Friday, August 23 , 2019
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ | ಪಕ್ಷಗಳಿಗಿಂತಲೂ ಹೆಚ್ಚು ಪ್ರತಿಧ್ವನಿಸಿದ ಸಮುದಾಯಗಳ ಸ್ವಾಭಿಮಾನ

ಮಂಗಳೂರು(22.03.2019): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜಕಾರಣ ಭಾರೀ ಕುತೂಹಲ ಕೆರಳಿಸಿದೆ. ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಿದೆ. ಇನ್ನೊಂದೆಡೆ, ಕಾಂಗ್ರೆಸ್ ಕೂಡ ಬಂಟ ಸಮುದಾಯದ ಅಭ್ಯರ್ಥಿ ಮಿಥುನ್ ರೈಗೆ ಮಣೆ ಹಾಕಿದೆ. ಇದೀಗ ಈ ಎರಡೂ ಪಕ್ಷಗಳೂ ಆರ್ಥಿಕ ಪ್ರಾಬಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಮಣೆ ಹಾಕಿರುವುದು ಒಂದೆಡೆ ಅಸಮಾಧಾನಕ್ಕೆ ಕಾರಣವಾದರೆ ಇನ್ನೊಂದೆಡೆ,  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಹಾಗೂ ಎಸ್ ಸಿ-ಎಸ್ಟಿ ಅಭ್ಯರ್ಥಿಗಳು, ಬಿಲ್ಲವ ಸಮಾಜದ ನಾಯಕರನ್ನು ಕಡೆಗಣಿಸಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಬಾರಿ ನರೇಂದ್ರ ಮೋದಿಯನ್ನು ತೋರಿಸಿ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡದಲ್ಲಿ ಗೆದ್ದಿದ್ದರು. ಗೆದ್ದ ಬಳಿಕ ದಕ್ಷಿಣ ಕನ್ನಡದಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳು ಇನ್ನೂ ಸಂಪೂರ್ಣಗೊಂಡಿಲ್ಲ. ನಳಿನ್ ಕುಮಾರ್ ಕಟೀಲ್ ಸಂಸದರಾದ ಮೇಲೆ ಅಭಿವೃದ್ಧಿ ಕೆಲಸಗಳಿಗಿಂತ ಕೋಮುಗಲಭೆ ಪ್ರೇರಿತ ಹೇಳಿಕೆಗಳಿಗೆ ಹೆಚ್ಚು ಕುಖ್ಯಾತಿಯನ್ನು ಪಡೆದುಕೊಂಡಿದ್ದರು. ಇಡೀ ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆ ಸಹ ಹಾಕಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ನಳಿನ್ ಕುಮಾರ್ ಕಟೀಲ್ ಗೆ ಈ ಬಾರಿ ದ.ಕ.ಜಿಲ್ಲೆಯಲ್ಲಿ ಟಿಕೆಟ್ ನೀಡಬಾರದು ಎನ್ನುವ ಕೂಗು ದಕ್ಷಿಣ ಕನ್ನಡದಾದ್ಯಂತ ಕೇಳಿ ಬಂದಿತ್ತು.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿಚಾರಕ್ಕೆ ಬಂದರೆ, ಇವರು ಯೂತ್ ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ನ ಮುಸ್ಲಿಮ್ ಮುಖಂಡರೋರ್ವರ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಬಹುತೇಕ  ಮುಸ್ಲಿಮ್ ಮತಗಳನ್ನು ನಂಬಿರುವ ದ.ಕ.ಜಿಲ್ಲಾ ಕಾಂಗ್ರೆಸ್, ಮುಸ್ಲಿಮ್ ನಾಯಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನೇ ಚುನಾವಣೆಗೆ ನಿಲ್ಲಿಸಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿಯಿದ್ದರೂ, ಇದರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾವುದೇ ಪ್ರಯೋಜನಗಳಿಲ್ಲ. ಇಲ್ಲಿ ಜೆಡಿಎಸ್ ಇನ್ನೂ ಮೊಳಕೆಯೊಡೆದಿಲ್ಲ. ಹಾಗಾಗಿ ಈ ಮೈತ್ರಿಯೂ ದ.ಕ.ಕಾಂಗ್ರೆಸ್ ಗೆ ಸಾಧಕವಾಗಿಲ್ಲ.

