವನು ಬ್ರಾಹ್ಮಣರಿಗೆ ಅವಮಾನವನ್ನು ಮಾಡುತ್ತಾನೆ, ತೊಂದರೆಯನ್ನುಂಟುಮಾಡುತ್ತಾನೆ. ಹಾಗೆಯೇ, ಅಧ್ಯಾಯ 4(80)ರಲ್ಲಿ ‘ನ ಶೂದ್ರಾಯ ಮತಿಂ ದದ್ಯಾನ್ನೊಚ್ಚಿಸ್ತಂ ನ ಹವಿಸ್ಕ್ರತಂ, ನ ಚಾಸ್ಯೊಪದಿಸೆದ್ ಧರ್ಮಂ ನ ಚಾಸ್ಯಂ ವ್ರತಮಾದಿಸೆತ್’ ಅಂದರೆ ಶೂದ್ರನಿಗೆ ವಿದ್ಯೆಯನ್ನು ಕಲಿಸಬಾರದು, ಯಜ್ಞದ ಆವಿಷನ್ನು ನೀಡಬಾರದು, ಧರ್ಮೋಪದೇಶ, ಮಂತ್ರೋಚರಣೆ, ವ್ರತಗಳ ಆಚರಣೆಯನ್ನು ಕಲಿಸಬಾರದು ಎಂದು ಹೇಳುತ್ತದೆ. ಹೀಗೆ ಸಮಾಜದಲ್ಲಿ ಮೇಲು-ಕೀಳುಗಳನ್ನು ಆಚರಣೆಗೆ ತಂದು ವಿದ್ಯೆ, ಅಧಿಕಾರಗಳಿಂದ ತಳ ಸಮುದಾಯಗಳನ್ನು ಶಕ್ತಿಹೀನರಾಗಿಸಿದ್ದು ಇದೇ ವೈದಿಕ ಪರಂಪರೆ. ಮತ್ತೊಂದು ಅಧ್ಯಾಯ 10(123)ರಲ್ಲಿ ‘ವಿಫ್ರಸೆವೈವ ಶೂದ್ರಸ್ಯ ವಿಸಿಸ್ಟಂ ಕರ್ಮಂ ಕಿರ್ತ್ಯತೆ, ಯದತೋನ್ಯಾದ್ ಹಿ ಕುರುತೆ ತದ್ ಭವತ್ಯಸ್ಯ ನಿಸ್ಫಲಂ’ ಶೂದ್ರನಿಗೆ ಬ್ರಾಹ್ಮಣನ ಸೇವೆಯೇ ಶ್ರೇಷ್ಠವಾದ ಕಾಯಕ. ಅದನ್ನು, ಹೊರತು ಬೇರೆ ಯಾವ ಕಾಯಕವನ್ನು ಮಾಡಿದರೂ ಅವನಿಗೆ ಫಲಾಫಲಗಳು ಲಭಿಸುವುದಿಲ್ಲ ಎಂದು ಶೂದ್ರರ ಮೇಲೆ ಗುಲಾಮಗಿರಿಯನ್ನು ಹೇರಲಾಗಿತ್ತು. ಸಮಾಜದಲ್ಲಿ ಕೇವಲ ಹೆಸರುಗಳಿಂದಲೇ ಅವರವರ ಜಾತಿಗಳನ್ನು ಗುರುತಿಸಲಾಗುತ್ತದೆ. ಅದಕ್ಕೆ ಪೂರಕವಾದಂತೆ ಅಧ್ಯಾಯ 2(31)ರಲ್ಲಿ ‘ಮಂಗಲ್ಯಂ ಬ್ರಾಹ್ಮಣಸ್ಯಂ, ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಂ ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜುಗುಪ್ಸಿತಂ’ ಹೇಳಲಾಗಿದೆ. ಅಂದರೆ ಮಂಗಳ ಸೂಚಕವಾದ ಹೆಸರನ್ನು ಬ್ರಾಹ್ಮಣನಿಗೂ, ಶಕ್ತಿ ಸೂಚಕವಾದ ಹೆಸರನ್ನು ಕ್ಷತ್ರಿಯನಿಗೂ, ಸಂಪತ್ತಿನ ಸೂಚಕವಾದ ಹೆಸರನ್ನು ವೈಶ್ಯನಿಗೂ, ಅಸಹ್ಯ ಸೂಚಕವಾದ ಹೆಸರನ್ನು ಶೂದ್ರನಿಗೂ ಇಡಬೇಕೆಂದು ಹೇಳಲಾಗಿದೆ.

