Saturday, June 15 , 2019
Lok Sabha Election Results 2019 | ಕರ್ನಾಟಕ: ಮತಗಳಿಕೆಯಲ್ಲಿ ಗಣನೀಯ ಸಾಧನೆಗೈದ ಬಿಎಸ್ಪಿ

ರಾಷ್ಟ್ರಧ್ವನಿ ಪೊಲಿಟಿಕಲ್ ಬ್ಯೂರೋ(24.05.2019): ನೆನ್ನೆಯಷ್ಟೆ ದೇಶದ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದಿದೆ.‌ NDA ಮೈತ್ರಿಕೂಟ ಬಹುಮತ ಪಡೆದಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. ಕಾಂಗ್ರೆಸ್ ನೇತೃತ್ವದ UPA ಮತ್ತೊಮ್ಮೆ ಮುಗ್ಗರಿಸಿದೆ. ಇದರ‌‌ ನಡುವೆ ಬಹುಜನ ಸಮಾಜ ಪಕ್ಷ ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಹತ್ತು ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೆ ವಾಪಸಾತಿಯಾಗಿದೆ, ಆದರೆ‌ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವುದು ಮಾತ್ರ ಸಾಧ್ಯವಾಗಲಿಲ್ಲ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ಮೈತ್ರಿ ದೇಶದ ತೃತೀಯ ಶಕ್ತಿಗೆ ದೊಡ್ಡ ಮಟ್ಟದ ಅನುಕೂಲವಾಗಿ ಬಿಜೆಪಿಯನ್ನು ಕಟ್ಟಿಹಾಕುವ‌ ಎಲ್ಲ ಸೂಚನೆಗಳಿದ್ದವು. ಮಹಾಘಟಬಂಧನ್‌ ನಿಂದ ಬೆದರಿದ್ದ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಸ್ಥಾನಗಳನ್ನು ಪಡೆಯಲು ಸಾಧ್ಯ ಎಂಬುದನ್ನು ಅರಿತು ಉತ್ತರಪ್ರದೇಶದಲ್ಲಿ ಕಳೆದುಕೊಳ್ಳಬಹುದಾದ ಸ್ಥಾನಗಳನ್ನು ಇತರ ರಾಜ್ಯಗಳಲ್ಲಿ ಪಡೆದುಕೊಳ್ಳಲು ನಡೆಸಿದ ತಂತ್ರಗಾರಿಕೆ ಬಿಜೆಪಿಗೆ ಫಲನೀಡಿದೆ. ಬಹುಜನ ಸಮಾಜ ಪಕ್ಷ ಕಳೆದ ಬಾರಿ ಶೇಕಡಾ 19.8% ಮತಗಳಿಸಿಯೂ ಶೂನ್ಯ ಸಂಪಾದಿಸಿತ್ತು. ಆದರೆ ಈ ಬಾರಿ‌ ಶೇಕಡಾ 19.27% ಮತಹೆ್ಚಿಚ್ಚಿಸಿಕೊಂಡು ಹತ್ತು ಸ್ಥಾನಗಳೊಂದಿಗೆ ಸಂಸತ್ತನ್ನು ಪ್ರವೇಶಿಸಲಿದೆ.

‌ ಕರ್ನಾಟಕದ ಫಲಿತಾಂಶವನ್ನು ಗಮನಿಸುವುದಾದರೆ ಅಧಿಕಾರರೂಢ ಮೈತ್ರಿ ಸರ್ಕಾರಕ್ಕೆ ಮುಖಭಂಗವಾಗಿದ್ದು‌ ಕಾಂಗ್ರೆಸ್,‌ ಜೆಡಿಎಸ್ ಇಲ್ಲಿ ಕೇವಲ ಒಂದೊಂದು ಸ್ಥಾನ ಗೆಲ್ಲಲಷ್ಟೆ ಸಾಧ್ಯವಾಗಿದೆ. ಘಟಾನುಘಟಿ ನಾಯಕರಾದ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ಮುನಿಯಪ್ಪ, ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಕೃಷ್ಣಬೈರೇಗೌಡ, ಉಗ್ರಪ್ಪ, ಧ್ರುವನಾರಾಯಣ್ ಮುಂತಾದವರು ಸೋಲೊಪ್ಪಿದ್ದಾರೆ. ಪ್ರತಿಷ್ಠಿತ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಗೆಲುವಾಗಿದ್ದು ಸಿ.ಎಂ‌ ಪುತ್ರ ನಿಖಿಲ್ ಕುಮಾರಸ್ವಾಮಿಗೆ ತೀವ್ರ ಹಿನ್ನಡೆಯಾಗಿದೆ.

