Sunday, May 31 , 2020
ಕಾಂಗ್ರೆಸ್ ಗೆಲುವಿಗೆ ಪರೋಕ್ಷವಾಗಿ ಬಿಜೆಪಿ ಸಹಕರಿಸುತ್ತಿದೆಯೇ?

ಬೆಂಗಳೂರು(28.03.2018): ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿ ಕೆಲಸ ಮಾಡುತ್ತಿದೆ ಎನ್ನುವ ರಾಹುಲ್ ಗಾಂಧಿ ಹೇಳಿಕೆಯ ಬಳಿಕ ಸಾಮಾಜಿಕ ತಾಲತಾಣಗಳಲ್ಲಿ ಹೊಸದೊಂದು ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಬಿಜೆಪಿ ಸಮಾವೇಶಗಳಲ್ಲಿ ತೋರುತ್ತಿರುವ ನಿರಾಸಕ್ತಿ ಇದೀಗ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

ಹಲವು ದಿನಗಳಿಂದ ಸಾಮಾಜಿಕ ತಾಲತಾಣಗಳಲ್ಲಿ ಹೊಸದೊಂದು ವಿಚಾರ ಚರ್ಚೆಯಲ್ಲಿದೆ. ಬಿಜೆಪಿ ನಾಯಕರು ಉದ್ದೇಶ ಪೂರ್ವಕವಾಗಿ ರಾಜ್ಯ ಬಿಜೆಪಿ ಸಮಾವೇಶದಲ್ಲಿ ಯಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ಸನ್ನು ಗೆಲ್ಲಿಸಲು ಬಿಜೆಪಿ ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎನ್ನುವುದು ಈ ಚರ್ಚೆಯ ಸಾರಾಂಶವಾಗಿದೆ.

ಯಾವ ರಾಜ್ಯದಲ್ಲೂ ಮಾಡದ ಯಡವಟ್ಟುಗಳನ್ನು ಬಿಜೆಪಿ ಕರ್ನಾಟಕದಲ್ಲಿ ಮಾಡುತ್ತಿದೆ. ಆರಂಭದಲ್ಲಿ ಇದು ಸಹಜ ತಪ್ಪುಗಳು ಎಂದೆನಿಸಿಕೊಂಡಿದ್ದರೂ, ಆ ಬಳಿಕ ಅನೇಕ ಅನುಮಾನಗಳನ್ನು ಹುಟ್ಟು ಹಾಕಿತು. ಬಿಜೆಪಿಯೊಳಗಿನ ಬಿಕ್ಕಟ್ಟು ಒಂದು ರೀತಿಯಲ್ಲಿ ಬಿಜೆಪಿಯ ಸೋಲಿಗೆ ಕಾರಣವಾಗುವ ಸಾಧ್ಯತೆ ಒಂದೆಡೆಯಾಗಿದ್ದರೆ, ಬಿಜೆಪಿ ನಾಯಕರ ಕಾಂಗ್ರೆಸ್ ಒಲವು ಇನ್ನೊಂದು ಕಡೆಯಿಂದ ಬಿಜೆಪಿಗೆ ಸೋಲನ್ನು ತರಲಿದೆ ಎನ್ನುವ ಚರ್ಚೆಗಳು ಆರಂಭವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಅವರ ವಿರುದ್ಧ ಮೊದಲು ತಿರುಗಿ ಬಿದ್ದದ್ದು ಕೆ.ಎಸ್.ಈಶ್ವರಪ್ಪ. ಆ ಬಳಿಕ ಅವರು ತಮ್ಮ ಮತ್ತು ಯಡಿಯೂರಪ್ಪ ಅವರ ನಡುವಿನ ಜಗಳ ಗಂಡ, ಹೆಂಡತಿಯ ನಡುವಿನ ಜಗಳದಂತೆ ಎಂದು ಹೇಳಿಕೆ ನೀಡಿದ್ದರು. ಇದೇ ಸಾಲಿನಲ್ಲಿ ಬಿಎಸ್ ವೈ ವಿರುದ್ಧ ಸದಾನಂದ ಗೌಡ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಸಹಿತ ಹಲವು ಬಿಜೆಪಿ ಮುಖಂಡರು ಬಿಎಸ್ ವೈ ವಿರುದ್ಧ ತಿರುಗಿ ಬಿದ್ದಿರುವುದು ಬಿಜೆಪಿಯ ಒಳ ಜಗಳಕ್ಕೆ ಸಾಕ್ಷಿಯಾಗಿತ್ತು. ಇವೆಲ್ಲ ರಾಜ್ಯದ ರಾಜಕೀಯ ವಿದ್ಯಮಾನವಾಗಿದ್ದರೆ, ರಾಷ್ಟ್ರೀಯ ನಾಯಕರಿಗೆ ಏನಾಗಿದೆ ಎನ್ನುವುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

