Saturday, June 15 , 2019
ಆನೆಯ ನಡೆಗೆ ಕಾಂಗ್ರೆಸ್ ಗಡಗಡ | ಬಿಎಸ್ ಪಿ ವಿರುದ್ಧ ಅಪಪ್ರಚಾರವೇ ಕಾಂಗ್ರೆಸ್ ನ ಬಂಡವಾಳ?

ಮತಭಾರತ

  • ಗಣೇಶ್ ಕೆ.ಪಿ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕರ್ನಾಟಕದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಕಾಣಿಸಿಕೊಂಡಿದೆ. ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆಸಲ್ಪಡುತ್ತಿದೆ ಎನ್ನಲಾಗಿರುವ ಯೂಟ್ಯೂಬ್ ಚಾನೆಲ್ ಗಳು ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯನ್ನು ವಿರೋಧಿಸುವುದಕ್ಕಿಂತಲೂ ಹೆಚ್ಚು ಬಿಎಸ್ ಪಿಯನ್ನು ವಿರೋಧಿಸುತ್ತಿರುವುದು ಕಂಡು ಬಂದಿದೆ. ಈ ಎಲ್ಲ ಬೆಳವಣಿಗೆಗಳು ಬೂದಿ ಮುಚ್ಚಿದ ಕೆಂಡದಂತಿತ್ತು. ಬಿಎಸ್ ಪಿ ವರಿಷ್ಠೆ ಮಾಯಾವತಿ ಮೈಸೂರಿಗೆ ಆಗಮಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬಿಎಸ್ ಪಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಲು ಆರಂಭಿಸಿದ್ದಾರೆ ಎಂದು ಬಿಎಸ್ ಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಎಸ್ ಪಿ ತನ್ನ ಸ್ವಂತ ಶಕ್ತಿಯಿಂದ ಬೆಳೆದುಕೊಂಡು ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲ ನೀಡುವ ಮೂಲಕ ರಾಜ್ಯ ಬಿಎಸ್ ಪಿ ಸಮ್ಮಿಶ್ರ ಸರಕಾರ ನಿರ್ಮಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ನೆರವಾಗಿತ್ತು. ಒಂದು ವೇಳೆ ಬಿಎಸ್ ಪಿ, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇರುತ್ತಿದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿತ್ತು ಎನ್ನುವುದು ಸತ್ಯವಾದ ವಿಚಾರವಾದರೂ, ಈ ವಿಚಾರವನ್ನು ತಿರುಚಿರುವ ಕಾಂಗ್ರೆಸಿಗರು, ಬಿಎಸ್ ಪಿ ರಾಜ್ಯದಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ, ಅದೂ ಜೆಡಿಎಸ್ ನ ಬೆಂಬಲದಿಂದ ಎಂದು ಹೇಳುತ್ತಿದೆ. ಜೊತೆಗೆ ಎನ್.ಮಹೇಶ್ ಜೆಡಿಎಸ್ ನ ಬೆಂಬಲವಿಲ್ಲದೇ ಗೆಲ್ಲುತ್ತಿರಲಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಆ ರೀತಿಯಾಗಿಯೇ ನೋಡುವುದಿದ್ದರೂ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್-ಬಿಎಸ್ ಪಿ ಬಿಟ್ಟರೆ ಬೇರಾವುದೇ ಪಕ್ಷಗಳು ಪ್ರಬಲವಾಗಿಲ್ಲ. ಜೆಡಿಎಸ್ ಕೊಳ್ಳೇಗಾಲದಲ್ಲಿ 1% ಕೂಡ ಇಲ್ಲ ಎಂದು ಕಳೆದ ಚುನಾವಣೆಯ ಸಂದರ್ಭದಲ್ಲಿ ಇದೇ ಕಾಂಗ್ರೆಸಿಗರು ಆರೋಪಿಸಿದ್ದರು. ಅಲ್ಲದೇ ಎನ್.ಮಹೇಶ್ ಕೊಳ್ಳೇಗಾಲದಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಆ ಸಂದರ್ಭದಲ್ಲಿಯೂ ಎನ್.ಮಹೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವುದು ಕಂಡು ಬಂದಿತ್ತು. ಇದು ಕಾಂಗ್ರೆಸ್ ತನ್ನ ಸಂದರ್ಭಕ್ಕೆ ತಕ್ಕ ಬಣ್ಣ ಬದಲಾಯಿಸುವಿಕೆಯ ಗುಣವನ್ನು ತೋರಿಸಿಕೊಡುತ್ತಿದೆ ಎನ್ನುವ ಅಭಿಪ್ರಾಯ ಸೃಷ್ಟಿಯಾಗಲು ಕಾರಣವಾಗಿದೆ.