ಇನ್ನು ಬಹುಜನ ಸಮಾಜ ಪಕ್ಷ, ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದು ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗದಿದ್ದರೂ‌ ಸಹ ಕಳೆದ‌ ಚುನಾವಣೆಗಿಂತಲೂ ಈ‌ ಭಾರಿ ಮತಪ್ರಮಾಣವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿದೆ. ಬಿಎಸ್ಪಿ ಚಾಮರಾಜನಗರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿತ್ತಾದರೂ ಅದು ಈ ಬಾರಿ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ 2014 ರ‌ ಲೋಕಸಭಾ ಚುನಾವಣೆಯಲ್ಲಿ 265006 ಮತಗಳೊಂದಿಗೆ ಶೇಕಡಾ 0.9% ಮತಪಡೆದುಕೊಂಡಿದ್ದ ಬಿಎಸ್ಪಿ ಈ ಬಾರಿ ಸುಮಾರು 412235 ಮತಗಳನ್ನು ಪಡೆದು ಶೇಕಡಾ 1.17% ಮತಗಳಿಕೆಗೆ ಏರಿಕೆ ಕಂಡಿದೆ.

ಹಳೆ ಮೈಸೂರಿನ ಭಾಗದ ಜಿಲ್ಲೆಗಳಲ್ಲಿ ತನ್ನ ನೆಲೆಯನ್ನು ಭದ್ರ ಮಾಡಿಕೊಳ್ಳುತ್ತಲೇ ಇರುವ ಬಿಎಸ್ಪಿ ಈ ಬಾರಿ ಗಮನಾರ್ಹ ಸಂಖ್ಯೆಯ ಮತಬೇಟೆಯಾಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಶೇಕಡಾ 3.1% ಮತ ಪಡೆದಿದ್ದ ಬಿಎಸ್ಪಿ ಈ ಬಾರಿ ಕಳೆದ ಸಲದ ಮತಗಳಿಗಿಂತ ಸುಮಾರು 52 ಸಾವಿರಕ್ಕೂ ಅಧಿಕ ಮತ ಪಡೆದು ಶೇಕಡಾ 6.9% ಮತದಾಖಲಿಸಿದೆ. ಚಾಮರಾಜನಗರ ಲೋಕಸಭಾ ಅಭ್ಯರ್ಥಿಯಾಗಿದ್ದ ಖ್ಯಾತ ಚಿಂತಕ ಡಾ.ಶಿವಕುಮಾರ್ ಅವರು ಒಟ್ಟು 87631 ಮತಗಳನ್ನು ಗಳಿಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಹ 1.2% ಇದ್ದ ಮತಗಳಿಕೆ ಈ‌ ಬಾರಿ 24597 ಮತಗಳೊಂದಿಗೆ ಶೇಕಡಾ 1.87% ಕ್ಕೆ ಏರಿದೆ. ಹಾಸನದಲ್ಲಿ ಬಿಎಸ್ಪಿ ಕಳೆದ ಸಲ ಶೇಕಡಾ 1.6% ಮತಗಳಿಸಿತ್ತು, ಅಭ್ಯರ್ಥಿ ವಿನೋದ್ ರಾಜ್ ಈ ಬಾರಿ 38761 ಮತಗಳನ್ನು ಪಡೆದಿದ್ದಾರೆ‌. ಮತಗಳಿಕೆ ಶೇಕಡಾ 3.03%ಕ್ಕೆ ಏರಿದೆ. ಕೇವಲ 0.8% ಮತಗಳಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಸಲ 1.23% ಮತ ಬಾಚಿಕೊಂಡಿದೆ. ಹಾಗೆಯೇ 0.5% ಮತಪಡೆದುಕೊಂಡಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ‌ ಬಾರಿ 1.69% ಮತಪ್ರಮಾಣ ಗಳಿಸುವಲ್ಲಿ ಯಶಸ್ವಿಯಾಗಿದೆ. ಖ್ಯಾತ ಚಿಂತಕ ಡಾ.ಸಿ.ಎಸ್‌.ದ್ವಾರಕನಾಥ್ 23446 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಕೋಲಾರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕರಾವಳಿ ಮಲೆನಾಡಿನ ವ್ಯಾಪ್ತಿಯ ಕ್ಷೇತ್ರವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಹ ಕಳೆದ ಬಾರಿ ಕೇವಲ 0.8% ಮತಗಳಿಸಿದ್ದ ಬಿಎಸ್ಪಿ ಈ ಬಾರಿ 1.39% ಮತಗಳನ್ನು ಗಳಿಸಿಕೊಂಡಿದೆ. ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಬಿಜಾಪುರ, ಬಳ್ಳಾರಿ, ಬೆಳಗಾವಿ, ಹಾವೇರಿ , ಶಿವಮೊಗ್ಗ, ದಾವಣಗೆರೆ ಕ್ಷೇತ್ರಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮತಗಳನ್ನು ಹೆಚ್ಚಿಸಿಕೊಂಡಿದೆ‌. ಮಂಡ್ಯ, ಗುಲ್ಬರ್ಗ, ಧಾರವಾಡ, ಕೊಪ್ಪಳ ಮತ್ತಿತರ ಕ್ಷೇತ್ರಗಳಲ್ಲಿ ಕಳೆದ ಬಾರಿ ಪಡೆದ ಮತಗಳಿಗಿಂತ ಈ ಬಾರಿ ಮತಗಳು ಕಡಿಮೆಯಾಗಿರುವುದಕ್ಕೆ ಕಾರಣ ತಿಳಿದಿಲ್ಲ. ಆದರೆ ಇವೆಲ್ಲವನ್ನೂ ಹೊರತುಪಡಿಸಿ ನೋಡುವುದಾದರೆ ಕರ್ನಾಟಕದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಮತಗಳಿಕೆಯಲ್ಲಿ ಉತ್ತಮ ಏರಿಕೆ ಕಂಡಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ನೀಡಿದೆ. ಹಾಗೆಯೇ ಬಿಎಸ್ಪಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ನೇರವಾಗಿ ಸ್ಪರ್ಧೆಯೊಡ್ಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.‌