ರಾಹುಲ್ ಗಾಂಧಿಯ ರಾಜ್ಯ ಪ್ರವಾಸ ರಾಜ್ಯದಲ್ಲಿ ಅಷ್ಟು ಪ್ರಭಾವ ಬೀರಲಿಲ್ಲ. ಅಲ್ಲದೇ ಅವರು ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ರಾಜ್ಯದಲ್ಲಿ ಪ್ರಚಾರ ಮಾಡಿದಂತೆ ಕಾಂಗ್ರೆಸ್ ಸಮಾವೇಶ ಕಂಡು ಬಂದಿತ್ತು. ಇಷ್ಟು ಕಳಪೆಯ ಪ್ರಚಾರವನ್ನು ಕಾಂಗ್ರೆಸ್ ನೀಡಿದ್ದರೂ, ಅದನ್ನು ಪ್ರಬಲವಾಗಿ ಎದುರಿಸಲು ಬಿಜೆಪಿ ಅಸಮರ್ಥವಾಯಿತು. ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಏನೆಲ್ಲ ಆರೋಪಗಳನ್ನು ಮಾಡಿದರೋ ಅದ್ಯಾವುದನ್ನೂ ಬಿಜೆಪಿ ನಾಯಕರು ಪ್ರಬಲವಾಗಿ ವಿರೋಧಿಸಿಲ್ಲ. ಈ ವಿಚಾರದಲ್ಲಿ ಬಿಜೆಪಿ ತೀವ್ರ ಉದಾಸೀನವನ್ನು ಪ್ರದರ್ಶಿಸಿತು ಎಂದರೆ ತಪ್ಪಾಗಲಾರದು. ರಾಜ್ಯ ಬಿಜೆಪಿ ನಾಯಕರು ಬಿಎಸ್ ವೈ ಅವರನ್ನು ರಾಜಕೀಯವಾಗಿ ಮುಗಿಸಲು ಈ ತಂತ್ರವನ್ನು ಹೆಣೆದಿದ್ದಾರೆಯೇ? ಎನ್ನುವ ಪ್ರಶ್ನೆಗಳು ಬಿಜೆಪಿಗರ ಈ ನಡವಳಿಕೆಗಳಿಂದ ಹುಟ್ಟಿಕೊಂಡಿದೆ.

ಇನ್ನೊಂದೆಡೆಯಲ್ಲಿ ಈ ಬಾರಿ ಬಿಜೆಪಿ ಗೆದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎನ್ನುವ ಮಾಹಿತಿಗಳು ಚುನಾವಣಾ ಚಟುವಟಿಕೆಗಳು ಆರಂಭಗೊಳ್ಳುವ ಮುನ್ನವೇ ಬಿಜೆಪಿ ವಲಯದಲ್ಲಿ ಕೇಳಿ ಬಂದಿತ್ತು. ಅಂದರೆ ಈ ಬಾರಿ ಕಾಂಗ್ರೆಸ್ಸನ್ನು ಸೋಲಿಸುವ ಯೋಚನೆ ಬಿಜೆಪಿಗಿಲ್ಲ ಎನ್ನುವ ಸಂಶಯ ಒಂದೆಡೆಯಾದರೆ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಯೋಚನೆ ಬಿಜೆಪಿಗಿಲ್ಲ ಎನ್ನುವುದು ಇನ್ನೊಂದು ಕಡೆಯಲ್ಲಿ ಸ್ಪಷ್ಟವಾಗುತ್ತದೆ.

ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿದಾಗಲೂ ಸಿದ್ದರಾಮಯ್ಯ ಸರಕಾರದ ಹಲವು ಲೋಪಗಳನ್ನು ಕೈ ಬಿಟ್ಟು ಕೇವಲ ತಿರುಳಿಲ್ಲದ ಆರೋಪಗಳನ್ನಷ್ಟೇ ಮಾಡಿತು. ಈ ಮೂಲಕ ಬಿಜೆಪಿಯ ಯಾತ್ರೆ ತೂಕನ್ನು ಕಳೆದುಕೊಂಡಿತು. ಹಾಗೆ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ನ್ನು ಬಿಜೆಪಿಗಿಂತಲೂ ಪ್ರಬಲವಾಗಿ ವಿರೋಧಿಸಿದ್ದು ಜೆಡಿಎಸ್ ಮತ್ತು ಬಿಎಸ್ಪಿ ಎಂದು ಹೇಳಬಹುದು. ಕಾಂಗ್ರೆಸ್ಸನ್ನು ಒಂದು ಪ್ರಬಲ ವಿಚಾರದಲ್ಲಿ ಮತ್ತು ನೈತಿಕ ಮೌಲ್ಯಯುತ ಪ್ರಶ್ನೆಗಳಿಂದ ಬಿಎಸ್ಪಿ ಮತ್ತು ಜೆಡಿಎಸ್ ಪ್ರತಿ ಹಂತದಲ್ಲೂ ಪ್ರಶ್ನಿಸಿದವು. ಈ ರೀತಿಯ ಪ್ರಶ್ನೆಗಳನ್ನು ಬಿಜೆಪಿ ಯಾಕೆ ಎತ್ತಲಿಲ್ಲ. ಮಾಹಿತಿಯ ಕೊರತೆಯೇ, ಅಥವಾ ಅವರು ಎತ್ತಬಾರದಂತಹ ಪ್ರಶ್ನೆಗಳು ಅದಾಗಿದ್ದವೋ, ಅಥವಾ ತಮ್ಮ ಈ ಪ್ರಶ್ನೆಗಳನ್ನು ಎತ್ತುವುದರಿಂದಾಗಿ ತಮ್ಮ ಪಕ್ಷದ ಮೂಲ ಸಿದ್ದಾಂತಕ್ಕೆ ಧಕ್ಕೆಯಾಗುವುದೆಂದೇ? ಈ ಎಲ್ಲ ಅನುಮಾನಗಳು ಸಹಜವಾಗಿಯೇ ಜನರನ್ನು ಕಾಡಿದೆ.

ರಾಜ್ಯದ ಜನರ ಮೂಲಭೂತ ಸೌಕರ್ಯಗಳ ಬಗ್ಗೆ ಬಿಜೆಪಿ ಎಲ್ಲೂ ಧ್ವನಿಯೆತ್ತಿಲ್ಲ. ಬಿಜೆಪಿಯ ಪ್ರತಿ ಸಮಾವೇಶದಲ್ಲೂ ಹಿಂದೂ, ಮುಸ್ಲಿಂ ಎನ್ನುವ ಹಿಂದೂ ಸಂಘಟನೆಯ ಮುಖವಾಡವನ್ನು ಹಾಕಿಕೊಂಡಿರುವ ಬಿಜೆಪಿ ಪರ ಸಂಘಟನೆಗಳ ಸಿದ್ಧಾಂತವನ್ನು ಹರಡಲು ಬಳಸಲಾಯಿತು.  ರಾಜ್ಯದಲ್ಲಿ ಆದಿವಾಸಿಗಳು, ಎಸ್ಪಿ, ಒಬಿಸಿಗಳು, ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬಿಜೆಪಿ ಎಲ್ಲೂ ತುಟಿ ಬಿಚ್ಚಲಿಲ್ಲ.  ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ ನ ಸಿದ್ಧಾಂತಕ್ಕೆ ಇದು ವಿರೋಧವಾಗುವ ಕಾರಣಕ್ಕೆ ಈ ಪ್ರಶ್ನೆಯನ್ನು ಬಿಜೆಪಿ ಎತ್ತಲಿಲ್ಲವೇ? ಅಥವಾ ಕಾಂಗ್ರೆಸ್ ಗೆಲುವಿಗಾಗಿ ಬಿಜೆಪಿ ಈ ಬಾರಿ ಕೈಜೋಡಿಸುವ ಉದ್ದೇಶದಿಂದ ಈ ಪ್ರಬಲ ಪ್ರಶ್ನೆಗಳನ್ನು ಬಿಜೆಪಿ ಎತ್ತಲಿಲ್ಲವೇ ಎನ್ನುವುದು ಈಗ ಸಂಶಯಕ್ಕೆ ಕಾರಣವಾಗಿರುವ ವಿಚಾರವಾಗಿದೆ.

ಒಟ್ಟಿನಲ್ಲಿ ಬಿಜೆಪಿಯ ನಡೆ ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುವ ಕಡೆಗೆ ಸಾಗುತ್ತಿದೆಯೇ ಎನ್ನುವ ಶಂಕೆಗಳು ಪ್ರಬಲಗೊಳ್ಳುತ್ತಿವೆ. ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡವಳಿಕೆಗಳು ಇದಕ್ಕೆ ಪ್ರಮುಖವಾಗಿ ಕಾರಣವಾಗುತ್ತಿದ್ದು, ರಾಜ್ಯದಲ್ಲಿ ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿ ಅಘೋಷಿತವಾಗಿ ಪ್ರಮುಖ ವಿರೋಧ ಪಕ್ಷವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚುನಾವಣೆ ಫಲಿತಾಂಶ ಈ ಎಲ್ಲಾ ಅನುಮಾನಗಳಿಗೆ  ಉತ್ತರ ನೀಡಬೇಕಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]