ಅಪಪ್ರಚಾರವೇ ಕಾಂಗ್ರೆಸ್ ನ ಬಂಡವಾಳ?

ದೇಶಾದ್ಯಂತ ಕಾಂಗ್ರೆಸ್ ಈವರೆಗೂ ಅಪಪ್ರಚಾರಗಳ ಮೂಲಕವೇ ಅಧಿಕಾರ ಹಿಡಿದಿದೆ ಎನ್ನುವ ಆರೋಪಗಳು ಇದೀಗ ಸತ್ಯದ ಸನಿದಲ್ಲೇ ಇದೆ ಎಂದು ಚರ್ಚೆಗೊಳಗಾಗುತ್ತಿದೆ. ಅದರಲ್ಲೂ ಅಪಪ್ರಚಾರ ಮಾಡುವ ಮೂಲಕ ರಾಜ್ಯದಲ್ಲಿ ರಾಜಕೀಯ ಗೊಂದಲಗಳನ್ನು ಸೃಷ್ಟಿಸುವಲ್ಲಿ ಕಾಂಗ್ರೆಸ್ ನಾಯಕರಿಗಿಂತಲೂ ಒಂದು ಕೈ ಹೆಚ್ಚು ಎನ್ನುವಷ್ಟು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಇದೀಗ ತನ್ನ ಈ ಪ್ರತಿಭೆಯನ್ನು ಬಿಎಸ್ ಪಿಯ ಮೇಲೆ ಪ್ರಯೋಗ ಮಾಡಲು ಹೊರಟಿದೆ., ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಎಸ್ ಪಿಯ ಮತಗಳು ನಿರ್ಣಾಯಕ ಹಂತದಲ್ಲಿದೆ ಎನ್ನುವ ಸತ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಣೆಗಳು ಮೂಡಿ ಬಂದಿವೆ. ಮಾಯಾವತಿ ಅವರು ಕರ್ನಾಟಕಕ್ಕೆ ಆಗಮಿಸಿದ ಬಳಿಕ ರಾಜ್ಯ ಬಿಎಸ್ ಪಿ ಕಾರ್ಯಕರ್ತರ ಚಟುವಟಿಕೆಗಳು ಹೆಚ್ಚಿವೆ. ಕಾರ್ಯಕರ್ತರು ಉತ್ಸಾಹದಿಂದ ಬಿಎಸ್ ಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರ ಮುಗಿಯುವವರೆಗೂ ನಾವು ಮನೆಗೆ ಹೋಗುವುದಿಲ್ಲ ಎಂದು ಹಲವಾರು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಬರೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಯೂಟ್ಯೂಬ್ ಚಾನೆಲ್ ಗಳನ್ನು ಬಳಸಿಕೊಂಡು ಬಿಎಸ್ ಪಿ ವಿರುದ್ಧ ವ್ಯವಸ್ಥಿತ ಅಪಪ್ರಚಾರಗಳನ್ನು ನಡೆಸುವ ಮೂಲಕ ಕಾರ್ಯಕರ್ತರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಎನ್.ಮಹೇಶ್ ವಿರುದ್ಧ ಕಾರ್ಯಕರ್ತರನ್ನು ಎತ್ತಿಕಟ್ಟಲು ಪ್ರಯತ್ನ