ಮೇಲಿನ ವಿಚಾರಗಳಿಗೆ ಪೂರಕವೆಂಬಂತೆ ಬಸವಣ್ಣನವರು ಹೀಗೆ ನುಡಿದಿದ್ದಾರೆ ‘ಬ್ರಾಹ್ಮಣನೇ ದೈವವೆಂದು ನಂಬಿದ ಕಾರಣ ಗೌತಮಮುನಿಗೆ ಗೋವೇಧೆಯಾಯಿತು, ಬಲಿಗೆ ಬಂಧನವಾಯಿತು, ಕರ್ಣನ ಕವಚ ಹೋಯಿತು, ದಕ್ಷಂಗೆ ಕುರಿದಲೆಯಾಯಿತು, ನಾಗಾರ್ಜುನನ ತಲೆ ಹೋಯಿತು’. ಹೀಗೆ ವೈದಿಕ ತತ್ವದಲ್ಲಿರುವ ಲೋಪಗಳು, ನ್ಯೂನತೆಗಳು ಬಸವಣ್ಣರ ವಚನಗಳಲ್ಲಿ ಢಾಳಾಗಿ ವ್ಯಕ್ತವಾಗಿವೆ. ಆದ್ದರಿಂದಲೇ ಬಾಬಾಸಾಹೇಬರು ವೈದಿಕ ಧರ್ಮದ ಅಸಮಾನತೆಯನ್ನು ಧಿಕ್ಕರಿಸಿ ಡಿಸೆಂಬರ್ 25, 1927 ರಂದು ‘ಮನುಸ್ಮೃತಿಯ’ ಪ್ರತಿಯನ್ನು ಸಾಂಕೇತಿಕವಾಗಿ ಸುಟ್ಟರು. ಹಾಗೆಯೇ, 1930 ರಂದು ‘ಕಾಳಾರಾಮ್’ ದೇವಾಲಯ ಪ್ರವೇಶವನ್ನು ಮಾಡುವ ಮೂಲಕ ದೇಶದ ಮೂಲಭೂತವಾದವನ್ನು ಮೆಟ್ಟಿನಿಂತರು.

ಭಾರತದಲ್ಲಿ ವೈದಿಕ ತತ್ವವನ್ನು ಬೋಧಿಸ ಹೊರಟರೆ ಅದು ಕಟ್ಟ ಕಡೆಗೆ ನಿಲ್ಲುವುದು ಅಸಮಾನತೆ ತತ್ವದ ಆಧಾರದ ಮೇಲೆ ಹೊರತು ಸಮಾಜದ ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸುವಲ್ಲಿ ವಿಫಲವಾಗುತ್ತದೆ. ವೈದಿಕ ಪರಂಪರೆಯಲ್ಲಿನ, ಮನುಸ್ಮೃತಿಯಲ್ಲಿನ ನ್ಯೂನತೆಗಳನ್ನು ಅವಲೋಕಿಸಿದಾಗ ನಮ್ಮ ಸಂವಿಧಾನವು ವ್ಯಕ್ತಿಯ ಸಮಾನತೆ, ಸ್ವತಂತ್ರ್ಯ, ಸಹೋದರತೆ ಹಾಗೂ ಸಹಭಾಗಿತ್ವಕ್ಕೆ ಆಪ್ಯಾಯಮಾನಗಿದೆ ಮತ್ತು ಶ್ರೇಷ್ಠವೆನಿಸುತ್ತದೆ. ಆದ್ದರಿಂದ ಈ ದೇಶದಲ್ಲಿನ ವಿಪ್ರ ಹಾಗೂ ಕ್ಷುದ್ರ ಮನಸ್ಸುಗಳು ಸಂವಿಧಾನದ ವಿರುದ್ಧ ಟೊಳ್ಳು ಚರ್ಚೆಗಿಳಿಯದೆ ಅದರ ಆಶಯಗಳ ಸಾಫಲ್ಯಕ್ಕೆ ಕೈ ಜೋಡಿಸಿ ದುಡಿಯುವುದು ಎಲ್ಲ ರೀತಿಯಲ್ಲೂ ಒಳಿತು ಎಂಬುದು ಈ ಲೇಖನದ ಆಶಯ.

  • ಶ್ರೀನಿವಾಸ್ ಕೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]