 ಬಿಲ್ಲವರ ಸ್ವಾಭಿಮಾನಕ್ಕೆ ಪೆಟ್ಟು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಎರಡೂ ಬಿಲ್ಲವ ಸಮಾಜದ ನಾಯಕರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ. ಈ ಬಾರಿ ಬಿಜೆಪಿಯಲ್ಲಿ ಬಿಲ್ಲವ ಮುಖಂಡರಿಗೆ ಟಿಕೆಟ್ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಬಿಲ್ಲವರಿಗೆ ಪ್ರಧಾನಿ ನರೇಂದ್ರ ಮೋದಿ ಭಾರೀ ನಿರಾಸೆಯನ್ನುಂಟು ಮಾಡಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಿಷ್ಯ ಎಂದೇ ಕರೆಯಲ್ಪಡುವ ನಳಿನ್ ಕುಮಾರ್ ಕಟೀಲ್ ಗೆ ಟಿಕೆಟ್ ನೀಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನಿಂದ ಈ ಬಾರಿ ಜನಾರ್ದನ ಪೂಜಾರಿಗೆ ಟಿಕೆಟ್ ನೀಡಬಹುದು ಎಂದು ನಿರೀಕ್ಷೆಯಿಟ್ಟುಕೊಂಡಿದ್ದ ಬಿಲ್ಲವ ಮುಖಂಡರಿಗೆ ಅಲ್ಲಿಯೂ ನಿರಾಸೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಾರ್ಟಿಗಳೂ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಕಾಂಗ್ರೆಸ್ ನಲ್ಲಿ ಮುಸ್ಲಿಮ್ ನಾಯಕರ ಪರದಾಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೇಗಾದರೂ ಟಿಕೆಟ್ ಪಡೆದುಕೊಳ್ಳಬೇಕು ಎಂದು ಹೊರಟಿದ್ದ ಮುಸ್ಲಿಮ್ ಮುಖಂಡರಿಗೆ ಭಾರೀ ಹಿನ್ನಡೆಯಾಗಿದೆ. ಮುಸ್ಲಿಮ್ ಮುಖಂಡರ ಮನವಿಗಳಿಗೆ ದ.ಕ.ಕಾಂಗ್ರೆಸ್ ಕ್ಯಾರೇ ಅನ್ನದೇ ಮಿಥುನ್ ರೈ ಅವರನ್ನು ಕಣಕ್ಕಿಳಿಸಿದೆ. ದ.ಕ.ಜಿಲ್ಲೆಯಲ್ಲಿ ಕಣಚೂರು ಮೋನು ಸೇರಿದಂತೆ ಹಲವು ಮುಸ್ಲಿಮ್ ಅಭ್ಯರ್ಥಿಗಳ ಹೆಸರು ಕೇಳಿ ಬಂದಿತ್ತು. ಆದರೆ ಇವರ ಆಕಾಂಕ್ಷೆಯನ್ನು ಕಾಂಗ್ರೆಸ್ ಸದ್ದಿಲ್ಲದೇ, ನಿರಾಕರಿಸಿದೆ. ದ.ಕ.ಜಿಲ್ಲೆಗೆ  ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸುವ ವೇಳೆ ಮುಸ್ಲಿಮರು ತಲೆ ಮೇಲೆ ಹೊತ್ತು ಕುಣಿದಾಡುತ್ತಾರೆ. ಆದರೆ ಸಿದ್ದರಾಮಯ್ಯರಿಗೆ ಒಬ್ಬ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ಕೊಡಿಸುವ ಸಾಮರ್ಥ್ಯವಿಲ್ಲ. ಮುಸ್ಲಿಮ್ ಮುಖಂಡರ ಮೇಲೆ ಹಲ್ಲೆ ನಡೆಸಿದ ಮಿಥುನ್ ರೈಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಮರ ವಿರೋಧಿ ನೀತಿಯನ್ನು ತಳೆದಿದೆ ಎನ್ನುವ ಆಕ್ರೋಶಗಳು ಇದೀಗ ಕೇಳಿ ಬಂದಿವೆ.

ಎಸ್ ಡಿಪಿಐ ಜಾಣ ನಡೆ

ದಕ್ಷಿಣ ಕನ್ನಡ  ಲೋಕಸಭಾ ಕ್ಷೇತ್ರದಲ್ಲಿ ಎಸ್ ಡಿಪಿಐಯಿಂದ ಇಲ್ಯಾಸ್ ಮುಹಮ್ಮದ್ ತುಂಬೆ  ಸ್ಪರ್ಧಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ಕಾಂಗ್ರೆಸ್ ಗೆ ಪರೋಕ್ಷ ಬೆಂಬಲ ನೀಡಿರುವುದು ಇನ್ನೂ ಪ್ರಶ್ನಾರ್ಥಕವಾಗಿದ್ದರೂ, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರನ್ನು ಕಾಂಗ್ರೆಸ್ ಕಡೆಗಣಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಛಿಧ್ರಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇನ್ನೂ ಅಭ್ಯರ್ಥಿಯನ್ನು ಘೋಷಿಸದ ಬಿಎಸ್ ಪಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಎಸ್ ಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಬಿಎಸ್ ಪಿ ಬಿಲ್ಲವ, ಮುಸ್ಲಿಮ್, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬಿಎಸ್ ಪಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರಿದ್ದಾರೆ. ಜೊತೆಗೆ ಬಿಎಸ್ ಪಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನದೇ ಆದ ಮತ ಬ್ಯಾಂಕನ್ನೂ ಹೊಂದಿದೆ. ಹಾಗಾಗಿ ಬಿಎಸ್ ಪಿ ತೀರ್ಮಾನವೂ ಇಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಈ ಬಾರಿ ತೀವ್ರ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಕೇವಲ ಪಕ್ಷಗಳಿಗಿಂತಲೂ ಸಮುದಾಯದ ಪ್ರಾತಿನಿಧಿತ್ವ ಹೆಚ್ಚಾಗಿ ಸದ್ದು ಮಾಡಿದೆ. ಪ್ರತಿ ಬಾರಿಯಂತೆ ಈ ಬಾರಿ ಕೇವಲ ಪಕ್ಷದ್ದೋ, ಮೋದಿದ್ದೋ, ರಾಹುಲ್ ಗಾಂಧಿಯದ್ದೋ ಹೆಸರುಗಳ ಸದ್ದುಗಳಿಗಿಂತ ಹೆಚ್ಚಾಗಿ ಸ್ವಾಭಿಮಾನ ಸದ್ದು ಮಾಡಿದೆ. ಹಾಗಾಗಿ ಜಿದ್ದಾ ಜಿದ್ದಿನ ಫೈಟ್ ತೀವ್ರ ಕುತೂಹಲವನ್ನುಂಟು ಮಾಡಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...
POLL

[democracy id="1"]