ಬಿಎಸ್ ಪಿಯ ರಾಜ್ಯ ಪ್ರಭಾವಿ ನಾಯಕರಾಗಿರುವ ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲದ ಹಾಲಿ ಶಾಸಕ ಎನ್.ಮಹೇಶ್ ಅವರು ಕರ್ನಾಟಕ ಬಿಎಸ್ ಪಿಯ ಆಧಾರ ಸ್ತಂಭವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಎಸ್ ಪಿಯನ್ನು ಮುಗಿಸಬೇಕಾದರೆ ಎನ್.ಮಹೇಶ್ ಅವರನ್ನೇ ಗುರಿ ಮಾಡಬೇಕು ಎಂದು ನಿರ್ಧರಿಸಿರುವ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕಳೆದ ಹಲವು ಸಮಯಗಳಿಂದಲೂ ಎನ್.ಮಹೇಶ್ ವಿರುದ್ಧ ನಿರಂತರ ಅಪಪ್ರಚಾರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ಬಿಎಸ್ ಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಬಿಎಸ್ ಪಿಯನ್ನು ಗೆಲ್ಲಿಸಲು ಬಿಎಸ್ ಪಿ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್, ಎನ್.ಮಹೇಶ್, ಬಿಎಸ್ ಪಿ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಮಂಡ್ಯದ ಪ್ರಭಾವಿ ನಾಯಕರಾಗಿರುವ, ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಕೃಷ್ಣಮೂರ್ತಿ ಸೇರಿದಂತೆ ವಿವಿಧ ನಾಯಕರು ಪಣತೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಯೂಟ್ಯೂಬ್ ಚಾನೆಲ್ ವೊಂದು  ಎನ್.ಮಹೇಶ್ ಹಾಗೂ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕಾಂಗ್ರೆಸ್ ಐಟಿ ಸೆಲ್ ನಿಂದ ಬಿಎಸ್ ಪಿ ವಿರುದ್ಧ ಅಪಪ್ರಚಾರಕ್ಕೆ ಕಾಂಟ್ರಾಕ್ಟ್?

ಬಿಎಸ್ ಪಿ ಹಾಗೂ ಬಿಎಸ್ ಪಿ ನಾಯಕರ ವಿರುದ್ಧ ಅಪಪ್ರಚಾರ ನಡೆಸಲೆಂದೇ, ಕಳೆದ ಚುನಾವಣೆಯ ವೇಳೆಯಲ್ಲೂ ಕಾಂಗ್ರೆಸ್ ಹಲವು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಕಾಂಟ್ರಾಕ್ಟ್ ವಹಿಸಿತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಚುನಾವಣೆಯಲ್ಲೂ ಇಂತಹ ಆರೋಪವೊಂದು ಕೇಳಿ ಬರುತ್ತಿದ್ದು, ಒಬ್ಬೊಬ್ಬ ವ್ಯಕ್ತಿಗೆ ತಲಾ ಮೊತ್ತ ನಿಗದಿ ಪಡಿಸಲಾಗಿದೆ ಎನ್ನುವ ಆರೋಪಗಳು ಬಿಎಸ್ ಪಿ ವಲಯದಿಂದ ಕೇಳಿ ಬರುತ್ತಿದೆ. ತಾವು ಪಡೆದುಕೊಂಡ ಹಣಕ್ಕೆ ನಿಯತ್ತಾಗಿ ಕೆಲವರು ಬಿಎಸ್ ಪಿ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದು ಬಿಎಸ್ ಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿದ್ದಾರೆ.

