
ರಾಷ್ಟ್ರಧ್ವನಿ-ವಿಮರ್ಶೆ: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜೆಡಿಎಸ್-ಬಿಎಸ್ಪಿ ಮೈತ್ರಿ ಇದೀಗ ಬಿಜೆಪಿ ಮತ್ತು ಪ್ರಮುಖವಾಗಿ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬಿಎಸ್ಪಿ ಮುಖ್ಯಸ್ಥೆ ಬೆಂಗಳೂರಿಗೆ ಭೇಟಿ ನೀಡಿ ಜೆಡಿಎಸ್ ಮೈತ್ರಿಯ ವಿಕಾಸ ಪರ್ವದಲ್ಲಿ ಭಾಗವಹಿಸಿದ್ದ ಸಂದರ್ಭ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸದೇ, ಬಿಎಸ್ಪಿ ಮತ್ತು ಜೆಡಿಎಸ್ ನ ಮೈತ್ರಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದರು. ಇದು ರಾಜ್ಯ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಮಾಯಾವತಿಯವರು ಉತ್ತರಪ್ರದೇಶದಲ್ಲಿ ಏನೂ ಮಾಡಲಿಲ್ಲ. ಕರ್ನಾಟಕದಲ್ಲಿ ಏನು ಮಾಡುತ್ತಾರೆ ಎಂದು ತಮ್ಮ ಅಸಹನೆಯನ್ನು ಪ್ರದರ್ಶಿಸಿದ್ದರು. ಇದಲ್ಲದೇ ಜಿ.ಪರಮೇಶ್ವರ್ ಮಾಯಾವತಿಯವರ ಕುರಿತು ವ್ಯಂಗ್ಯವಾಡಿದರೇ ಹೊರತು ಮಾಯಾವತಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆನ್ನುವುದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ.
ಮಾಯಾವತಿಯವರು ದಲಿತರಿಗೆ ಇಲ್ಲಿನ ಸರಕಾರ ಏನೂ ಮಾಡಿಲ್ಲ ಅಂದರು ಆದರೆ, ಬಜೆಟ್ ಪುಸ್ತಕವನ್ನು ತೆರೆದು ನೋಡಿ 24.1% ಹಣ ದಲಿತರಿಗೆ ತೆಗೆದು ಇಟ್ಟಿದ್ದೇವೆ ಎಂದು ಹೇಳಿದರು. ಆದರೆ ಇದು ಯಾವಾಗ ದಲಿತರಿಗೆ ತಲುಪುತ್ತದೆ ಎನ್ನುವುದನ್ನು ಅವರು ಹೇಳಲಿಲ್ಲ. ಇದೊಂದು ಸಣ್ಣ ವಿಚಾರ ಅಲ್ಲವಾದರೂ ಹಾಗೆಯೇ ಅಂದುಕೊಳ್ಳೋಣ.. ಇಲ್ಲಿ ಮುಖ್ಯವಾಗಿರುವಂತದ್ದು, ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಅವರು ಮಾಯಾವತಿಯವರ ಈ ಒಂದು ಹೇಳಿಕೆಗೆ ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಹರಸಾಹಸಪಟ್ಟು ಕಾಂಗ್ರೆಸ್ ಸೋಲಿಸಿತ್ತು ಎಂಬ ಮಾಯಾವತಿಯವರ ಪ್ರಶ್ನೆಗೆ ಕಾಂಗ್ರೆಸ್ ನ ಯಾವುದೇ ನಾಯಕರಿಂದ ಉತ್ತರ ಇನ್ನೂ ಸಿಕ್ಕಿಲ್ಲ. ಈ ಹೇಳಿಕೆಯಿಂದ ಕಾಂಗ್ರೆಸಿಗರು ತೀವ್ರವಾಗಿ ಮುಜುಗರ ಅನುಭವಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಅಂಬೇಡ್ಕರ್ ಅವರ ವಿರುದ್ಧವಾಗಿದ್ದ ಕಾಂಗ್ರೆಸ್ ಇದೀಗ ತಾನೆ ಅಂಬೇಡ್ಕರ್ ವಾದಿ ಎನ್ನುವಂತೆ ಮಾತನಾಡುತ್ತಿರುವುದು ಬಹುಜನ ಚಳುವಳಿಯ ನಾಯಕರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ಹಿಂದೆ ದಲಿತ ಸಿಎಂ ಎಂಬ ಪಟ್ಟಿಯನ್ನು ಹೊತ್ತು ತಿರುಗಾಡಿದ್ದ ಪರಮೇಶ್ವರ್ ಬಳಿಕ ಉಪಮುಖ್ಯಮಂತ್ರಿಯಾಗುವುದಕ್ಕೆ ಅಪಾರ ಶ್ರಮಪಟ್ಟರು. ಕೊನೆಗೂ ಗೃಹಮಂತ್ರಿಯಾದರು. ಆದರೆ, ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಲು ವಿಫಲರಾದರು. ಒಬ್ಬ ಜನಪ್ರತಿನಿಧಿಯಾಗಿ ತಮ್ಮ ಸಾರ್ಥಕ ಸಮಾವೇಶದಲ್ಲಿ ಅಸಹಾಯಕತೆಯಿಂದ ಕಣ್ಣೀರು ಹಾಕಿದ್ದರು. ಆದರೆ ಇದೀಗ 4 ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಮಾಯಾವತಿಯವರ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಜೆಡಿಎಸ್ -ಬಿಎಸ್ಪಿಯ ವಿಕಾಸ ಪರ್ವದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಯಾವತಿಯ ಸವಾಲುಗಳಿಗೆ ಉತ್ತರಿಸಲು ಸಾಧ್ಯವಾದ ಕಾಂಗ್ರೆಸಿಗರು ಈ ಗಾಯಕ್ಕೆ ವ್ಯಂಗ್ಯ ಎಂಬ ಔಷಧಿಯನ್ನು ಕಂಡು ಹಿಡಿದು ಪ್ರಯೋಗಿಸುತ್ತಿದ್ದಾರೆನ್ನುವ ಶಂಕೆಗಳು ಮೂಡಿವೆ. ಕಾಂಗ್ರೆಸ್ ಅಂಬೇಡ್ಕರ್ ವಿರುದ್ಧವಾಗಿತ್ತು ಎನ್ನುವ ಪ್ರಶ್ನೆಗೆ ಕಾಂಗ್ರೆಸಿಗರ ಬಳಿ ಉತ್ತರವಿಲ್ಲ. ಹಾಗಾಗಿ ಮಾಯಾವತಿಯ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಜೆಡಿಎಸ್-ಬಿಎಸ್ಪಿ ವಿಕಾಸಪರ್ವ ಬಿಜೆಪಿ ಮತ್ತು ಮುಖ್ಯವಾಗಿ ಕಾಂಗ್ರೆಸ್ ನ ನಿದ್ದೆ ಹಾಳು ಮಾಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.