ಈ ಬಾರಿ ದಲಿತ ಸಮುದಾಯದ ಅಭ್ಯರ್ಥಿಗಳ ಜೊತೆಗೆ ಬಿಎಸ್ಪಿ ಮುಸ್ಲಿಂ ಅಭ್ಯರ್ಥಿಗಳನ್ನು, ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ತಂತ್ರಗಾರಿಕೆ ಹೆಣೆದಿತ್ತು.‌ ಅದರಂತೆಯೇ ಮುಂಬರುವ ದಿನಗಳಲ್ಲಿ ಮುಸ್ಲಿಮರ, ಹಿಂದುಳಿದ ವರ್ಗಗಳ ವಿಶ್ವಾಸವನ್ನು ಬಿಎಸ್ಪಿ ಪಡೆದಿದ್ದೇ ಆದಲ್ಲಿ ಮುಂಬರುವ ಚುನಾವಣೆಗಳು ಗೆಲುವಿನ ಹಾದಿಯನ್ನು ಸುಲಭಗೊಳಿಸಲಿವೆ. ಬದಲಾದ ರಾಜಕೀಯ ಲೆಕ್ಕಾಚಾರಗಳ ನಡುವೆ ಒಂದುವೇಳೆ ಪ್ರಸ್ತುತ ಸರ್ಕಾರ ಐದು ವರ್ಷ ಅವಧಿ ಪೂರ್ಣಗೊಳಿಸಿದಲ್ಲಿ 2023 ರ ಕರ್ನಾಟಕದ ವಿಧಾನಸಭಾ ಚುನಾವಣೆ ಬಹುಜನ ಸಮಾಜ ಪಕ್ಷಕ್ಕೆ ಹಲವು ಕ್ಷೇತ್ರಗಳನ್ನು ಗೆಲ್ಲಲು ಭೂಮಿಕೆಯಾಗಲಿದೆಯೇ ಕಾದುನೋಡಬೇಕಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...