ಬಿಜೆಪಿ-ಕಾಂಗ್ರೆಸ್ ತೊರೆದು ಬಿಎಸ್ ಪಿಗೆ ಬಂದವರ ಅವಹೇಳನ

ಈ ಬಾರಿಯ ಚುನಾವಣೆಯಲ್ಲಿ ಬಿಎಸ್ ಪಿ ಹಲವು ಅಚ್ಚರಿಗಳನ್ನು ಸೃಷ್ಟಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ಹಲವು ನಾಯಕರು, ಮಾಜಿ ಶಾಸಕರು, ಕಾರ್ಯಕರ್ತರು ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಈ ಬೆಳವಣಿಗೆ ವಿರೋಧಿ ಪಕ್ಷಗಳಿಗೆ ತೀವ್ರವಾದ ಆತಂಕವನ್ನುಂಟು ಮಾಡಿದೆ. ಈ ಕಾರಣಕ್ಕಾಗಿ ಹಣವಂತರು ಬಿಎಸ್ ಪಿಗೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಮಾತ್ರ ಟಿಕೆಟ್ ಗಳನ್ನು ಕೊಡಲಾಗಿದೆ ಎಂದು ಕಾಂಗ್ರೆಸ್ ಪರ ಯೂಟ್ಯೂಬ್ ಚಾನೆಲ್ ವೊಂದು ಅವಹೇಳನಾಕಾರಿಯಾಗಿ ವರದಿ ಮಾಡಿದೆ ಎಂದು ಬಿಎಸ್ ಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ವಾಸ್ತವವಾಗಿ ಬಿಎಸ್ ಪಿ ಕೆಲವೇ ಸ್ಥಾನಗಳನ್ನು ಮಾತ್ರ ಬೇರೆ ಪಕ್ಷಗಳಿಂದ ಬಂದಿರುವವರಿಗೆ ನೀಡಿದೆ. ಉಳಿದಂತೆ ಬಹುಪಾಲು ಟಿಕೆಟ್ ಗಳನ್ನು ಪಕ್ಷಕಟ್ಟಿ ಬೆಳೆಸಿದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ನೀಡಿದೆ ಎಂದು ಬಿಎಸ್ ಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ದೊಡ್ಡ ರಾಷ್ಟ್ರೀಯ ಪಕ್ಷ ಎಂದು ಹಣೆಪಟ್ಟಿಕಟ್ಟಿಕೊಂಡಿರುವ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರ ಸಣ್ಣತನಗಳಿಂದಾಗಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಬಿಎಸ್ ಪಿಗೆ ಬೆದರುತ್ತಿರುವ ಕಾಂಗ್ರೆಸ್ ನ ನಡೆ ನಿಜಕ್ಕೂ ಅಚ್ಚರಿಯನ್ನು ಸೃಷ್ಟಿ ಮಾಡಿದೆ. ಬಿಎಸ್ ಪಿಯನ್ನು ಸೋಲಿಸಲು ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಪಪ್ರಚಾರವೇ ಬಂಡವಾಳವಾಗಿದ್ದು, ಇದನ್ನು ಬಿಟ್ಟರೆ ಬೇರಾವುದೇ ದಾರಿಗಳು ಕಾಂಗ್ರೆಸ್ ಗಿಲ್ಲ. ಈ ಕಾರಣಕ್ಕಾಗಿಯೇ ಬಿಎಸ್ ಪಿಗೆ ಮತ ನೀಡಿದರೆ, ಬಿಜೆಪಿ ಗೆಲ್ಲುತ್ತದೆ ಎನ್ನುವ ವ್ಯವಸ್ಥಿತವಾದ ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಎಸ್ ಪಿಯು ಕಾಂಗ್ರೆಸಿಗರ ನಿದ್ದೆಗೆಡಿಸಿದೆ. ಈ ಕ್ಷೇತ್ರಗಳಲ್ಲಿ ಬಿಎಸ್ ಪಿಯ ವೇಗವನ್ನು ಸಹಿಸದ ಕಾಂಗ್ರೆಸ್ ಬಿಎಸ್ ಪಿ ವಿರುದ್ಧ ವ್ಯಾಪಕ ಅಪಪ್ರಚಾರಕ್ಕೆ ಇಳಿದಿದೆ ಎನ್ನುವ ವಿಚಾರಗಳು ಸದ್ಯ ಚರ್ಚೆಯಲ್ಲಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಅಪಾಯಕಾರಿ ಅಣಕು ಕಾರ್ಯಾಚರಣೆಗಳಲ್ಲಿ ವಿದ್ಯಾರ್ಥಿಗಳನ್ನು ಬಳಕೆ..
ವಿಪತ್ತಿನ ಸಂದರ್ಭದಲ್ಲಿ ಅದರಿಂದ ಪಾರಾಗುವುದು ಹೇಗೆ ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಒಳ್ಳೆಯ...